ಕುಣಿಗಲ್ ಸ್ಟಡ್ ಫಾರ್ಮ್‌ಗೆ ರೇಸ್‌ಕೋರ್ಸ್ ಸ್ಥಳಾಂತರ ಪ್ರಶ್ನಿಸಿ ಪಿಐಎಲ್; ಸರ್ಕಾರಗಳಿಗೆ ಹೈಕೋರ್ಟ್ ನೋಟಿಸ್

ಬೆಂಗಳೂರು: ಬೆಂಗಳೂರು ಟರ್ಫ್‌ ಕ್ಲಬ್‌‌ನ (ಬಿಟಿಸಿ) ರೇಸ್‌ಕೋರ್ಸ್‌ ಅನ್ನು ಕುಣಿಗಲ್‌ ಸ್ಟಡ್‌ ಫಾರ್ಮ್‌ಗೆ ಸ್ಥಳಾಂತರಿಸುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್ ನೋಟಿಸ್‌ ಜಾರಿಗೊಳಿಸಿದೆ.

ಪರಿಸರವಾದಿ ವಿಜಯ್‌ ನಿಶಾಂತ್‌ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್‌. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಬಿಟಿಸಿ, ಕರ್ನಾಟಕ ರಾಜ್ಯ ಜೀವ ವೈವಿಧ್ಯ ಮಂಡಳಿ, ಯುನೈಟೆಡ್‌ ರೇಸಿಂಗ್‌ ಮತ್ತು ಬ್ಲಡ್‌ ಸ್ಟಾಕ್‌ ಬ್ರೀಡರ್ಸ್‌ ಲಿಮಿಟೆಡ್‌ ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆಯನ್ನು ಜುಲೈ 15ಕ್ಕೆ ಮುಂದೂಡಿತು.

ಅರ್ಜಿಯಲ್ಲೇನಿದೆ?
ಭಾರತದ ಅತ್ಯಂತ ಹಳೆಯ ಮತ್ತು ಪ್ರಮುಖ ಕುದುರೆ ಸಾಕಣೆ ಕೇಂದ್ರಗಳಲ್ಲಿ ಕುಣಿಗಲ್‌ ಸಮೀಪದ ಸ್ಟಡ್‌ ಫಾರ್ಮ್ ಕೂಡ ಒಂದಾಗಿದೆ. ಇದು ಕೇವಲ ಖಾಲಿ ಭೂಮಿಯಾಗಿರದೆ, ಸುಮಾರು 469 ಎಕರೆಗಳಷ್ಟು ಪ್ರಬುದ್ಧ, ಸ್ವಾವಲಂಬಿ ಪರಿಸರ ವ್ಯವಸ್ಥೆ ಇದೆ. ಐತಿಹಾಸಿಕ ಕುಣಿಗಲ್‌ ಸ್ಟಡ್‌ ಫಾರ್ಮ್‌ನ 110 ಎಕರೆ ಭೂಮಿಯನ್ನು ಬಿಟಿಸಿಗೆ ಬೆಂಗಳೂರಿನ ಮಧ್ಯಭಾಗದಿಂದ ರೇಸ್‌ಕೋರ್ಸ್‌ ಅನ್ನು ಸ್ಥಳಾಂತರಿಸಲು ದೀರ್ಘಾವಧಿಯ ಗುತ್ತಿಗೆಗೆ ಹಸ್ತಾಂತರಿಸುವ ರಾಜ್ಯ ಸರ್ಕಾರದ ಕ್ರಮ ಕಾನೂನುಬಾಹಿರವಾಗಿದೆ. ಟರ್ಫ್‌ ಕ್ಲಬ್‌ ಅನ್ನು ಐತಿಹಾಸಿಕ ಸ್ಟಡ್‌ ಫಾರ್ಮ್‌ ಬಿಟ್ಟು ಬೇರೆಡೆ ಸ್ಥಳಾಂತರಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು. ಬಿಟಿಸಿಗೆ ಫಾರ್ಮ್‌ ಜಾಗ ನೀಡುವ ಸರ್ಕಾರದ ಆದೇಶ ರದ್ದುಗೊಳಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.

Related Articles

Comments (0)

Leave a Comment