ಮದುವೆ ನೆಪದಲ್ಲಿ ವಂಚನೆ; ಆರೋಪಿಯ ತಮ್ಮನನ್ನು ಬಂಧಿಸಿದ್ದ ಇನ್‌ಸ್ಪೆಕ್ಟರ್ ವಿರುದ್ಧ ಇಲಾಖಾ ತನಿಖೆಗೆ ಆದೇಶ

ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ಪ್ರೊಬೇಷನರಿ ಸಬ್‌ಇನ್‌ಸ್ಪೆಕ್ಟರ್ ಬದಲಿಗೆ ಅವರ ತಮ್ಮನನ್ನು ಬಂಧಿಸಿದ್ದ ಪೊಲೀಸರ ಕಾರ್ಯವೈಖರಿಯನ್ನು ತೀವ್ರವಾಗಿ ಖಂಡಿಸಿರುವ ಹೈಕೋರ್ಟ್, ಯೂನಿಫಾರಂ ಇದೆ ಎಂದ ಮಾತ್ರಕ್ಕೆ ಏನು ಬೇಕಾದರೂ ಮಾಡಬಹುದೇ? ಕಾನೂನು ಉಲ್ಲಂಘಿಸುವ ಪೊಲೀಸರನ್ನು ಅಮಾನತುಪಡಿಸಲಾಗುವುದು ಎಂದು ಕಠಿಣ ಎಚ್ಚರಿಕೆ ನೀಡಿದೆ.

ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ದಾವಣಗೆರೆಯ ಎನ್‌. ದರ್ಶನ್‌ ಆತನ ತಂದೆ-ತಾಯಿ ಹಾಗೂ ಸಹೋದರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ಕಳೆದ ವಿಚಾರಣೆ ವೇಳೆ ನ್ಯಾಯಾಲಯ ನೀಡಿದ್ದ ನಿರ್ದೇಶನದಂತೆ ಚಿತ್ರದುರ್ಗ ಮಹಿಳಾ ಠಾಣೆ ತನಿಖಾಧಿಕಾರಿ ಖುದ್ದು ವಿಚಾರಣೆಗೆ ಹಾಜರಿದ್ದರು.

ಈ ವೇಳೆ ತನಿಖಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ಮೊದಲ ಆರೋಪಿ ತಲೆಮರೆಸಿಕೊಂಡಿದ್ದಾರೆಂಬ ಕಾರಣಕ್ಕೆ ಆತನ ತಮ್ಮನನ್ನು ಬಂಧಿಸಿದ್ದೀರಿ. ಪ್ರಕರಣದಲ್ಲಿ ಮದುವೆಯ ಭರವಸೆ ನೀಡಿ ವಂಚನೆ ಎಸಗಿದ ಆರೋಪವಿದೆ. ಭರವಸೆ ನೀಡಿರುವುದು ತಮ್ಮನೇ? ಯಾವ ತಪ್ಪಿಲ್ಲದಿದ್ದರೂ ತಮ್ಮನನ್ನು ಬಂಧಿಸಿದ್ದೇಕೆ? ಎಂದು ಪ್ರಶ್ನಿಸಿತು.

ವಿನಾಕಾರಣ ಬಂಧಿಸುವುದು ಪೊಲೀಸರಿಗೆ ಆಟವಾಗಿಬಿಟ್ಟಿದೆ. ಒಬ್ಬ ವ್ಯಕ್ತಿಯನ್ನು ಬಂಧಿಸುವುದರಿಂದ ಆತನ ಜೀವನದ ಮೇಲಾಗುವ ಪರಿಣಾಮದ ಅರಿವು ಪೊಲೀಸರಿಗಿದೆಯೇ. ಒಮ್ಮೆ ಬಂಧನಕ್ಕೀಡಾದರೆ ಜೀವನ ಪೂರ್ತಿ ಹಣೆಪಟ್ಟಿಯಾಗಿ ಉಳಿದುಬಿಡುತ್ತದೆ. ನಿಜವಾಗಿಯೂ ಬಂಧನ ಅವಶ್ಯವಿರುವ ಪ್ರಕರಣದಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸುವುದಿಲ್ಲ, ಬೇಡವಾದ ಪ್ರಕರಣಗಳಲ್ಲಿ ಬಂಧಿಸಿ ಅನಗತ್ಯ ಕಿರುಕುಳ ನೀಡುತ್ತಾರೆ. ಇದೇ ಅವರಿಗೆ ಚಾಳಿಯಾಗಿದೆ ಎಂದು ತೀಕ್ಷ್ಣವಾಗಿ ನುಡಿಯಿತು.

ಪೊಲೀಸ್ ಸಮವಸ್ತ್ರ ಇದೆ ಎಂದು ಏನು ಬೇಕಾದರೂ ಮಾಡುತ್ತೀರಾ? ಬಂಧಿಸುವ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಅರ್ಜಿದಾರರನ್ನು ಬಂಧಿಸಿದ ಅಧಿಕಾರಿ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗುವುದು. ಮ್ಯಾಜಿಸ್ಪ್ರೇಟ್‌ ಕೂಡಾ ಇಂತಹ ಬಂಧನಕ್ಕೆ ಅವಕಾಶ ನೀಡಬಾರದು. ಭವಿಷ್ಯದಲ್ಲಿ ಈ ರೀತಿ ಕಾನೂನು ಉಲ್ಲಂಘಿಸಿ ಸಾರ್ವಜನಿಕರನ್ನು ಬಂಧಿಸುವ ಯಾವುದೇ ಪೊಲೀಸರನ್ನು ಅಮಾನತುಪಡಿಸಲಾಗುವುದು ಎಂದು ನ್ಯಾಯಪೀಠ ಎಚ್ಚರಿಕೆ ನೀಡಿತು.

ಅಂತಿಮವಾಗಿ, ಅರ್ಜಿದಾರರನ್ನು ಅನಗತ್ಯವಾಗಿ ಬಂಧಿಸಿದ್ದ ಇನ್‌ಸ್ಪೆಕ್ಟರ್‌ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿದ ನ್ಯಾಯಪೀಠ ಅರ್ಜಿ ವಿಚಾರಣೆ ಮುಂದೂಡಿತು.

ಪ್ರಕರಣವೇನು?
ಪ್ರೊಬೇಷನರಿ ಎಸ್‌ಐ ವರುಣ್‌ ಕುಮಾರ್‌ ಇನ್‌ಸ್ಟಾಗ್ರಾಂನಲ್ಲಿ ಪರಿಚಿತರಾಗಿದ್ದ ಮಹಿಳೆಯೊಂದಿಗೆ ಸ್ನೇಹ ಬೆಳೆಸಿ, ನಂತರ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದರು. ಬಳಿಕ ಮಹಿಳೆಗೆ ವಿವಾಹವಾಗಿದೆ ಎಂಬ ವಿಚಾರ ತಿಳಿದು ವರುಣ್ ಕುಮಾರ್ ಆಕೆಯೊಂದಿಗಿನ ಸಂಬಂಧ ಕಡಿತಗೊಳಿಸಿಕೊಂಡಿದ್ದರು. ಆನಂತರ, ಪ್ರೊಬೇಷನರಿ ಎಸ್‌ಐ ವಿರುದ್ಧ ಮಹಿಳೆ ದೂರು ನೀಡಿದ್ದರು. ದೂರು ಆಧರಿಸಿ ಪೊಲೀಸರು ವರುಣ್ ಕುಮಾರ್ ಹಾಗೂ ಆತನ ತಂದೆ, ತಾಯಿ, ಸಹೋದರ, ಸಹೋದರಿಯ ವಿರುದ್ಧವೂ ಎಫ್‌ಐಆರ್‌ ದಾಖಲಿಸಿದ್ದರು. ಜತೆಗೆ, ವರುಣ್ ಸಹೋದರ ದರ್ಶನ್ ಅವರನ್ನು ಚಿತ್ರದುರ್ಗ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದರು. ಇದರಿಂದ, ದರ್ಶನ್ ಮತ್ತವರ ಕುಟುಂಬ ಸದಸ್ಯರು ಹೈಕೋರ್ಟ್ ಮೊರೆ ಹೋಗಿದ್ದರು. ಜೂನ್ 18ರಂದು ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತ್ತಲ್ಲದೆ, ಅರ್ಜಿದಾರರನ್ನು ತಕ್ಷಣ ಬಿಡುಗಡೆ ಮಾಡುವಂತೆ ಆದೇಶಿಸಿತ್ತು.

Related Articles

Comments (0)

Leave a Comment