ಆನ್‌ಲೈನ್ ವಂಚನೆ ಪ್ರಕರಣಗಳಲ್ಲಿ ಫ್ರೀಜ್ ಆಗಿರುವ ಬ್ಯಾಂಕ್ ಖಾತೆದಾರೊಂದಿಗೆ ಸಭೆ ನಡೆಸಲು ಹೈಕೋರ್ಟ್ ನಿರ್ದೇಶನ

ಬೆಂಗಳೂರು: ಆನ್‌ಲೈನ್ ವಂಚನೆ ಪ್ರಕರಣಗಳಲ್ಲಿ ಬ್ಯಾಂಕ್ ಖಾತೆಗಳ ಸ್ಥಗಿತದಿಂದ (ಫ್ರೀಜ್) ಉಂಟಾಗಿರುವ ಸಮಸ್ಯೆ ಪರಿಹರಿಸಲು ‌ಜುಲೈ 16ರಂದು ಖಾತೆದಾರರೊಂದಿಗೆ ಸಭೆ ನಡೆಸಿ, ಪರಿಹಾರ ಕಲ್ಪಿಸುವಂತೆ ರಾಜ್ಯ ಕಮಾಂಡ್ ಸೆಂಟರ್ ಮುಖ್ಯಸ್ಥ ಡಾ. ಪ್ರಣಬ್ ಮೊಹಾಂತಿ ಅವರಿಗೆ ಹೈಕೋರ್ಟ್ ನಿರ್ದೇಶಿಸಿದೆ.

ಆನ್‌ಲೈನ್ ವಂಚನೆ ಆರೋಪದಲ್ಲಿ ಸ್ಥಗಿತಗೊಳಿಸಲಾಗಿರುವ ಬ್ಯಾಂಕ್ ಖಾತೆಯನ್ನು ಮರುಚಾಲನೆಗೊಳಿಸಲು (ಡೀಫ್ರೀಜ್) ಪೊಲೀಸರು ಹಾಗೂ ಬ್ಯಾಂಕ್‌ಗಳಿಗೆ ನಿರ್ದೇಶಿಸಬೇಕು ಎಂದು ಕೋರಿ ಸುಧೀರ್ ಚಿಕ್ಕಳ್ಳಿ ಎಂಬಾತ ಸೇರಿ 31 ಮಂದಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ.

ಇದಕ್ಕೂ ಮುನ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾದ ಸೈಬರ್ ಕಮಾಂಡ್ ಸೆಂಟರ್ ಮುಖ್ಯಸ್ಥ ಡಾ.ಪ್ರಣಬ್ ಮೊಹಾಂತಿ, ಆನ್‌ಲೈನ್ ವಂಚನೆ ಆರೋಪದ‌ ಮೇಲೆ ಬ್ಯಾಂಕ್ ಖಾತೆ ಸ್ಥಗಿತ ಸಂಬಂಧ ಹಲವು ಜನರ ಅಹವಾಲುಗಳನ್ನು ಸ್ವೀಕರಿಸಲಾಗಿದೆ. ಅವರ ಸಮಸ್ಯೆ ಪರಿಹರಿಸಲು ಯತ್ನಿಸುತ್ತಿದ್ದೇವೆ. ಬೇರೆ ರಾಜ್ಯದ ಠಾಣೆಗಳೊಂದಿಗೆ ಸಮನ್ವಯಕ್ಕೂ ಪ್ರಯತ್ನಿಸಲಾಗುತ್ತಿದೆ. ಇಂತಹ ಸಮಸ್ಯೆ ಬಗೆಹರಿಸಲು ಈಗಾಗಲೇ ನೋಡೆಲ್ ಅಧಿಕಾರಿಗಳನ್ನು ನೇಮಕ‌ ಮಾಡಲಾಗಿದೆ. ಈ‌ ತೊಂದರೆಗಳನ್ನು ಪರಿಹರಿಸಲು ಕಾರ್ಯಯೋಜನೆ ರೂಪಿಸಲಾಗುತ್ತಿದೆ ಎಂದು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.

ಇದನ್ನು‌ ಪರಿಗಣಿಸಿದ ನ್ಯಾಯಪೀಠ, ಜುಲೈ 16ರಂದು ಬೆಳಗ್ಗೆ 11ರಿಂದ ಸಂಜೆ 6.30ರವರೆಗೆ ಸಿಐಡಿ ಕಚೇರಿಯಲ್ಲಿ ಅರ್ಜಿದಾರರೊಂದಿಗೆ ಸಭೆ ನಡೆಸಿ ಚರ್ಚಿಸಬೇಕು. ಅವರ ಅಹವಾಲು ಆಲಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.

ಅರ್ಜಿದಾರರ ಮನವಿ:
ಆನ್‌ಲೈನ್ ವಂಚನೆ ಮಾಡಿದ ವ್ಯಕ್ತಿಯು ನಮ್ಮ ಬ್ಯಾಂಕ್ ಖಾತೆಗೆ ಹಣ ಹಾಕಿದ್ದಾರೆ. ಹಣ ಕಳೆದುಕೊಂಡವರು ಪೊಲೀಸರಿಗೆ ದೂರು ನೀಡಿದ್ದಾರೆ. ಆ ದೂರು ಆಧರಿಸಿ ಪೊಲೀಸರು ಬ್ಯಾಂಕ್‌ಗಳಿಗೆ ಮಾಹಿತಿ ನೀಡಿದ್ದಾರೆ. ಬ್ಯಾಂಕಿನವರು ನಮ್ಮ ಖಾತೆಯನ್ನು ಸ್ಥಗಿತಗೊಳಿಸಿದ್ದಾರೆ.‌ ವಾಸ್ತವವಾಗಿ ನಾವು ಆನ್‌ಲೈನ್ ವಂಚನೆ ಮಾಡಿಲ್ಲ. ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಬ್ಯಾಂಕ್ ಖಾತೆ ಸ್ಥಗಿತ ಮಾಡಿರುವುದರಿಂದ ನಾವು ಬ್ಯಾಂಕಿಂಗ್ ಚಟುವಟಿಕೆ ಮಾಡಲಾಗುತ್ತಿಲ್ಲ. ಖಾತೆಯಿಂದ ಹಣ ತೆಗೆಯಲು ಸಾಧ್ಯವಾಗದೆ ಸಾಕಷ್ಟು ತೊಂದರೆ ಉಂಟಾಗಿದೆ. ಆದ್ದರಿಂದ, ಸ್ಥಗಿತಗೊಳಿಸಲಾಗಿರುವ ಬ್ಯಾಂಕ್ ಖಾತೆಗಳನ್ನು ಡೀಫ್ರೀಜ್ ಮಾಡಲು ಪೊಲೀಸರು ಹಾಗೂ ಬ್ಯಾಂಕ್ ಅಧಿಕಾರಿಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

Related Articles

Comments (0)

Leave a Comment