ಹಿಂದು ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ; ಸಾಕ್ಷಿದಾರನ ಮೊಬೈಲ್ ಫೋನ್ ಬಿಡುಗಡೆಗೆ ಹೈಕೋರ್ಟ್ ಆದೇಶ
- by Jagan Ramesh
- June 12, 2026
- 13 Views
ಬೆಂಗಳೂರು: ಹಿಂದು ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಸಾಕ್ಷಿಯೊಬ್ಬರಿಂದ ವಶಪಡಿಸಿಕೊಳ್ಳಲಾಗಿದ್ದ 2 ಮೊಬೈಲ್ಗಳಲ್ಲಿ ಅಪರಾಧಕ್ಕೆ ಪೂರಕವಾದ ಯಾವುದೇ ಅಂಶಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಮೊಬೈಲ್ಗಳನ್ನು ಮಾಲೀಕನ ವಶಕ್ಕೆ ಒಪ್ಪಿಸುವಂತೆ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹೈಕೋರ್ಟ್ ಆದೇಶಿಸಿದೆ.
ಮೊಬೈಲ್ ಫೋನ್ಗಳ ಬಿಡುಗಡೆಗೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದ ಎನ್ಐಎ ವಿಶೇಷ ನ್ಯಾಯಾಲಯದ ಆದೇಶ ರದ್ದುಕೋರಿ ಮಂಗಳೂರಿನ ಬಜಪೆ ಸಮೀಪದ ಮಲವೂರು ಗ್ರಾಮದ ಅಬ್ದುಲ್ ರಹೀಮಾನ್ (45) ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಹಾಗೂ ನ್ಯಾಯಮೂರ್ತಿ ಜಿ. ಬಸವರಾಜ ಅವರಿದ್ದ ವಿಭಾಗೀಯ ನ್ಯಾಯಪೀಠ ಇತ್ತೀಚೆಗೆ ಮಾನ್ಯ ಮಾಡಿದೆ.
ಅರ್ಜಿ ವಿಚಾರಣೆ ವೇಳೆ ಎನ್ಐಎ ಪರ ವಿಶೇಷ ಸರ್ಕಾರಿ ಅಭಿಯೋಜಕ ಪಿ. ಪ್ರಸನ್ನ ಕುಮಾರ್ ಅವರು ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಿ, ಮೇಲ್ಮನವಿದಾರರಿಂದ ಜಪ್ತಿ ಮಾಡಲಾಗಿದ್ದ ಮೊಬೈಲ್ ಫೋನ್ಗಳನ್ನು ದತ್ತಾಂಶ ಹೊರತೆಗೆಯಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್ಎಲ್) ಕಳುಹಿಸಲಾಗಿತ್ತು. ಅಲ್ಲಿಂದ ವರದಿ ಬಂದಿದ್ದು, ದತ್ತಾಂಶವನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗಿದೆ. ಆ ವರದಿಯಲ್ಲಿ ಮೇಲ್ಮನವಿದಾರರ ವಿರುದ್ಧ ಯಾವುದೇ ರೀತಿಯ ಆಕ್ಷೇಪಾರ್ಹ ಅಥವಾ ಅಪರಾಧಕ್ಕೆ ಸಂಬಂಧಿಸಿದ ಪುರಾವೆಗಳು ಪತ್ತೆಯಾಗಿಲ್ಲ. ಆದ್ದರಿಂದ, ಮೊಬೈಲ್ ಫೋನ್ಗಳನ್ನು ಬಿಡುಗಡೆ ಮಾಡಲು ಎನ್ಐಎಗೆ ಯಾವುದೇ ಆಕ್ಷೇಪಣೆ ಇಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಎನ್ಐಎ ಮೆಮೊ ದಾಖಲಿಸಿಕೊಂಡ ನ್ಯಾಯಪೀಠ, ಮೇಲ್ಮನವಿದಾರರ ಮೊಬೈಲ್ ಫೋನ್ ಬಿಡುಗಡೆಗೆ ನಿರಾಕರಿಸಿ ಬೆಂಗಳೂರಿನ 49ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ (ಎನ್ಐಎ ವಿಶೇಷ ನ್ಯಾಯಾಲಯ) 2026ರ ಮಾರ್ಚ್ 16ರಂದು ನೀಡಿದ್ದ ಆದೇಶ ರದ್ದುಪಡಿಸಿತಲ್ಲದೆ, ಜಪ್ತಿ ಮಾಡಲಾದ 2 ಮೊಬೈಲ್ ಫೋನ್ಗಳನ್ನು ತಕ್ಷಣವೇ ಮೇಲ್ಮನವಿದಾರರಿಗೆ ಬಿಡುಗಡೆ ಮಾಡುವಂತೆ ವಿಶೇಷ ನ್ಯಾಯಾಲಯಕ್ಕೆ ನಿರ್ದೇಶಿಸಿತು.
ಅರ್ಜಿದಾರರ ಪರವಾಗಿ ವಕೀಲ ಮುಹಮ್ಮದ್ ಇರ್ಷಾದ್ ಎಂ.ಹೆಚ್. ಅವರು ವಾದ ಮಂಡಿಸಿದ್ದರು.
ಪ್ರಕರಣವೇನು?
ಬಜಪೆಯ ಕಿನ್ನಿಪದವು ಜಂಕ್ಷನ್ ಬಳಿ 2025ರ ಮೇ 1ರಂದು ಹಿಂದು ಕಾರ್ಯಕರ್ತ ಸುಹಾಸ್ ಶೆಟ್ಟಿ ಎಂಬಾತನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಬಜಪೆ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ತನಿಖೆಯನ್ನು ಯುಎಪಿಎ ಕಾಯ್ದೆಯಡಿ ಎನ್ಐಎಗೆ ವಹಿಸಲಾಗಿತ್ತು.
ಪ್ರಕರಣ ಸಂಬಂಧ ಎನ್ಐಎ ತನಿಖಾಧಿಕಾರಿಗಳು ಸಲ್ಲಿಸಿದ್ದ ದೋಷಾರೋಪ ಪಟ್ಟಿಯಲ್ಲಿ ಮೇಲ್ಮನವಿದಾರರನ್ನು ಸಾಕ್ಷಿ 52 ಎಂದು ಉಲ್ಲೇಖಿಸಲಾಗಿತ್ತು. ತನಿಖೆಯ ಸಂದರ್ಭದಲ್ಲಿ ಆತನಿಂದ 2 ಮೊಬೈಲ್ ಫೋನ್ಗಳನ್ನು ಜಪ್ತಿ ಮಾಡಲಾಗಿತ್ತು. ಈ ಮೊಬೈಲ್ ಫೋನ್ಗಳನ್ನು ಮರಳಿ ನೀಡುವಂತೆ ಕೋರಿ ರಹೀಮಾನ್ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಫೋನ್ಗಳ ಮಾಲೀಕತ್ವದ ದಾಖಲೆಗಳನ್ನು ಒದಗಿಸಿಲ್ಲ ಮತ್ತು ಅವುಗಳ ಪರಿಶೀಲನೆ ಬಾಕಿ ಇದೆ ಎಂಬ ಕಾರಣ ನೀಡಿ ವಿಶೇಷ ನ್ಯಾಯಾಲಯ ಅರ್ಜಿ ತಿರಸ್ಕರಿಸಿತ್ತು. ಇದರಿಂದ, ಅಬ್ದುಲ್ ರಹೀಮಾನ್ ಹೈಕೋರ್ಟ್ ಮೆಟ್ಟಿಲೇರಿದ್ದರು.
Related Articles
Thank you for your comment. It is awaiting moderation.



Comments (0)