ಮಗುವಿನ ಜವಾಬ್ದಾರಿ ತ್ಯಜಿಸಿದ ತಂದೆ, ಭೇಟಿಯ ಹಕ್ಕು ಪಡೆಯಲಾಗದು; ಹೈಕೋರ್ಟ್
- by Jagan Ramesh
- July 6, 2026
- 7 Views
ಬೆಂಗಳೂರು: ಪೋಷಕರ ಹಕ್ಕುಗಳನ್ನ ಅವರ ಜವಾಬ್ದಾರಿಗಳಿಂದ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಮಗುವಿನ ಜವಾಬ್ದಾರಿಯನ್ನು ಸ್ವಯಂಪ್ರೇರಣೆಯಿಂದ ತ್ಯಜಿಸಿದ ತಂದೆ ಆನಂತರ ಮಗುವಿನ ಭೇಟಿ ಹಕ್ಕುಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಆದೇಶಿಸಿದೆ.
ಮಾಜಿ ಪತಿಗೆ ಮಗನ ಭೇಟಿಯ ಹಕ್ಕು ನೀಡಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಪಿ. ಶ್ರೀಸುಧಾ ಅವರಿದ್ದ ಏಕಸದಸ್ಯಪೀಠ, ಆರ್ಥಿಕವಾಗಿ ಹಾಗೂ ಭಾವನಾತ್ಮಕವಾಗಿ ಮಗುವಿನ ಹೊಣೆಗಾರಿಕೆಯನ್ನು ತೆಗೆದುಕೊಳ್ಳಲು ಸಿದ್ಧವಿರದ ತಂದೆ, ಮಕ್ಕಳ ಜೀವನದಲ್ಲಿ ಮತ್ತೆ ಮಧ್ಯೆಪ್ರವೇಶಿಸಿ ಹಕ್ಕು ಮಂಡಿಸಲಾಗದು. ಕರ್ತವ್ಯದಿಂದ ನುಣುಚಿಕೊಂಡ ತಂದೆ, ಮಗುವಿನ ಭೇಟಿಯ ಹಕ್ಕು ಕೋರಲಾಗದು ಎಂದು ಹೇಳಿದೆ.
ಹಾಲಿ ಪ್ರಕರಣದಲ್ಲಿ ವಿಚ್ಛೇದನದ ನಂತರ ಮಗುವಿನ ಪಾಲನೆಯಲ್ಲಿ ತಂದೆ ಯಾವುದೇ ಆಸಕ್ತಿ ತೋರಿಸಿಲ್ಲ ಎಂದು ತಾಯಿ ನಿರಂತರವಾಗಿ ಹೇಳುತ್ತಿದ್ದಾರೆ. ಆದರೆ, ಆ ಸಂಗತಿಗಳನ್ನು ಸರಿಯಾಗಿ ಪರಿಗಣಿಸದೆ ಕೌಟುಂಬಿಕ ನ್ಯಾಯಾಲಯ ತಂದೆಗೆ ಮಗುವಿನ ಭೇಟಿ ಹಕ್ಕುಗಳನ್ನು ನೀಡಿದೆ ಎಂದು ಹೈಕೋರ್ಟ್ ಹೇಳಿದೆ. ಜತೆಗೆ ಮಗುವಿನ ಶಿಕ್ಷಣದ ಶೇ.50 ಪ್ರಮಾಣದ ವೆಚ್ಚವನ್ನು ತಂದೆಯೇ ಭರಿಸಬೇಕೆಂದು ನಿರ್ದೇಶಿಸಿದೆ.
ಮಧ್ಯಸ್ಥಿಕೆಯ ಇತ್ಯರ್ಥದ ಭಾಗವಾಗಿ ತಂದೆ ತನ್ನ ಭೇಟಿ ಹಕ್ಕುಗಳನ್ನು ಪ್ರಜ್ಞಾಪೂರ್ವಕವಾಗಿ ತ್ಯಜಿಸಿದ್ದಾರೆ ಹಾಗೂ ಕೇವಲ ಒಂದು ವರ್ಷದ ನಂತರ ಹೊಸ ಮೊಕದ್ದಮೆಯ ಮೂಲಕ ಹೊಸ ಸಮಸ್ಯೆಗೆ ಮುಂದಾಗುತ್ತಿದ್ದಾರೆ. ತಾಯಿ ಎಂದಿಗೂ ಜೀವನಾಂಶವನ್ನು ಕೇಳಿಲ್ಲ. ಆದರೆ, ಮಗುವಿನ ಹಿತದೃಷ್ಟಿಯಿಂದ ಮಗುವಿನ ಶಾಶ್ವತ ಪಾಲಕ ಎಂದು ಘೋಷಿಸಲು ಬಯಸಿದ್ದರು ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ ತಾಯಿಯ ಅರ್ಜಿ ಪುರಸ್ಕರಿಸಿದೆ.
ಪ್ರಕರಣವೇನು?
ಅರ್ಜಿದಾರ ಮಹಿಳೆಯ 5 ವರ್ಷದ ಮಗನಿಗೆ ಸಂಬಂಧಿಸಿದಂತೆ ಆಕೆಯ ಮಾಜಿ ಪತಿಗೆ ಪೋಷಕರು ಮತ್ತು ಮಕ್ಕಳ ಕಾಯ್ದೆಯಡಿ ಭೇಟಿಯ ಹಕ್ಕುಗಳನ್ನು ನೀಡಿ ಕೌಟುಂಬಿಕ ನ್ಯಾಯಾಲಯ 2026ರ ಜನವರಿ 30ರಂದು ಆದೇಶಿಸಿತ್ತು. ಈ ಆದೇಶವನ್ನು ಮಗುವಿನ ತಾಯಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು.
ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದಲ್ಲಿ 2024ರ ಸೆಪ್ಟೆಂಬರ್ 24ರಂದು ಮಾಡಿಕೊಂಡ ಇತ್ಯರ್ಥದ ಮೂಲಕ ಅವರ ವಿವಾಹವನ್ನು ಅನೂರ್ಜಿತಗೊಳಿಸಲಾಯಿತು. ಅದರ ಒಂದು ನಿಯಮದಡಿಯಲ್ಲಿ ಅವರು 2021ರ ಜುಲೈನಲ್ಲಿ ಜನಿಸಿದ ಮಗುವಿನ ಶಾಶ್ವತ ಪಾಲಕ ಮತ್ತು ಪೋಷಕರಾಗಿ ಉಳಿಯಬೇಕಾಗಿತ್ತು. ಆ ವ್ಯವಸ್ಥೆಗೆ ತಮಗೆ ಯಾವುದೇ ಆಕ್ಷೇಪಣೆ ಇಲ್ಲವೆಂದು ತಂದೆ ಸ್ಪಷ್ಟವಾಗಿ ಹೇಳಿದ್ದರು ಮತ್ತು ಸ್ವಯಂಪ್ರೇರಣೆಯಿಂದ ತಮ್ಮ ಭೇಟಿ ಹಕ್ಕುಗಳನ್ನು ತ್ಯಜಿಸಿದ್ದರು ಎಂದು ತಾಯಿ ಅರ್ಜಿಯಲ್ಲಿ ವಿವರಿಸಿದ್ದರು.
ಒಮ್ಮೆ ಅರ್ಜಿ ಇತ್ಯರ್ಥದ ನಂತರ ಪುನಃ ತಂದೆ ಅರ್ಜಿ ಸಲ್ಲಿಸಿದರೆ ಅದು ಊರ್ಜಿತವಾಗುವುದಿಲ್ಲ. ಮಗುವಿನ ಜನನದ ನಂತರ, ತಂದೆ ಮಗುವನ್ನು ಭೇಟಿ ಮಾಡಲು, ಆರೈಕೆ ಮಾಡಲು ಅಥವಾ ಆರ್ಥಿಕವಾಗಿ ಅಥವಾ ಭಾವನಾತ್ಮಕವಾಗಿ ಸ್ಪಂದಿಸಲು ಯಾವುದೇ ಪ್ರಯತ್ನ ಮಾಡಿಲ್ಲ. ಜತೆಗೆ, ಪತಿ ಮರು ಮದುವೆಯಾಗಿದ್ದಾರೆ. ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದರೂ ಪತಿ ನ್ಯಾಯಾಲಯದ ಮುಂದೆ ಹಾಜರಾಗಿಲ್ಲ. ಆದ್ದರಿಂದ, ಅವರಿಗೆ ನೀಡಿರುವ ಭೇಟಿಯ ಹಕ್ಕು ರದ್ದುಗೊಳಿಸಬೇಕು ಎಂದು ತಾಯಿ ಕೋರಿದ್ದರು.
Related Articles
Thank you for your comment. It is awaiting moderation.


Comments (0)