ಅಗತ್ಯ ಸೇವೆಯ ನೆಪದಲ್ಲಿ ನಿಯಮ ಮೀರಲಾಗದು; ಅರಣ್ಯ ಜಮೀನಿನಲ್ಲಿ ಕಸ ಸುರಿಯುತ್ತಿರುವುದಕ್ಕೆ ಹೈಕೋರ್ಟ್ ಆಕ್ರೋಶ
- by Prashanth Basavapatna
- July 23, 2026
- 7 Views
ಬೆಂಗಳೂರು: ಸಂರಕ್ಷಿತ ಅರಣ್ಯ ಜಮೀನಿನಲ್ಲಿ ಕಳೆದ 12 ವರ್ಷಗಳಿಂದ ಘನತ್ಯಾಜ್ಯ ಸುರಿಯುತ್ತಿರುವ ಬೆಂಗಳೂರು ಸಾಲಿಡ್ ವೇಸ್ಟ್ ಮ್ಯಾನೇಜ್ಮೆಂಟ್ ಕಾರ್ಪೋರೇಷನ್ ಲಿಮಿಟೆಡ್ ಸಂಸ್ಥೆಯ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಹೈಕೋರ್ಟ್, ಅಗತ್ಯ ಸೇವೆಯ ನೆಪದಲ್ಲಿ ನಿಯಮಗಳನ್ನು ಮೀರುವಂತಿಲ್ಲ ಎಂದು ತೀಕ್ಷ್ಣವಾಗಿ ನುಡಿದಿದೆ.
ಜತೆಗೆ, ಈ ಸಂಬಂಧ ಸಮಗ್ರ ವಿವರಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿರುವ ನ್ಯಾಯಾಲಯ, ಸರ್ಕಾರದಿಂದ ವರದಿ ಬಂದ ಮೇಲೆ ಸಂಸ್ಥೆಯ ಅಧಿಕಾರಿಗಳು, ಪ್ರತಿನಿಧಿಗಳ ವಿರುದ್ಧ ಯಾವ ರೀತಿ ಕಾನೂನು ಕ್ರಮ ಜರುಗಿಸಬಹುದು ಎಂಬ ಬಗ್ಗೆ ಪರಿಗಣಿಸಲಾಗುವುದು ಎಂದೂ ಹೇಳಿದೆ.
ಬೆಂಗಳೂರು ನಗರ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ 2026ರ ಮೇ 11ರಂದು ಹೊರಡಿಸಿರುವ ಆದೇಶ ರದ್ದುಕೋರಿ ಬಿಬಿಎಂಪಿ (ಜಿಬಿಎ) ಅಧೀನದ ಗುತ್ತಿಗೆದಾರ ಸಂಸ್ಥೇಯಾಗಿರುವ ಬೆಂಗಳೂರು ಸಾಲಿಡ್ ವೇಸ್ಟ್ ಮ್ಯಾನೇಜ್ಮೆಂಟ್ ಕಾರ್ಪೋರೇಷನ್ ಲಿಮಿಟೆಡ್ ಸಂಸ್ಥೆಯ ಪ್ರತಿನಿಧಿಯಾಗಿ ಬಿಬಿಎಂಪಿ ಕೆಂಗೇರಿ ಉಪ ವಲಯದ ಸಹಾಯಕ ಕಾರ್ಯಕಾರಿ ಅಭಿಯಂತರ ಆರ್. ಮಧು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲರು, ಸಹಜ ನ್ಯಾಯ ಪಾಲನೆ ಮಾಡದೇ, ನೋಟಿಸ್ ಸಹ ನೀಡದೇ 30 ದಿನಗಳಲ್ಲಿ ಜಮೀನು ಹಸ್ತಾಂತರ ಮಾಡುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ. ಅಸಲಿಗೆ ಈ ಜಾಗ ಬಿಡಿಎ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣಕ್ಕಾಗಿ ಬಿಬಿಎಂಪಿಗೆ ನೀಡಿತ್ತು ಎಂದರು.
ಆಗ ನ್ಯಾಯಪೀಠ, ಹಾಗಿದ್ದರೆ ಇದು ಬಿಬಿಎಂಪಿಗೆ ಸೇರಿದ ಜಾಗವಾಗುತ್ತದೆ, ಸಮಸ್ಯೆ ಇದ್ದರೆ ಬಿಬಿಎಂಪಿ ಕೋರ್ಟ್ ಗೆ ಬರಬೇಕು. ಜಾಗ ಯಾವುದು ಅಂತ ಬಿಬಿಎಂಪಿ ನಿಮಗೆ ಹೇಳಬೇಕಿತ್ತು. ಅದು ಬಿಟ್ಟು ನೀವು ಕೋರ್ಟ್ಗೆ ಬಂದಿದ್ದೇಕೆ? ಎಷ್ಟು ದಂಡ ಪಾವತಿಸುತ್ತೀರಿ ಹೇಳಿ ಎಂದು ಅರ್ಜಿದಾರರ ಪರ ವಕೀಲರನ್ನು ನ್ಯಾಯಪೀಠ ಕೇಳಿತು. ಈ ಮಧ್ಯೆ, 2014ರಿಂದ ಘಟಕ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಗಮನಿಸಿದ ನ್ಯಾಯಪೀಠ, ನೀವು 2014ರಿಂದ ಅರಣ್ಯ ಜಾಗದಲ್ಲಿ ಕಸ ಹಾಕುತ್ತಿದ್ದೀರಾ ಎಂದು ವಕೀಲರನ್ನು ಪ್ರಶ್ನಿಸಿತು.
ಇದು ಅಗತ್ಯ ಸೇವೆಯ ವಿಷಯವಾಗಿದೆ ಎಂದು ವಕೀಲರು ನೀಡಿದ ಸಮಜಾಯಿಷಿಗೆ ಆಕ್ರೋಶಗೊಂಡ ನ್ಯಾಯಪೀಠ, ಅಗತ್ಯ ಸೇವೆ ನೆಪದಲ್ಲಿ ನಿಯಮಗಳನ್ನು ಮೀರುವಂತಿಲ್ಲ. ಅರಣ್ಯವೂ ಅಗತ್ಯವಲ್ಲವೇ ಎಂದು ಕಟುವಾಗಿ ಪ್ರಶ್ನಿಸಿತು.
ಅಂತಿಮವಾಗಿ, ಈ ಬಗ್ಗೆ ಸಮಗ್ರ ವಿವರಣೆ ನೀಡುವಂತೆ ಸರ್ಕಾರದ ಪರ ವಕೀಲರಿಗೆ ಸೂಚಿಸಿದ ನ್ಯಾಯಪೀಠ, ವರದಿ ಬಂದ ಬಳಿಕ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಯಾವ ಕಾನೂನು ಕ್ರಮ ಜರಗಿಸಬೇಕು ಎಂಬುದನ್ನು ಪರಿಶೀಲಿಸಲಾಗುವುದು ಎಂದು ಹೇಳಿ ಅರಣ್ಯ ಇಲಾಖೆ, ಬೆಂಗಳೂರು ನಗರ ವಲಯ ಉಪ ಸಂರಕ್ಷಣಾಧಿಕಾರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಆಗಸ್ಟ್ 6ಕ್ಕೆ ಮುಂದೂಡಿತು.
ಪ್ರಕರಣವೇನು?
ಘನತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣಕ್ಕೆ ಕೆಂಗೇರಿ ಹೋಬಳಿಯ ಲಿಂಗಧೀರನಹಳ್ಳಿ ಗ್ರಾಮದ ಸರ್ವೆ ನಂಬರ್ 16/1 ಹಾಗೂ ಬಿಎಂ ಕಾವಲ್ ಗ್ರಾಮದ ಸರ್ವೆ ನಂಬರ್ 92ರಲ್ಲಿ 1 ಎಕರೆ 26 ಗುಂಟೆ ಜಾಗವನ್ನು ಬಿಡಿಎ ಬಿಬಿಎಂಪಿಗೆ ಹಸ್ತಾಂತರಿಸಿತ್ತು. 2014-15ರಿಂದ ಈ ಜಾಗದಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕ ಇದೆ. ಈ ಮಧ್ಯೆ ಅರಣ್ಯ ಜಮೀನು ಒತ್ತುವರಿ ಎಂದು ಆರೋಪಿಸಿ, 30 ದಿನಗಳಲ್ಲಿ ಜಾಗವನ್ನು ಹಸ್ತಾಂತರಿಸುವಂತೆ ಬೆಂಗಳೂರು ನಗರ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ 2026ರ ಮೇ 11ರಂದು ಆದೇಶ ಹೊರಡಿಸಿದ್ದರು. ಅದನ್ನು ಪ್ರಶ್ನಿಸಿ ಬೆಂಗಳೂರು ಸಾಲಿಡ್ ವೇಸ್ಟ್ ಮ್ಯಾನೇಜ್ಮೆಂಟ್ ಕಾರ್ಪೋರೇಷನ್ ಲಿಮಿಟೆಡ್ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿದೆ.
Related Articles
Thank you for your comment. It is awaiting moderation.


Comments (0)