ರನ್ಯಾ ರಾವ್ ಘನತೆಗೆ ಧಕ್ಕೆ ತರುವ ಹೇಳಿಕೆ; ಯತ್ನಾಳ್ ವಿರುದ್ಧದ ಪ್ರಕರಣದ ತಡೆಯಾಜ್ಞೆ ವಿಸ್ತರಿಸಿದ ಹೈಕೋರ್ಟ್
- by Prashanth Basavapatna
- June 25, 2026
- 5 Views
ಬೆಂಗಳೂರು: ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟಿ ಹರ್ಷವರ್ಧಿನಿ ರನ್ಯಾ ಅಲಿಯಾಸ್ ರನ್ಯಾ ರಾವ್ ಅವರ ಘನತೆಗೆ ಚ್ಯುತಿ ಉಂಟು ಮಾಡುವಂಥ ಮಾತುಗಳನ್ನಾಡಿದ ಆರೋಪದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ನೀಡಲಾಗಿರುವ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್ ಜುಲೈ 17ರ ವರೆಗೆ ವಿಸ್ತರಿಸಿದೆ.
ರನ್ಯಾ ಸಂಬಂಧಿ ಅಕುಲಾ ಅನುರಾಧಾ ನೀಡಿದ ದೂರು ಆಧರಿಸಿ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆ ಪೊಲೀಸರು ದಾಖಲಿಸಿರುವ ಪ್ರಕರಣ ರದ್ದು ಕೋರಿ ಯತ್ನಾಳ್ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ದೂರುದಾರರ ಪರ ವಕೀಲ ವೈ.ಎಲ್. ಮಹೇಶ್ ವಾದ ಮಂಡಿಸಿ, ಉತ್ತರ ಕರ್ನಾಟಕ ಭಾಗದ ಆಡುಭಾಷೆಯಿಂದಾಗಿ ಆಕ್ಷೇಪಾರ್ಹ ಪದ ಬಂದಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಆದರೆ, ಆ ಪದಕ್ಕೆ ಬೇರೆ ಅರ್ಥವಿದ್ದರೆ ಅದನ್ನು ನಂಬಬಹುದಿತ್ತು. ಉತ್ತರ ಕರ್ನಾಟಕ ಭಾಷೆಯಲ್ಲಿಯೂ ಯತ್ನಾಳ್ ಬಳಸಿರುವ ಪದಕ್ಕೆ ಒಂದೇ ಅರ್ಥವಿದೆ ಎಂದರು.
ಇನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್ಐ) ಶೋಧನೆ ಮತ್ತು ಜಪ್ತಿ (ಸರ್ಚ್ ಅಂಡ್ ಸೀಷರ್) ಪ್ರಕ್ರಿಯೆಯ ಸಂದರ್ಭದಲ್ಲಿ ಇಂಥ ಜಾಗಗಳಲ್ಲಿ ಚಿನ್ನ ಪತ್ತೆಯಾಗಿದೆ ಎಂದು ಅವರು ವಾದಿಸಿದ್ದರು. ಪ್ರಕರಣದ ಶೋಧ ಮತ್ತು ಜಪ್ತಿಗೆ ಸಂಬಂಧಿಸಿದ ದಾಖಲೆಯನ್ನು ಮೆಮೊನೊಂದಿಗೆ ಸಲ್ಲಿಸುತ್ತಿದ್ದೇವೆ. ಶೋಧನೆ ವೇಳೆ ಚಿನ್ನ ಎಲ್ಲಿ ಪತ್ತೆಯಾಯಿತು ಎಂಬುದನ್ನು ನ್ಯಾಯಾಲಯವೇ ಗಮನಿಸಬಹುದು ಎಂದು ತಿಳಿಸಿದರು.
ಅರ್ಜಿದಾರರು ಒರ್ವ ಹಾಲಿ ಶಾಸಕರು ಮತ್ತು ವಿರೋಧ ಪಕ್ಷದ ನಾಯಕರಾಗಿದ್ದಾರೆ. ಮಾಧ್ಯಮಗಳ ಮುಂದೆ ಹೇಳಿಕೆ ನೀಡುವ ಸಂದರ್ಭದಲ್ಲಿ ಅವರು ಆ ಶಬ್ದವನ್ನು ಎರಡು ಬಾರಿ ಬಳಸಿದ್ದಾರೆ. ಹಗರಣದಲ್ಲಿ ಭಾಗಿಯಾಗಿದ್ದ ಇಬ್ಬರು ಸಚಿವರ ಹೆಸರುಗಳನ್ನು ಬಹಿರಂಗಪಡಿಸುವ ಉದ್ದೇಶದಿಂದ ಆ ರೀತಿ ಹೇಳಿದ್ದಾಗಿ ಅವರು ಹೇಳುತ್ತಾರೆ. ಆದರೆ, ಈವರೆಗೂ ಆ ಇಬ್ಬರು ಸಚಿವರ ಹೆಸರುಗಳು ಹೊರ ಬಂದಿಲ್ಲ. ಕೇವಲ ವೈಯಕ್ತಿಕ ರಾಜಕೀಯ ದ್ವೇಷವನ್ನು ತೀರಿಸಿಕೊಳ್ಳಲು ಯಾರೋ ಬೇರೆಯವರನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿದರು.
ಯತ್ನಾಳ್ ಪರ ವಕೀಲ ವೆಂಕಟೇಶ್ ದಳವಾಯಿ ವಾದ ಮಂಡಿಸಿ, ಎಲ್ಲ ಮಹಿಳೆಯರನ್ನು ಕುರಿತು ಯತ್ನಾಳ್ ಹೇಳಿಕೆ ನೀಡಿಲ್ಲ. ಯತ್ನಾಳ್ ಅವರು ಆಕ್ಷೇಪಾರ್ಹ ಹೇಳಿಕೆ ನೀಡಿದ ದಿನ ರನ್ಯಾ ಅವರು ನ್ಯಾಯಾಂಗ ಬಂಧನದಲ್ಲಿದ್ದರು. ಅವರ ಹೇಳಿಕೆಯನ್ನು ಆಕೆ ನೋಡುವುದು ಅಥವಾ ಕೇಳಿರುವ ಸಾಧ್ಯತೆ ಇಲ್ಲ. ಈ ವಿಚಾರ ರನ್ಯಾ ಅವರಿಗೆ ತಿಳಿದಿತ್ತು ಎಂಬ ಬಗ್ಗೆ ದೂರಿನಲ್ಲಿ ಯಾವ ಉಲ್ಲೇಖವೂ ಇಲ್ಲ. ಅರ್ಜಿದಾರರು ಹೇಳಿಕೆ ನೀಡಿದ ಎರಡು ದಿನಗಳ ನಂತರ ದೂರು ದಾಖಲಿಸಲಾಗಿದೆ ಎಂದು ವಿವರಿಸಿದರು.
ಆಗ ನ್ಯಾಯಮೂರ್ತಿಗಳು, ಅರ್ಜಿದಾರರು ನೀಡಿರುವ ಹೇಳಿಕೆ ಎಲ್ಲ ಕಡೆ ಇದೆ. ಜೈಲಿನಲ್ಲಿ ಪತ್ರಿಕೆ ಹೋಗುವುದಿಲ್ಲವೇ? ಅರ್ಜಿದಾರರು ಕ್ಷಮೆಯನ್ನಾದರೂ ಕೇಳಬೇಕಿತ್ತು. ಇದು ಸರಿಯಲ್ಲ. ಈಗ ಕ್ಷಮೆಯಾಚಿಸಿದರೂ ಸಹ ಹೇಳಿರುವುದನ್ನು ಸಂಪೂರ್ಣವಾಗಿ ಅಳಿಸಿಹಾಕಲು ಸಾಧ್ಯವಿಲ್ಲ. ಸಿ.ಟಿ. ರವಿ (ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸದನದಲ್ಲಿ ಆಕ್ಷೇಪಾರ್ಹ ಪದ ಬಳಕೆ) ಪ್ರಕರಣದಲ್ಲಿ ಕ್ಷಮೆ ಕೋರಿ ಪ್ರಮಾಣಪತ್ರ ಸಲ್ಲಿಸಿದ್ದರೂ ಅದನ್ನು ನಾನು ಒಪ್ಪಿರಲಿಲ್ಲ ಎಂದರು.
ಅಂತಿಮವಾಗಿ, ಅರ್ಜಿಯನ್ನು ಜುಲೈ 17ಕ್ಕೆ ಮುಂದೂಡಿದ ನ್ಯಾಯಪೀಠ, ಪ್ರಕರಣಕ್ಕೆ ಈ ಹಿಂದೆ ನೀಡಲಾಗಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಮುಂದಿನ ವಿಚಾರಣೆವರೆಗೆ ವಿಸ್ತರಿಸಿತು. ಇದೇ ವೇಳೆ, ಮುಂದಿನ ವಿಚಾರಣೆ ವೇಳೆಗೆ ನಿಮಗೇನಾದರೂ ಜ್ಞಾನೋದಯವಾದರೆ ಏನಾದರೂ ಮಾಡಿ. ಇಲ್ಲದಿದ್ದರೆ, ನ್ಯಾಯಾಲಯವೇ ಆದೇಶ ಹೊರಡಿಸಲಿದೆ ಎಂದು ನ್ಯಾಯಪೀಠ ಮೌಖಿಕವಾಗಿ ಹೇಳಿತು.
Related Articles
Thank you for your comment. It is awaiting moderation.


Comments (0)