ಚುನಾವಣಾ ಪ್ರಚಾರಕ್ಕೆ ಮಕ್ಕಳ ಬಳಕೆ ಆರೋಪ; ಶಾರದಾ ಪೂರ್ಯಾನಾಯ್ಕ್ ವಿರುದ್ಧದ ಪ್ರಕರಣ ರದ್ದು
- by Jagan Ramesh
- June 12, 2026
- 24 Views
ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಪ್ರಚಾರಕ್ಕೆ ಮಕ್ಕಳನ್ನು ಬಳಸಿಕೊಂಡ ಆರೋಪದಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕಿ ಶಾರದಾ ಪೂರ್ಯಾನಾಯ್ಕ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
ಶಿವಮೊಗ್ಗದ ಕುಂಸಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಸಂಬಂಧ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣಾ ಪ್ರಕ್ರಿಯೆ ರದ್ದು ಕೋರಿ ಶಾರದಾ ಪೂರ್ಯಾನಾಯ್ಕ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಪುರಸ್ಕರಿಸಿದೆ.
ಪೊಲೀಸರು ಮೊದಲು ಪ್ರಕರಣವನ್ನು ಬಾಲ ಕಾರ್ಮಿಕ ಪದ್ದತಿ ನಿಷೇಧ ಕಾಯ್ದೆಯಡಿ ದಾಖಲಿಸಿಕೊಂಡು, ನಂತರ ಬಾಲ ನ್ಯಾಯ ಕಾಯ್ದೆಯಡಿ ಆರೋಪಪಟ್ಟಿ ಸಲ್ಲಿಸಿದ್ದಾರೆ. ಅಷ್ಟಕ್ಕೂ ಚುನಾವಣಾ ಪ್ರಚಾರದ ವೇಳೆ ಮಕ್ಕಳನ್ನು ಬಳಸಿಕೊಂಡಿಲ್ಲ. ಪ್ರಚಾರ ಸಭೆ ನಡೆಯುವ ಸ್ಥಳದ ಹತ್ತಿರದಲ್ಲೇ ಶಾಲೆ ಇತ್ತು. ಅದೇ ಸಮಯದಲ್ಲಿ ಶಾಲೆ ಬಿಟ್ಟಿದ್ದರಿಂದ ಮನೆಗೆ ಹೋಗುವ ಮಕ್ಕಳು ಚುನಾವಣಾ ಪ್ರಚಾರ ಸಭೆಯ ಬಳಿ ಅವರಾಗಿಯೇ ಬಂದು ನಿಂತಿದ್ದರು ಎಂಬ ಅಂಶವನ್ನು ಪರಿಗಣಿಸಿದ ನ್ಯಾಯಪೀಠ, ಶಾರದಾ ಪೂರ್ಯಾನಾಯ್ಕ್ ವಿರುದ್ಧದ ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿತು.
ಪ್ರಕರಣದ ಹಿನ್ನೆಲೆ:
ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಬಾಳಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಬ್ಬನಹಳ್ಳಿಯಲ್ಲಿ 2023ರ ಮೇ 2ರಂದು ಬೆಳಗ್ಗೆ 11.30ಕ್ಕೆ ಜೆಡಿಎಸ್ ಅಭ್ಯರ್ಥಿ ಶಾರದಾ ಪೂರ್ಯಾನಾಯ್ಕ್ ಅವರ ಚುನಾವಣಾ ಪ್ರಚಾರ ಸಭೆ ನಡೆದಿತ್ತು. ಅದರಲ್ಲಿ ಮಕ್ಕಳನ್ನು ಬಳಸಿಕೊಳ್ಳಲಾಗಿದೆ ಎಂದು ಚುನಾವಣಾ ಕರ್ತವ್ಯದಲ್ಲಿದ್ದ ಎಂ.ಇ. ಜಯಪ್ರಕಾಶ್ ಎಂಬುವರು ದೂರು ನೀಡಿದ್ದರು. ದೂರು ಆಧರಿಸಿ ಕುಂಸಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು.
Related Articles
Thank you for your comment. It is awaiting moderation.



Comments (0)