ಇತಿಹಾಸ ಪ್ರಸಿದ್ಧ ಯಲ್ಲಮ್ಮ ದೇವಿ ದೇವಸ್ಥಾನವಿನ್ನು ಸಾರ್ವಜನಿಕ ಟ್ರಸ್ಟ್; ಹೈಕೋರ್ಟ್ ಆದೇಶ
- by LegalSamachar
- July 10, 2026
- 6 Views
ಬೆಂಗಳೂರು/ಧಾರವಾಡ: ಬೆಳಗಾವಿಯ ಐತಿಹಾಸಿಕ ಯಲ್ಲಮ್ಮ ದೇವಿ ದೇವಸ್ಥಾನವನ್ನು ಸಾರ್ವಜನಿಕ ಟ್ರಸ್ಟ್ ಎಂದು ಘೋಷಿಸಿರುವ ಹೈಕೋರ್ಟ್, 1950ರ ಬಾಂಬೆ ಪಬ್ಲಿಕ್ ಟ್ರಸ್ಟ್ (ಬಿಪಿಟಿ) ಕಾಯ್ದೆಯಡಿ ಸಾರ್ವಜನಿಕ ಟ್ರಸ್ಟ್ ಆಗಿ ನೋಂದಾಯಿಸಲು ದೇವಾಲಯವು ಎಲ್ಲ ಅವಶ್ಯಕತೆಗಳನ್ನು ಪೂರೈಸಿದೆ. ಆದ್ದರಿಂದ, ನೋಂದಣಿ ಮಾಡಲೇಬೇಕು ಎಂದು ಆದೇಶಿಸಿದೆ.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಜಲಾಲ್‌ಪುರದ ಮಲ್ಲಾರಿ ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಪೀಠದಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಬಿ. ಗೀತಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಕಾಯ್ದೆಯ ನಿಬಂಧನೆಗಳ ಪ್ರಕಾರ, ಹಿಂದು ಸಾರ್ವಜನಿಕರು ಹಕ್ಕಿನ ವಿಷಯವಾಗಿ ಬಳಸುತ್ತಿರುವ ಪ್ರಾಚೀನ ದೇವಾಲಯವು ಸಾರ್ವಜನಿಕ ಟ್ರಸ್ಟ್ ಆಗಿ ನೋಂದಾಯಿಸಲು ಅರ್ಹವಾಗಿದೆ ಎಂದಿರುವ ನ್ಯಾಯಪೀಠ, ದೇವಾಲಯವನ್ನು ಸಾರ್ವಜನಿಕ ಟ್ರಸ್ಟ್ ಎಂದು ಗುರುತಿಸಲು ನಿರಾಕರಿಸಿ ಧಾರ್ಮಿಕ ದತ್ತಿ ಆಯುಕ್ತರು ಮತ್ತು ಬೆಳಗಾವಿ ಜಿಲ್ಲಾ ನ್ಯಾಯಾಲಯ ಹೊರಡಿಸಿದ್ದ ಆದೇಶಗಳನ್ನು ರದ್ದುಪಡಿಸಿದೆ.
ಹೈಕೋರ್ಟ್ ಆದೇಶವೇನು?
ಶ್ರೀ ಯಲ್ಲಮ್ಮ ದೇವಿ ದೇವಾಲಯವು ಪ್ರಾಚೀನ ದೇವಾಲಯ ಹಾಗೂ ಸಾರ್ವಜನಿಕ ಧಾರ್ಮಿಕ ಆರಾಧನಾ ಸ್ಥಳವಾಗಿದೆ. ಹಿಂದು ಸಮುದಾಯಕ್ಕೆ ಭಕ್ತಾಧಿಗಳ ಅನುಕೂಲದಲ್ಲಿ ತೊಡಗಿಸಿಕೊಂಡಿದೆ ಮತ್ತು ಹಿಂದು ಸಮುದಾಯದ ಜನರು ದೇವರಿಗೆ ತಮ್ಮ ಸಮರ್ಪಣೆಗಳನ್ನು ಸಲ್ಲಿಸಲು ಮತ್ತು ದೇವರನ್ನು ಪೂಜಿಸಲು ಅದನ್ನು ಹಕ್ಕಿನಂತೆ ಬಳಸುವ ಹಕ್ಕನ್ನು ಹೊಂದಿದ್ದಾರೆ. ಆದ್ದರಿಂದ, ಬಿಪಿಟಿ ಕಾಯ್ದೆಯ ಸೆಕ್ಷನ್ 2(17)ರ ಅಂಶಗಳನ್ನು ಪೂರೈಸಲಾಗುತ್ತಿರುವುದರಿಂದ ದೇವಾಲಯವು ಬಿಪಿಟಿ ಕಾಯಿದೆಯ ಸೆಕ್ಷ ನ್ 2(17) ರ ಪ್ರಕಾರ ‘ದೇವಾಲಯ’ದ ವ್ಯಾಖ್ಯಾನದಡಿಯಲ್ಲಿ ಬರುತ್ತದೆ ಎಂದು ಹೈಕೋರ್ಟ್ ಹೇಳಿದೆ.
ಬಿಪಿಟಿ ಕಾಯ್ದೆಯ ಸೆಕ್ಷನ್ 2(13)ರ ಪ್ರಕಾರ ಟ್ರಸ್ಟ್ ಒಂದು ಅಂತರ್ಗತ ವ್ಯಾಖ್ಯಾನವಾಗಿದೆ. ಇದು ದೇವಾಲಯಗಳನ್ನೂ ಒಳಗೊಂಡಿದೆ. ಬಿಪಿಟಿ ಕಾಯ್ದೆಯ ಸೆಕ್ಷನ್ 2(17)ರ ಪ್ರಕಾರ ’ದೇವಾಲಯ’ ಅಸ್ತಿತ್ವದಲ್ಲಿದ್ದರೆ, ಅದು ಸೆಕ್ಷನ್ 2(13)ರ ಪ್ರಕಾರ ಸಾರ್ವಜನಿಕ ಟ್ರಸ್ಟ್ ಆಗಿರುತ್ತದೆ ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಕೆಲವು ಕುಟುಂಬಗಳು ಪೂಜೆ ಮಾಡಲು ಆನುವಂಶಿಕ ಹಕ್ಕುಗಳನ್ನು ಹೊಂದಿರುವುದರಿಂದ ದೇವಾಲಯವು ಖಾಸಗಿ ಆಸ್ತಿಯಾಗಿದೆ ಎಂಬ ವಾದವನ್ನು ತಿರಸ್ಕರಿಸಿರುವ ನ್ಯಾಯಾಲಯ, ದೇವಾಲಯವು ಪ್ರಾಚೀನವಾದುದು ಎಂದು ಒಪ್ಪಿಕೊಳ್ಳಲಾಗಿದೆ ಹಾಗೂ ಸಾರ್ವಜನಿಕರಿಗೆ ಪ್ರವೇಶಿಸಲು ಮತ್ತು ಪೂಜೆ ಸಲ್ಲಿಸಲು ಹಕ್ಕಿದೆ. ಬಿಪಿಟಿ ಕಾಯ್ದೆಯಡಿ ದೇವಾಲಯವನ್ನು ಸಾರ್ವಜನಿಕ ಟ್ರಸ್ಟ್ ಆಗಿ ನೋಂದಾಯಿಸಬೇಕು ಎಂದು ಆದೇಶಿಸಿದೆ.
ಇದೇ ವೇಳೆ, ಅರ್ಚಕರು ಟ್ರಸ್ಟಿಗಳಾಗಲು ಸಾಧ್ಯವಿಲ್ಲ ಎಂಬ ಸಹಾಯಕ ದತ್ತಿ ಆಯುಕ್ತರ ಅಭಿಪ್ರಾಯವನ್ನು ತಿರಸ್ಕರಿಸಿರುವ ನ್ಯಾಯಾಲಯ, ಅರ್ಚಕರು ಅಥವಾ ಪೂಜಾರಿಗಳು ಟ್ರಸ್ಟಿಗಳಾಗಲು ನಿರ್ಬಂಧವಿಲ್ಲ. ದೇವಾಲಯದ ಅರ್ಚಕರು ದೇವಾಲಯದ ಟ್ರಸ್ಟಿಯಾಗಲು ಸಾಧ್ಯವಿಲ್ಲ ಎಂಬ ಯಾವುದೇ ನಿಯಮವಿಲ್ಲ. ಪೂಜಾರಿಗಳು ಭಕ್ತರ ಪರವಾಗಿ ಪೂಜೆ ಸಲ್ಲಿಸುತ್ತಾರೆ ಮತ್ತು ‘ಭಕ್ತರು ಮತ್ತು ದೇವರ ನಡುವೆ ಮಧ್ಯವರ್ತಿಗಳಾಗಿ’ ಕಾರ್ಯನಿರ್ವಹಿಸುತ್ತಾರೆ. ಅವರನ್ನು ಟ್ರಸ್ಟಿಗಳನ್ನಾಗಿ ಮಾಡಿದರೆ, ಅವರು ದೇವಾಲಯದ ಆಧಾರಸ್ತಂಭಗಳಾಗಿರುವುದರಿಂದ ದೇವಾಲಯದ ಒಟ್ಟಾರೆ ಅಭಿವೃದ್ಧಿಗೆ ಖಂಡಿತವಾಗಿಯೂ ಸಹಾಯವಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಈ ಹಿನ್ನೆಲೆಯಲ್ಲಿ 1994ರ ಮೂಲ ವಿಚಾರಣಾ ಅರ್ಜಿಯಲ್ಲಿ ಹೆಸರಿಸಲಾದ ಟ್ರಸ್ಟಿಗಳನ್ನು ಮತ್ತು ಅರ್ಚಕರ ಎರಡು ಕುಟುಂಬಗಳಿಂದ ತಲಾ ಒಬ್ಬ ವ್ಯಕ್ತಿಯನ್ನು ದೇವಾಲಯದ ಟ್ರಸ್ಟಿಗಳೆಂದು ಪರಿಗಣಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
Related Articles
Thank you for your comment. It is awaiting moderation.


Comments (0)