ಸ್ನಾನ ಮಾಡುತ್ತಿದ್ದ ಯುವತಿಯ ವಿಡಿಯೊ ಸೆರೆ ಹಿಡಿದ ಆರೋಪ; ಎಫ್‌ಎಸ್‌ಎಲ್ ವರದಿ ಬರುವವರೆಗೆ ಪ್ರಕರಣಕ್ಕೆ ತಡೆಯಾಜ್ಞೆ
- by Jagan Ramesh
- July 1, 2026
- 13 Views
ಬೆಂಗಳೂರು: ನೆರೆಮನೆಯ ಯುವತಿ ಸ್ನಾನ ಮಾಡುವಾಗ ರಹಸ್ಯವಾಗಿ ಮೊಬೈಲ್‌ನಲ್ಲಿ ವಿಡಿಯೊ ರೆಕಾರ್ಡ್ ಮಾಡಿದ ಆರೋಪ ಪ್ರಕರಣವೊಂದರಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ವರದಿ ಬರುವವರೆಗೆ ಆರೋಪಿಯ ವಿರುದ್ಧದ ಕಾನೂನು ಪ್ರಕ್ರಿಯೆಗಳಿಗೆ ತಡೆಯಾಜ್ಞೆ ನೀಡಿರುವ ಹೈಕೋರ್ಟ್, ಮೊಬೈಲ್‌ನಲ್ಲಿ ಒಂದೇ ಒಂದು ಫೋಟೋ ಅಥವಾ ಒಂದು ಕ್ಷಣದ ವಿಡಿಯೊ ಇರುವುದು ವರದಿಯಿಂದ ತಿಳಿದುಬಂದರೂ ಅರ್ಜಿ ವಜಾಗೊಳಿಸುವುದಾಗಿ ಆರೋಪಿಗೆ ಎಚ್ಚರಿಕೆ ನೀಡಿದೆ.
ಭಾರತೀಯ ನ್ಯಾಯಸಂಹಿತೆ (ಬಿಎನ್‌ಎಸ್) ಸೆಕ್ಷನ್ 77ರ (ಮಹಿಳೆಯ ಖಾಸಗಿ ಕ್ಷಣಗಳನ್ನು ರಹಸ್ಯವಾಗಿ ಫೋಟೋ ಅಥವಾ ವಿಡಿಯೊ ಮಾಡುವುದು) ಅಡಿಯಲ್ಲಿ ಬೆಂಗಳೂರಿನ ವಿವೇಕನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದುಕೋರಿ ಪಶ್ಚಿಮ ಬಂಗಾಳ ಮೂಲದ ಚಿತ್ತರಂಜನ್ ಶರ್ಮಾ (25) ಸಲ್ಲಿಸಿರುವ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿತು.
ಹೈಕೋರ್ಟ್ ಆದೇಶವೇನು?
ಅರ್ಜಿದಾರರಿಗೆ ತಮ್ಮ ಮನೆಯ ತಾರಸಿಯ ಮೇಲೆ ಶುದ್ಧ ಗಾಳಿ ಸೇವಿಸುತ್ತ ವ್ಯಾಯಾಮ ಅಥವಾ ಜಿಮ್ ಮಾಡುವ ಅಭ್ಯಾಸವಿದೆ. ಅವರ ಪಕ್ಕದ ಮನೆಯಲ್ಲಿನ ಸ್ನಾನದ ಗೃಹದಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆಯೊಬ್ಬರು ಯಾರೋ ವ್ಯಕ್ತಿ ಕಿಟಕಿಯ ಮೂಲಕ ಮೊಬೈಲ್ ಫೋನ್ ಇಟ್ಟು ವಿಡಿಯೊ ಮಾಡುತ್ತಿರುವುದನ್ನು ಕಂಡು ಕಿರುಚಿದ್ದಾರೆ. ಅರ್ಜಿದಾರರು ಪ್ರತಿದಿನ ಟೆರೇಸ್ ಮೇಲೆ ಜಿಮ್ ಮಾಡುವ ಅಭ್ಯಾಸ ಹೊಂದಿದ್ದಾರೆ ಎಂಬ ಏಕೈಕ ಕಾರಣಕ್ಕೆ ಅವರ ಮೇಲೆಯೇ ಆರೋಪ ಹೊರಿಸಲಾಗಿದೆ. ಅರ್ಜಿದಾರರ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದ್ದು, ಪರೀಕ್ಷೆಗಾಗಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಮೊಬೈಲ್ ಫೋನ್‌ನಲ್ಲಿ ಯಾವುದೇ ವಿಡಿಯೊ ಅಥವಾ ಫೋಟೋ ಕಂಡುಬರದ ಹೊರತು, ಕಾನೂನು ಪ್ರಕ್ರಿಯೆ ಮುಂದುವರಿಸಲು ಅನುಮತಿಸಲಾಗದು ಎನ್ನುವುದು ಅರ್ಜಿದಾರರ ಪರ ವಕೀಲರ ವಾದವಾಗಿದೆ. ಆದ್ದರಿಂದ, ಸರ್ಕಾರ ಎಫ್‌ಎಸ್‌ಎಲ್ ವರದಿ ಪಡೆದು ನ್ಯಾಯಾಲಯಕ್ಕೆ ಸಲ್ಲಿಸುವವರೆಗೆ ಅರ್ಜಿದಾರರ ವಿರುದ್ಧದ ಮುಂದಿನ ಎಲ್ಲ ಪ್ರಕ್ರಿಯೆಗಳಿಗೆ ತಡೆ ನೀಡಲಾಗಿದೆ ಎಂದು ನ್ಯಾಯಪೀಠ ಮಧ್ಯಂತರ ಆದೇಶ ಮಾಡಿತು.
ಇದೇ ವೇಳೆ, ವಶಪಡಿಸಿಕೊಳ್ಳಲಾದ ಮೊಬೈಲ್ ಫೋನ್‌ನಲ್ಲಿ ಒಂದೇ ಒಂದು ಫೋಟೋ ಅಥವಾ ಒಂದು ಸೆಕೆಂಡಿನ ವಿಡಿಯೊ ಇರುವುದು ಎಫ್‌ಎಸ್‌ಎಲ್ ವರದಿಯಲ್ಲಿ ಕಂಡುಬಂದರೂ, ಯಾವುದೇ ವಾದಕ್ಕೂ ಅವಕಾಶ ನೀಡದೆ ಅರ್ಜಿ ವಜಾಗೊಳಿಸಲಾಗುವುದು. ಈ ಷರತ್ತಿಗೆ ಒಳಪಟ್ಟು, ಮಧ್ಯಂತರ ಆದೇಶವಿರುತ್ತದೆ ಎಂದು ತಿಳಿಸಿ ವಿಚಾರಣೆಯನ್ನು ಜುಲೈ 17ಕ್ಕೆ ಮುಂದೂಡಿದ ನ್ಯಾಯಪೀಠ, ಮುಂದಿನ ವಿಚಾರಣೆ ವೇಳೆ ರಾಜ್ಯ ಸರ್ಕಾರ ವಿಧಿವಿಜ್ಞಾನ ಪ್ರಯೋಗಾಲಯದಿಂದ ವರದಿ ಪಡೆದುಕೊಂಡು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿತು.
ನಿಮಗೆ ಓಪನ್ ಏರ್ ಜಿಮ್ ಸರಿ ಹೋಗುವುದಿಲ್ಲ:
ಇದಕ್ಕೂ ಮುನ್ನ ಆರೋಪಿಯ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರರು ಪ್ರತಿದಿನ ಜಿಮ್ ಮಾಡಲು ಟೆರೇಸ್ ಮೇಲೆ ಹೋಗುತ್ತಿದ್ದರು. ಎಫ್‌ಐಆರ್‌ನಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಆರೋಪ ಮಾಡಲಾಗಿದೆ. ಅರ್ಜಿದಾರರು ಪ್ರತಿದಿನ ಟೆರೇಸ್ ಮೇಲಿರುತ್ತಾರೆ ಎಂದು ಮಾಹಿತಿದಾರರೊಬ್ಬರು ನೀಡಿದ ಹೇಳಿಕೆ ಆಧರಿಸಿ ಅವರನ್ನು ಪ್ರಕರಣಕ್ಕೆ ಎಳೆದು ತರಲಾಗಿದೆ ಎಂದರು. ಸರ್ಕಾರದ ಪರ ವಕೀಲರು, ಘಟನೆ ನಡೆದ ದಿನವೇ ಅರ್ಜಿದಾರರ ಮೊಬೈಲ್ ಫೋನ್ ವಶಕ್ಕೆ ಪಡೆದು, ಎಫ್‌ಎಸ್‌ಎಲ್ ತಪಾಸಣೆಗೆ ಕಳುಹಿಸಲಾಗಿದೆ. ಅದರ ವರದಿ ಇನ್ನೂ ಬರಬೇಕಿದೆ ಎಂದರು.
ಈ ವೇಳೆ, ಸಿಆರ್‌ಪಿಸಿ ಸೆಕ್ಷನ್ 164 ಅಡಿ ದೂರುದಾರೆ ನೀಡಿದ್ದ ಹೇಳಿಕೆ ಪರಿಶೀಲಿಸಿದ ನ್ಯಾಯಪೀಠ, ಇದರಲ್ಲಿ ಇರುವುದನ್ನು ನಿಜಕ್ಕೂ ಓದಲಾಗುತ್ತಿಲ್ಲ ಎಂದು ಹೇಳಿತು. ಅದಕ್ಕೆ ಅರ್ಜಿದಾರರ ಪರ ವಕೀಲರು ಅದೆಲ್ಲ ದೂರುದಾರೆಯ ಆರೋಪವಷ್ಟೇ. ವಿಡಿಯೊ ಮಾಡಿರುವ ವ್ಯಕ್ತಿ ಅರ್ಜಿದಾರರಲ್ಲ. ಅರ್ಜಿದಾರರು ಟೆರೇಸ್ ಮೇಲೆ ಇರುತ್ತಾರೆ ಎಂಬ ಕಾರಣಕ್ಕೆ ಯಾರೋ ಅಪರಿಚಿತ ವ್ಯಕ್ತಿ ಮಾಡಿದ್ದ ಕೃತ್ಯವನ್ನು ಅರ್ಜಿದಾರರ ಮೇಲೆ ಹೊರಸಲಾಗಿದೆ ಎಂದರು. ಈ ಹಂತದಲ್ಲಿ ನ್ಯಾಯಾಮೂರ್ತಿಗಳು, ನಿಮಗೆ ಟೆರೇಸ್ ಮೇಲಿನ ಓಪನ್ ಏರ್ ಜಿಮ್ ಸರಿಹೋಗುವುದಿಲ್ಲ, ಬೇರೆ ಎಲ್ಲಾದರೂ ಜಿಮ್‌ಗೆ ಸೇರಿಕೊಳ್ಳಿ ಎಂದು ಲಘುಧಾಟಿಯಲ್ಲಿ ಹೇಳಿದರು.
Related Articles
Thank you for your comment. It is awaiting moderation.


Comments (0)