ಅಖಂಡ ಭಾರತ ಸಂಕಲ್ಪ ದಿನ ಆಚರಣೆ; ಕೋರ್ಟ್ ಆದೇಶಕ್ಕೂ ಮೊದಲೇ ಹೋರ್ಡಿಂಗ್ ಅಳವಡಿಕೆಗೆ ಹೈಕೋರ್ಟ್ ಅಸಮಾಧಾನ
- by LegalSamachar
- August 13, 2026
- 8 Views
ಬೆಂಗಳೂರು: ಸ್ವಾತಂತ್ರೋತ್ಸದ ಪ್ರಯುಕ್ತ ಮೈಸೂರು ನಗರದ ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ತಿಲಕನಗರದ ವಿವಿಧ ಪ್ರದೇಶಗಳಲ್ಲಿ ಆಗಸ್ಟ್ 14ರ ಸಂಜೆ ಶಾಂತಿಯುತವಾಗಿ ಪಂಜಿನ ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮದ ಮೂಲಕ “ಅಖಂಡ ಭಾರತ ಸಂಕಲ್ಪ ದಿನ” ಆಚರಿಸಲು ಅನುಮತಿ ನಿರಾಕರಿಸಿದ ಪೊಲೀಸರ ಕ್ರಮ ಪ್ರಶ್ನಿಸಿ ಹಿಂದು ಜಾಗರಣ ವೇದಿಕೆ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಶುಕ್ರವಾರಕ್ಕೆ ಮುಂದೂಡಿದೆ.
ಇದೇ ವೇಳೆ, ಅರ್ಜಿ ಸಂಬಂಧ ನ್ಯಾಯಾಲಯ ಆದೇಶ ನೀಡುವ ಮುನ್ನವೇ ಉದ್ದೇಶಿತ ಕಾರ್ಯಕ್ರಮದ ಹೋರ್ಡಿಂಗ್ ಅಳವಡಿಸಿದ್ದ ಆಯೋಜಕರ ಕ್ರಮಕ್ಕೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.
ಕಾರ್ಯಕ್ರಮದ ಆಯೋಜಕರಾದ ಹಿಂದು ಜಾಗರಣ ವೇದಿಕೆ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ರಾಜ್ಯ ಹೆಚ್ಚುವರಿ ಅಡ್ವೋಕೇಟ್ ಜನರಲ್ ಭಾನು ಪ್ರಕಾಶ್ ಅವರು, ಮೆರವಣಿಗೆ ನಡೆಸಲು ಬದಲಿ ಮಾರ್ಗವನ್ನು ಅರ್ಜಿದಾರರಿಗೆ ಸೂಚಿಸಲಾಗಿದೆ. ಆ ಮಾರ್ಗದಲ್ಲಿ ಮೆರವಣಿಗೆ ನಡೆಸಿ ವಾಪಸ್ಸಾಗಬಹುದು. ಮತ್ತೊಂದೆಡೆ, ಹೈಕೋರ್ಟ್ ಇನ್ನೂ ಅನುಮತಿ ನೀಡಿರದಿದ್ದರೂ ಮೆರವಣಿಗೆ ನಡೆಸಲು ಉದ್ದೇಶಿಸಿರುವ ಸ್ಥಳದಲ್ಲಿ ಬುಧವಾರ ಹೋರ್ಡಿಂಗ್/ ಜಾಹೀರಾತು ಫಲಕ ಹಾಕಲಾಗಿದೆ. ಮೆರವಣಿಗೆ ನಡೆಸಲು ಪೊಲೀಸರು ನಿರಾಕರಿಸಿದ್ದಾರೆ. ಆ ಕ್ರಮವನ್ನು ಅರ್ಜಿದಾರರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಜಾಹೀರಾತು ಫಲಕ ಅಳವಡಿಸಲಾಗಿದೆ. ಅದಕ್ಕೆ ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮತಿ ಪಡೆದಿಲ್ಲ ಎಂದು ತಿಳಿಸಿ, ಆ ಕುರಿತ ಪೋಟೋಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.
ಇದರಿಂದ ಆಕ್ರೋಶಗೊಂಡ ನ್ಯಾಯಪೀಠ, ನ್ಯಾಯಾಲಯ ನಿಮ್ಮ ಪರವಾಗಿ ಅನುಮತಿ ನೀಡದಿದ್ದರೂ ಹೇಗೆ ಹೋರ್ಡಿಂಗ್ ಹಾಕಲಾಯಿತು. ಈ ನಡೆಯನ್ನು ಅನುಮತಿಸಲಾಗದು. ಈ ರೀತಿ ಮಾಡಬಾರದು. ನ್ಯಾಯಾಲಯ ಆದೇಶ ನೀಡುವ ಮುನ್ನವೇ ಜಾಹೀರಾತು ಅಳವಡಿಸಿ ನಿಯಮಗಳನ್ನು ಉಲ್ಲಂಘಿಸುತ್ತಿದ್ದೀರಿ. ಈ ನಡೆ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಯ ದುರುಪಯೋಗವಾಗಿದೆ ಹಾಗೂ ಮಿತಿಮೀರಿದ ನಡವಳಿಕೆಯಾಗಿದೆ. ಈ ನೆಲದ ಕಾನೂನಿನ ನೀಡುವ ಬೆಲೆ ಇದೆಯೇ? ಇದು ನಿಮ್ಮ ಮೇಲಿನ ವಿಶ್ವಾಸ ಮೂಡಿಸುತ್ತಿಲ್ಲ. ನ್ಯಾಯಾಲಯದ ವಿವೇಚನಾಧಿಕಾರ ಬಳಸಿ ನಿಮ್ಮ ಪರ ಆದೇಶ ನೀಡುವ ಅಗತ್ಯ ಇಲ್ಲವಾಗಿದೆ ಎಂದು ಅರ್ಜಿದಾರರ ಪರ ವಕೀಲರಿಗೆ ಮೌಖಿಕವಾಗಿ ತಿಳಿಸಿತು.
ಇದೇ ವೇಳೆ, ಮೆರವಣಿಗೆ ನಡೆಸುವ ಮಾರ್ಗದಲ್ಲಿ ಪೊಲೀಸರಿಂದ ಬಂದೋಬಸ್ತ್‌ಗಾಗಿ ಭದ್ರತಾ ಪಡೆಯನ್ನು ನಿಯೋಜಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರ ಪರ ವಕೀಲರು ಮಾಡಿದ ಮನವಿ ಒಪ್ಪದ ನ್ಯಾಯಪೀಠ, ಭದ್ರತಾ ಪಡೆಯನ್ನು ನಿಯೋಜಿಸಲು ಉಂಟಾಗುವ ಖರ್ಚು-ವೆಚ್ಚವನ್ನು ಅರ್ಜಿದಾರರೇ ಭರಿಸಬೇಕು. ಸರ್ಕಾರವೇನು ಮೆರವಣಿಗೆ ನಡೆಸುವಂತೆ ನಿಮಗೆ ಹೇಳುತ್ತಿಲ್ಲ. ನೀವೇ ಮೆರವಣಿಗೆ ಹಮ್ಮಿಕೊಂಡಿದ್ದದೀರಿ. ಯಾರನ್ನು ಭದ್ರತೆ ನಿಯೋಜಿಸಬಾರದು ಎಂದು ಸರ್ಕಾರಕ್ಕೆ ಹೇಳಲಾಗುತ್ತದೆ. ಕಾರ್ಯಕ್ರಮದ ಸಂಪೂರ್ಣ ಹೊಣೆಯನ್ನು ಅರ್ಜಿದಾರರೇ ಹೊರಬೇಕು. ಮೆರವಣಿಗೆ ನಡೆಸಲು ಹಾಗೂ ಮೂರು ಬೆಟಾಲಿನಿಯನ್ ನಿಯೋಜಿಸಲು ನೀವು ಬಯಸಿದರೆ, ಅದಕ್ಕಾಗಿ ಉಂಟಾಗುವ ಖರ್ಚನ್ನು ಅರ್ಜಿದಾರರು ಭರಿಸಬೇಕು ಎಂದು ಮೌಖಿಕವಾಗಿ ಹೇಳಿ ಅರ್ಜಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.
ರಾಷ್ಟ್ರೀಯ ಹಬ್ಬಕ್ಕೂ, ಕೋಮು ವಿಚಾರಕ್ಕೂ ಸಂಬಂಧವೇನು?
ಇದಕ್ಕೂ ಮುನ್ನ ಬೆಳಗಿನ ಕಲಾಪದಲ್ಲಿ ಅರ್ಜಿ ವಿಚಾರಣೆ ನಡೆದಾಗ ಸರ್ಕಾರದ ಪರ ವಕೀಲರು, ಅರ್ಜಿದಾರರು ಮೆರವಣಿಗೆ ನಡೆಸಲು ಉದ್ದೇಶಿಸಿರುವ ಜಾಗವು ಅತಿಸೂಕ್ಷ್ಮ ಪ್ರದೇಶವಾಗಿದೆ. ಇದರಿಂದ, ಆ ಮಾರ್ಗದಲ್ಲಿ ಮೆರವಣಿಗೆ ನಡೆಸಲು ಅನುಮತಿ ನೀಡಲಾಗದು. ಇನ್ನು ಅರ್ಜಿದಾರರ ಮೇಲೆ ಈ ಹಿಂದೆ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.
ಈ ವಾದವನ್ನೊಪ್ಪದ ನ್ಯಾಪೀಠ, ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮೆರವಣಿಗೆ ನಡೆಸಲಾಗುತ್ತಿದೆ. ಸ್ವಾತಂತ್ರ್ಯ ದಿನಾಚರಣೆ ಕೋಮು ವಿಚಾರ ಹೇಗಾಗುತ್ತದೆ. ರಾಷ್ಟ್ರೀಯ ಹಬ್ಬಗಳಿಗೂ ಕೋಮು ವಿಚಾರಕ್ಕೂ ಏನು ಸಂಬಂಧ? ಎಂದು ಪ್ರಶ್ನಿಸಿತ್ತು.
Related Articles
Thank you for your comment. It is awaiting moderation.


Comments (0)