ಮರಣಶೈಯ್ಯೆಯಲ್ಲಿರುವ ಅಜ್ಜನ ಆರೈಕೆ ಮಾಡಲು ಮೊಮ್ಮಗನಿಗೆ ಪರೋಲ್ ನೀಡಿದ ಹೈಕೋರ್ಟ್
- by Prashanth Basavapatna
- June 9, 2026
- 4 Views
ಬೆಂಗಳೂರು: ಜೀವನದ ಅಂತಿಮ ದಿನಗಳನ್ನು ಎಣಿಸುತ್ತ ಮರಣಶೈಯ್ಯೆಯಲ್ಲಿರುವ 97 ವರ್ಷದ ಅಜ್ಜನ ಬಳಿ ಇದ್ದು ಆರೈಕೆ ಮಾಡಲು ಜೀವಾವಧಿ ಶಿಕ್ಷೆಗೆ ಒಳಗಾಗಿ ಕಾರಾಗೃಹದಲ್ಲಿರುವ ಮೊಮ್ಮಗನಿಗೆ ಹೈಕೋರ್ಟ್ ಮಾನವೀಯತೆಯ ಆಧಾರದಲ್ಲಿ 15 ದಿನಗಳ ತುರ್ತು ಪರೋಲ್ ಮಂಜೂರು ಮಾಡಿದೆ.
ಜೀವಾವಧಿ ಶಿಕ್ಷೆಗೊಳಗಾಗಿ ಮೈಸೂರು ಕೇಂದ್ರ ಕಾರಾಗೃಹದಲ್ಲಿರುವ ಎನ್.ಡಿ. ನವೀನ್ ಅಲಿಯಾಸ್ ಸಬ್ಸಿಡಿ ನವೀನ್‌ಗೆ ಪರೋಲ್ ನೀಡುವಂತೆ ಕೋರಿ ಆತನ ತಂದೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ನುಗ್ಗೇಹಳ್ಳಿ ಗ್ರಾಮದ ಎನ್.ಎನ್. ದೇವರಾಜು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಕೊಲೆ ಪ್ರಕರಣದಲ್ಲಿ ನವೀನ್‌ಗೆ 2024ರ ಡಿಸೆಂಬರ್ 18ರಂದು ಜೀವಾವಧಿ ಶಿಕ್ಷೆಯಾಗಿದೆ. ಅದಕ್ಕೂ ಮೊದಲು 2022ರ ಅಕ್ಟೋಬರ್ 2ರಿಂದ ಆತ ಜೈಲಿನಲ್ಲಿದ್ದಾನೆ. ಈಗ ಆತನ 97 ವರ್ಷದ ತಾತ ಮರಣಶೈಯ್ಯೆಯಲ್ಲಿದ್ದು, ತಾತನನ್ನು ಕಾಣಲು ಪರೋಲ್ ಮಂಜೂರು ಮಾಡಬೇಕು ಎಂದು ಕೋರಿದರು.
ಇದಕ್ಕೆ ಸರ್ಕಾರದ ಪರ ವಕೀಲರು ಈ ಹಿಂದೆ ಅಪರಾಧಿಗೆ ಮೂರು ಬಾರಿ ಪರೋಲ್ ಮಂಜೂರು ಮಾಡಲಾಗಿದೆ. ಆ ಎಲ್ಲ ಸಂದರ್ಭದಲ್ಲಿ ಆತ ಯಾವುದೇ ಪರೋಲ್ ನಿಯಮಗಳು ಅಥವಾ ಷರತ್ತುಗಳ ಉಲ್ಲಂಘನೆ ಮಾಡಿಲ್ಲ. ಪರೋಲ್ ಅವಧಿ ಮುಗಿದ ತಕ್ಷಣ ಆತ ಜೈಲಿಗೆ ಶರಣಾಗಿದ್ದಾನೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಇದನ್ನು ಪರಿಗಣಿಸಿದ ನ್ಯಾಯಪೀಠ, ಅಪರಾಧಿ ನವೀನ್ ವಾರದಲ್ಲಿ ಒಂದು ದಿನ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಹಾಜರಿ ಹಾಕಬೇಕು. ಪರೋಲ್ ಅವಧಿಯಲ್ಲಿ ಮತ್ತೆ ಯಾವುದೇ ಅಪರಾಧಿಕ ಕೃತ್ಯದಲ್ಲಿ ಭಾಗಿಯಾಗಬಾರದು ಎಂಬ ಷರತ್ತು ವಿಧಿಸಿ, 15 ದಿನಗಳ ತುರ್ತು ಪರೋಲ್ ಮಂಜೂರು ಮಾಡಿ ಆದೇಶಿಸಿತು.
Related Articles
Thank you for your comment. It is awaiting moderation.



Comments (0)