ಮುಡಾ ಅಕ್ರಮ ನಿವೇಶನ ಹಂಚಿಕೆ ಹಗರಣ; ಇ.ಡಿ ಪ್ರಕರಣದಲ್ಲಿ ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ಗೆ ಜಾಮೀನು
- by Jagan Ramesh
- July 1, 2026
- 10 Views
ಬೆಂಗಳೂರು: ಅಕ್ರಮ ನಿವೇಶನ ಹಂಚಿಕೆ ಹಗರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ಇ.ಡಿ) ಬಂಧನಕ್ಕೊಳಗಾಗಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಮಾಜಿ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್ಎ) ಇ.ಡಿ ದಾಖಲಿಸಿದ್ದ ಪ್ರಕರಣದಲ್ಲಿ ಜಾಮೀನು ಕೋರಿ ಐದನೇ ಆರೋಪಿ ಜಿ.ಟಿ. ದಿನೇಶ್ ಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಪ್ರಕಟಿಸಿದ್ದು, ಅರ್ಜಿ ಪುರಸ್ಕರಿಸಿ ಜಾಮೀನು ಮಂಜೂರು ಮಾಡಿದೆ.
ಅರ್ಜಿದಾರರು 5 ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರ ಶ್ಯೂರಿಟಿ ಒದಗಿಸಬೇಕು. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪ್ರಾಸಿಕ್ಯೂಷನ್ ಸಾಕ್ಷ್ಯ ತಿರುಚಲು ಹಾಗೂ ತನಿಖೆ ಅಡ್ಡಿಪಡಿಸಲು ಯತ್ನಿಸಬಾರದು. ಸಕಾರಣಗಳಿಗಾಗಿ ವಿಚಾರಣಾ ನ್ಯಾಯಾಲಯದಿಂದ ವಿನಾಯಿತಿ ಪಡೆಯುವ ಹೊರತಾಗಿ ಎಲ್ಲ ನಿಗದಿತ ದಿನಾಂಕಗಳಂದು ವಿಚಾರಣೆಗಳಿಗೆ ಕಡ್ಡಾಯವಾಗಿ ಹಾಜರಾಗಬೇಕು ಎಂಬ ಷರತ್ತುಗಳನ್ನು ವಿಧಿಸಿರುವ ನ್ಯಾಯಾಲಯ, ಇವುಗಳಲ್ಲಿ ಯಾವುದೇ ಷರತ್ತು ಉಲ್ಲಂಘಿಸಿದರೂ ಅರ್ಜಿದಾರ ಜಾಮೀನು ರದ್ದತಿಗೆ ಕೋರಲು ಜಾರಿ ನಿರ್ದೇಶನಾಲಯ ಸ್ವತಂತ್ರವಾಗಿದೆ ಎಂದು ಸ್ಪಷ್ಟಪಡಿಸಿದೆ.
ಹೈಕೋರ್ಟ್ ಆದೇಶದಲ್ಲೇನಿದೆ?
ಪ್ರಕರಣ ಸಂಬಂಧ 2026ರ ಜನವರಿ 20ರಂದು ಮೊದಲಿಗೆ ಜಾಮಿನು ತಿರಸ್ಕರಿಸಿದ್ದ ಹೈಕೋರ್ಟ್, ವಿಚಾರಣೆ ಪ್ರಗತಿ ಹೊಂದದಿದ್ದರೆ ಅಥವಾ ಬದಲಾದ ಸನ್ನಿವೇಶದಲ್ಲಿ ಮತ್ತೆ ಹೈಕೋರ್ಟ್ ಮೊರೆ ಹೋಗಬಹುದು ಎಂದು ಅರ್ಜಿದಾರರಿಗೆ ತಿಳಿಸಿತ್ತು. ಇದಾದ ಎರಡು ತಿಂಗಳ ನಂತರ 2026ರ ಮಾರ್ಚ್ 3ರಂದು ಆರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ. ನಂತರವೇ ಅರ್ಜಿದಾರರಿಗೆ ಇದೇ ಅಪರಾಧ ಸಂಬಂಧ (ಪ್ರಿಡಿಕೇಟ್ ಅಫೆನ್ಸ್) ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ದೂರಿನ ಕುರಿತಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 2026ರ ಮಾರ್ಚ್ 16ರಂದು ಅರ್ಜಿದಾರರಿಗೆ ಜಾಮೀನು (ಡಿಫಾಲ್ಟ್ ) ಮಂಜೂರು ಮಾಡಿತ್ತು ಎಂದು ನ್ಯಾಯಪೀಠ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಇದಾದ ನಂತರ, 2026ರ ಮಾರ್ಚ್ 28ರಂದು ಮೂವರು ಆರೋಪಿಗಳ (ಎ2 ರಿಂದ ಎ4) ವಿರುದ್ಧ ಇ.ಡಿ ಪೂರಕ ದೂರು ದಾಖಲಿಸಿತು. ಇ.ಡಿ ಅವರನ್ನು ಬಂಧನ ಮಾಡಿಲ್ಲ. ಅರ್ಜಿದಾರರು ಸಹ 2ರಿಂದ 4ನೇ ಆರೋಪಿಗಳ ಸ್ಥಾನದಲ್ಲಿಯೇ ನಿಲ್ಲುತ್ತಾರೆ ಎಂಬುದು ಅವರ ವಾದ. ಇ.ಡಿ ವಿಶೇಷ ನ್ಯಾಯಾಲಯವು 2026ರ ಏಪ್ರಿಲ್ 4ರಂದು ಜಾರಿ ನಿರ್ದೇಶನಾಲಯದ ದೂರನ್ನು ಪರಿಗಣಿಸಿತ್ತು. ಆಗಲೂ ಸಹ ಇ.ಡಿಯ ಪೂರಕ ದೂರು ಸಂಬಂಧ 2ರಿಂದ 4ನೇ ಆರೋಪಿ ವಿರುದ್ಧದ ವಿಚಾರಣೆಯು ಪೂರ್ವ ಕಾಗ್ನಿಜೆನ್ಸ್ ಹಂತದಲ್ಲಿಯೇ ಉಳಿದಿದೆ. ಈ ಐದು ಅಂಶಗಳು ಪ್ರಕರಣದಲ್ಲಿ ಬದಲಾದ ಸನ್ನಿವೇಶಗಳಿಗೆ ದ್ಯೋತಕವಾಗಿದೆ. ಇದರಿಂದ, ಅರ್ಜಿದಾರರಿಗೆ ಜಾಮೀನು ನೀಡಬಹುದಾಗಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.
ಪ್ರಕರಣವೇನು?
ಮುಡಾ ಆಯುಕ್ತರಾಗಿದ್ದ ಅವಧಿಯಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಕ್ರಮವಾಗಿ ಅನರ್ಹರಿಗೆ ನಿವೇಶನಗಳನ್ನು ಹಂಚಿದ್ದಾರೆಂಬ ಆರೋಪವನ್ನು ಜಿ.ಟಿ. ದಿನೇಶ್ ಕುಮಾರ್ ಮೇಲಿದೆ. ಈ ಸಂಬಂಧ ಪಿಎಂಎಲ್ಎ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಜಾರಿ ನಿರ್ದೇಶನಾಲಯ 2025ರ ಸೆಪ್ಟೆಂಬರ್ 17ರಂದು ದಿನೇಶ್ ಅವರನ್ನು ಬಂಧಿಸಿತ್ತು. ದಿನೇಶ್ ಕುಮಾರ್ ನ್ಯಾಯಾಂಗ ಬಂಧನದಲ್ಲಿದ್ದರು. ಆ ನಂತರ ಅಕ್ಟೋಬರ್ 5ರಂದು ಇ.ಡಿ, ದಿನೇಶ್ ಕುಮಾರ್ಗೆ ಸೇರಿದ ಸುಮಾರು 40 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಅಲ್ಲದೆ, ದಿನೇಶ್ ಕುಮಾರ್ ವಿರುದ್ಧ 2025ರ ನವೆಂಬರ್ 19ರಂದು ಆರೋಪಪಟ್ಟಿ ಸಲ್ಲಿಸಿದ್ದು, ಅದರಲ್ಲಿ ಅನರ್ಹರಿಗೆ ಒಟ್ಟು 450 ಕೋಟಿಗೂ ಅಧಿಕ ಬೆಲೆಬಾಳುವ 283 ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದ್ದಾರೆಂದು ಉಲ್ಲೇಖಿಸಲಾಗಿದೆ.
ಈ ಮಧ್ಯೆ ಜಾಮೀನು ಕೋರಿ ದಿನೇಶ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು 2025ರ ಅಕ್ಟೋಬರ್ 10ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿತ್ತು. ಇದರಿಂದ, ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಆ ಅರ್ಜಿಯನ್ನು 2026ರ ಜನವರಿ 20ರಂದು ತಿರಸ್ಕರಿಸಿದ್ದ ಹೈಕೋರ್ಟ್, ಮೂರು ತಿಂಗಳ ನಂತರ ಬದಲಾದ ಸನ್ನಿವೇಶದಲ್ಲಿ ಜಾಮೀನು ಕೋರಿ ಮತ್ತೆ ಅರ್ಜಿ ಸಲ್ಲಿಸಬಹುದು ಎಂದು ದಿನೇಶ್ ಅವರಿಗೆ ಸೂಚಿಸಿತ್ತು. ಮಾರ್ಚ್ 16ರಂದು ಜನಪ್ರತಿನಿಧಿಗಳ ನ್ಯಾಯಾಲಯ ಜಾಮೀನು ನೀಡಿದ್ದರೂ ಇ.ಡಿ ಪ್ರಕರಣ ಬಾಕಿಯಿದ್ದ ಹಿನ್ನೆಲೆಯಲ್ಲಿ ದಿನೇಶ್ ಕುಮಾರ್ ಬಿಡುಗಡೆಯಾಗಿರಲಿಲ್ಲ. ನಂತರ ಜಾಮೀನು ಕೋರಿ ಜೂನ್ 2ರಂದು ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ್ದರು.
Related Articles
Thank you for your comment. It is awaiting moderation.


Comments (0)