ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ವಕೀಲರಿಗೆ ಕಿರುಕುಳ ನೀಡುವ ಪ್ರವೃತ್ತಿ ಹೆಚ್ಚಳ; ಹೈಕೋರ್ಟ್ ಕಳವಳ
- by Legal Samachar Desk
- June 15, 2026
- 5 Views
ಬೆಂಗಳೂರು: ನ್ಯಾಯಾಲಯಗಳಲ್ಲಿ ವ್ಯಾಜ್ಯಕರ್ತರನ್ನು ಪ್ರತಿನಿಧಿಸುವ ವಕೀಲರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ಕಿರುಕುಳದ ಅಸ್ತ್ರವಾಗಿ ಬಳಸುತ್ತಿರುವುದು ಹೆಚ್ಚುತ್ತಿದೆ ಎಂದು ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ನಾಗರಬಾವಿ ಗ್ರಾಮದ ಸರ್ವೇ ಸಂಖ್ಯೆ 25/2ರಲ್ಲಿ 5.20 ಎಕರೆ ಜಮೀನಿನ ಸಿವಿಲ್ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಪಕ್ಷಗಾರರನ್ನು ಪ್ರತಿನಿಧಿಸುವ ವಕೀಲ ರಾಜೇಂದ್ರ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ರದ್ದು ಕೋರಿ ರಾಜೇಂದ್ರ ಸಲ್ಲಿಸಿದ್ದ ಅರ್ಜಿಯನ್ನು ಇತ್ತೀಚೆಗೆ ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಇಂತಹ ಪ್ರವೃತ್ತಿಯು ವಕೀಲರ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡಬಲ್ಲದು ಎಂದು ಹೇಳಿದೆ.
ಅರ್ಜಿದಾರರ ವಿರುದ್ಧದ ದೂರು ಹಾಗೂ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸಿರುವ ನ್ಯಾಯಪೀಠ, ಪ್ರತಿಯೊಬ್ಬ ವಕೀಲರೂ ಕೇವಲ ದಾವೆದಾರರ ಪರವಾಗಿ ಹಾಜರಾಗುತ್ತಾರೆ. ಅವರ ಮನೋಬಲ ಕುಂದಿಸಲು ಅತೃಪ್ತ ದಾವೆದಾರರು ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಮತ್ತು ದಾಖಲಿಸಿ ತನಿಖಾ ಪ್ರಕ್ರಿಯೆಗೆ ಒಳಪಡಿಸಿದರೆ ಅದು ವೃತ್ತಿಪರ ಜವಾಬ್ದಾರಿಗಳ ನಿರ್ಭೀತ ನಿರ್ವಹಣೆಯ ಮೇಲೆ ಗಾಢವಾದ ಪಾರ್ಶ್ವವಾಯು ಪರಿಣಾಮ ಬೀರುತ್ತದೆ ಎಂದು ಹೇಳಿದೆ.
ಅಗಾಧವಾದ ಅಪರಾಧವನ್ನು ಬಹಿರಂಗಪಡಿಸದ ಹೊರತು ಹಕ್ಕು ಪತ್ರಗಳು, ಕಂದಾಯ ನಮೂದುಗಳು, ವಕೀಲರ ಅಧಿಕಾರ ಅಥವಾ ಮಾರಾಟ ಪತ್ರಗಳಿಗೆ ಸಂಬಂಧಿಸಿದ ವಿವಾದಗಳಿಗೆ ಸಂಬಂಧಿಸಿದ ತನಿಖೆಯಲ್ಲಿ ಸಂಯಮದಿಂದ ಮುಂದಡಿ ಇರಿಸಬೇಕು ಎಂದು ಪ್ರಾಸಿಕ್ಯೂಷನ್‌ಗೆ ನ್ಯಾಯಪೀಠ ನಿರ್ದೇಶಿಸಿದೆ.
ಪ್ರಕರಣವೇನು?
ಅರ್ಜಿದಾರ ವಕೀಲರ ವಿರುದ್ಧ ವಂಚನೆ, ವಂಚಿಸುವ ಉದ್ದೇಶದಿಂದ ನಕಲು ಮಾಡುವುದು, ಕ್ರಿಮಿನಲ್ ಬೆದರಿಕೆ ಆರೋಪಗಳ ಅಡಿಯಲ್ಲಿ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು. ಈ ಕುರಿತ ಎಫ್‌ಐಆರ್ ಮತ್ತು ಇದಕ್ಕೆ ಸಂಬಂಧಿಸಿದಂತೆ 8ನೇ ಹೆಚ್ಚುವರಿ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ (ಎಸಿಜೆಎಂ) ಕೋರ್ಟ್‌ನಲ್ಲಿರುವ ವಿಚಾರಣೆ ರದ್ದು ಕೋರಿ ವಕೀಲ ಎಸ್.ರಾಜೇಂದ್ರ ಮತ್ತಿತರರು ಹೈಕೋರ್ಟ್‌ಗೆ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು.
Related Articles
Thank you for your comment. It is awaiting moderation.


Comments (0)