ಅತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣ; ಮೂವರು ಆರೋಪಿಗಳ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ
- by Ramya B T
- July 17, 2026
- 24 Views
ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಅತ್ಯಾಚಾರಕ್ಕೆ ಒಳಗಾಗಿದ್ದಾರೆನ್ನಲಾದ ಸಂಸತ್ರಸ್ತೆಯನ್ನು ಅಪಹರಿಸಿದ ಆರೋಪದಲ್ಲಿ ಕೆ.ಆರ್.ನಗರದ ಮೂವರು ಆರೋಪಿಗಳ ವಿರುದ್ಧದ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಅತ್ಯಾಚಾರ ಸಂತ್ರಸ್ತೆಯನ್ನು ಅಪಹರಿಸಿದ ಆರೋಪಕ್ಕೆ ಸಂಬಂಧಿಸಿದ ವಿಚಾರಣಾ ಪ್ರಕ್ರಿಯೆ ರದ್ದು ಕೋರಿ ಕೆ.ಆರ್. ನಗರದ ಆರೋಪಿಗಳಾದ ಸುಜಯ್, ಎಚ್.ಎನ್. ಮಧು ಹಾಗೂ ಎಚ್.ಡಿ. ಮನುಗೌಡ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಜಾಗೊಳಿಸಿದೆ.
ಅರ್ಜಿದಾರರ ವಿರುದ್ಧ ತನಿಖಾಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಅದರಲ್ಲಿ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಈ ಮೂವರೂ ವಹಿಸಿರುವ ಪ್ರತಿಯೊಂದು ಪಾತ್ರದ ಬಗ್ಗೆ ವಿವರವಾಗಿ ಹೇಳಲಾಗಿದೆ. ಅದರ ಬಗ್ಗೆ ವಿಚಾರಣಾ ನ್ಯಾಯಾಲಯವೇ ಪೂರ್ಣಪ್ರಮಾಣದ ವಿಚಾರಣೆ ನಡೆಸಿ ಅರ್ಜಿದಾರರು ಅಪರಾಧ ಎಸಗಿದ್ದಾರೋ ಅಥವಾ ಇಲ್ಲವೋ ಎಂಬುದನ್ನು ತೀರ್ಮಾನ ಕೈಗೊಳ್ಖಬೇಕಾಗುತ್ತದೆ ಹೊರತು ಹೈಕೋರ್ಟ್ ನಿರ್ಧಾರ ಕೈಗೊಳ್ಳಲಾಗುವುದಿಲ್ಲ. ಆದ್ದರಿಂದ ಅರ್ಜಿ ವಜಾಗೊಳಿಸಲಾಗುತ್ತಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.
ಪ್ರಕರಣದ ಹಿನ್ನೆಲೆ:
ಅಪಹರಣ ಪ್ರಕರಣ ಸಂಬಂಧ 2024ರ ಮೇ 2ರಂದು ದೂರು ದಾಖಲಾಗಿತ್ತು. ನಂತರ ಪ್ರಕರಣದ ತನಿಖೆ ನಡೆಸಿದ್ದ ತನಿಖಾಧಿಕಾರಿಗಳು ಎಲ್ಲ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಆರೋಪಗಳನ್ನು ಕೈ ಬಿಡಲು ಕೋರಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ಇದರಿಂದ, ತಮ್ಮ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದು ಕೋರಿ ಆರೋಪಿಗಳು ಹೈಕೋರ್ಟ್ ಮೊರೆ ಹೋಗಿದ್ದರು.
ಅರ್ಜಿದಾರರ ಪರ ವಕೀಲರು, ಸಂತ್ರಸ್ತೆಯನ್ನು ಹಳ್ಳಿಯಿಂದ ಸಾಲಿಗ್ರಾಮದ 8ನೇ ಆರೋಪಿಯ ಮನೆಗೆ ಕಾರಿನಲ್ಲಿ ಕರೆದುತಂದು ಡ್ರಾಪ್ ಮಾಡಿದ್ದು ಬಿಟ್ಟರೆ ಅಪಹರಣ ಮಾಡಿದ ಬಗ್ಗೆ ಯಾವೊಂದು ಆರೋಪ ಅರ್ಜಿದಾರರ ಮೇಲಿಲ್ಲ. ಅಪಹರಣಕ್ಕೆ ಪಿತೂರಿ ನಡೆಸಿದ ಹಾಗೂ ಎರಡನೇ ಆರೋಪಿಯೊಂದಿಗೆ ಸಂಭಾಷಣೆ ನಡೆಸಿದ ಬಗ್ಗೆಯೂ ಸಾಕ್ಷ್ಯಾಧಾರಗಳಿಲ್ಲ. ಆದ್ದರಿಂದ, ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಿದ್ದರು.
ಪ್ರಕರಣದ ವಿಶೇಷ ಸರ್ಕಾರಿ ಅಭಿಯೋಜಕರಾದ ಬಿ.ಎನ್. ಜಗದೀಶ್ ಅವರು, ಆರೋಪಿಗಳು ಪ್ರಕರಣದ ಇತರ ಆರೋಪಿಗಳೊಂದಿಗೆ ಫೋನ್ ಮೂಲಕ ಸಂಭಾಷೆ ನಡೆಸಿದ ಬಗ್ಗೆ ದಾಖಲೆಗಳಿವೆ. ದೋಷಾರೋಪ ಪಟ್ಟಿಯಲ್ಲಿ ಪ್ರಕರಣದಲ್ಲಿ ಅರ್ಜಿದಾರರು ವಹಿಸಿದ ಪ್ರತಿಯೊಂದು ಪಾತ್ರದ ಬಗ್ಗೆ ಸಪೂರ್ಣ ವಿವರಣೆ ಹಾಗೂ ದಾಖಲೆಗಳಿವೆ. ಆದ್ದರಿಂದ, ಅರ್ಜಿ ವಜಾಗೊಳಿಸಬೇಕು ಎಂದು ಮನವಿ ಮಾಡಿದ್ದರು.
Related Articles
Thank you for your comment. It is awaiting moderation.


Comments (0)