ದೇವರಾಜೇಗೌಡ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ; ಸಕ್ಷಮ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಲು ಹೈಕೋರ್ಟ್ ಅನುಮತಿ
- by Prashanth Basavapatna
- June 4, 2026
- 5 Views
ಬೆಂಗಳೂರು: ಹಾಸನದ ವಕೀಲ ಜಿ. ದೇವರಾಜೇಗೌಡ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದ ಆರೋಪ ಪಟ್ಟಿಯನ್ನು (ಅಂತಿಮ ತನಿಖಾ ವರದಿ) ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ತನಿಖಾಧಿಕಾರಿಗಳಿಗೆ ಹೈಕೋರ್ಟ್ ಅನುಮತಿಸಿದೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಜಿ. ದೇವರಾಜೇಗೌಡ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಸರ್ಕಾರದ ಪರ ವಕೀಲರು, ಪ್ರಕರಣದಲ್ಲಿ ನ್ಯಾಯಾಲಯದ ಅನುಮತಿ ಪಡೆಯದೆ ತನಿಖೆಯ ಅಂತಿಮ ವರದಿ ಸಲ್ಲಿಸುವಂತಿಲ್ಲ ಎಂದು ಮಧ್ಯಂತರ ಆದೇಶ ಮಾಡಲಾಗಿದೆ. ಆ ಆದೇಶ ತೆರವಿಗೆ ಕೋರಿ ಸರ್ಕಾರ ಮಧ್ಯಂತರ ಅರ್ಜಿ ಸಲ್ಲಿಸಿದೆ. ಪ್ರಕರಣದ ತನಿಖೆ ನಡೆಸಲಾಗಿದ್ದು, ಸದ್ಯ ಆರೋಪ ಪಟ್ಟಿ ಸಿದ್ದವಾಗಿದೆ. ಅದನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಅದಕ್ಕಾಗಿ ಅನುಮತಿ ನೀಡಬೇಕು ಎಂದು ಕೋರಿದರು.
ದೇವರಾಜೇಗೌಡ ಪರ ವಕೀಲರು, ಈ ಪ್ರಕರಣವು ಕಾನೂನಿನ ದುರ್ಬಳಕೆಗೆ ಸ್ಪಷ್ಟ ಉದಾಹರಣೆಯಾಗಿದೆ. ಮೊದಲಿಗೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿರಲಿಲ್ಲ. ದೂರುದಾರೆಯ ಪತಿ ಎನ್ನಲಾದ ವ್ಯಕ್ತಿ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದರು. ಅದು ಬಿ ವರದಿಯೊಂದಿಗೆ ಕೊನೆಗೊಂಡಿದ್ದಕ್ಕೆ ದೂರುದಾರೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ಅರ್ಜಿದಾರರ ವಿರುದ್ಧ ರಾಜಕೀಯ ಪ್ರೇರಿತವಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪ್ರಕರಣದಲ್ಲಿನ ಆರೋಪಗಳು ಬಹಳ ಗಂಭೀರವಾಗಿದೆ. ಸದ್ಯ ಆರೋಪ ಪಟ್ಟಿ ಸಿದ್ದವಾಗಿದೆ. ಪೊಲೀಸರು ಸಂಬಂಧಿಸಿದ ನ್ಯಾಯಾಲಯಕ್ಕೆ ಸಲ್ಲಿಸಲಿ. ಆ ಆರೋಪ ಪಟ್ಟಿಯನ್ನು ಪ್ರಶ್ನೆ ಮಾಡಿ ಮತ್ತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿತು. ಇದಕ್ಕೆ ದೇವರಾಜೇಗೌಡ ಪರ ವಕೀಲರು ಒಪ್ಪಿದ ಹಿನ್ನೆಲೆಯಲ್ಲಿ ಆರೋಪ ಪಟ್ಟಿ ಸಲ್ಲಿಸಲು ಪೊಲೀಸರಿಗೆ ಅನುಮತಿಸಿದ ನ್ಯಾಯಪೀಠ, ಚಾರ್ಜ್‌ಶೀಟ್ ಪ್ರಶ್ನಿಸಲು ಅರ್ಜಿದಾರರಿಗೆ ಸ್ವಾತಂತ್ರ್ಯ ಕಲ್ಪಿಸಿ ಅರ್ಜಿ ಇತ್ಯರ್ಥಪಡಿಸಿತು.
ಪ್ರಕರಣವೇನು?
ಮಹಿಳೆಯೊಬ್ಬರು ಹೊಳೆನರಸೀಪುರ ಠಾಣೆಗೆ 2024ರ ಏಪ್ರಿಲ್ 1ರಂದು ದೂರು ನೀಡಿ, ಹಾಸನದ ನಿಲವಾಗಿಲು ಗ್ರಾಮದ ರಸ್ತೆಯಲ್ಲಿ 30×40 ಅಡಿ ವಿಸ್ತೀರ್ಣದ ನಿವೇಶನವನ್ನು ನನ್ನ ಪತಿ ಹೊಂದಿದ್ದಾರೆ. ಅದನ್ನು ಮಾರಾಟ ಮಾಡುವ ವಿಚಾರವಾಗಿ ದೇವರಾಜೇಗೌಡ ಅವರನ್ನು ಭೇಟಿ ಮಾಡಿದ್ದೆ. ಅಂದಿನಿಂದ ತನ್ನೊಂದಿಗೆ ಅವರು ಮಾತನಾಡುತ್ತಿದ್ದರು. ಆ ನಿವೇಶನದಲ್ಲಿ ನಾನೇ ಮನೆಯನ್ನು ಕಟ್ಟಿಸಿಕೊಡುತ್ತೇನೆ. ಉಪ ವಿಭಾಗಾಧಿಕಾರಿ ನನಗೆ ಪರಿಚಯವಿದ್ದು, ನಿಮ್ಮ ಕೆಲಸ ಮಾಡಿಕೊಡುತ್ತೇನೆ. ನೀನು ಒಬ್ಬಳೇ ಹಾಸನಕ್ಕೆ ಬರಬೇಕು ಎಂದು ಹೇಳಿದ್ದರು. ನಾನು ಹಾಸನಕ್ಕೆ ಹೋದಾಗ ಹೊಳೆನರಸೀಪುರ ರಸ್ತೆಗೆ ಹೊಂದಿಕೊಂಡಿರುವ ಬಿಯರ್ ತಯಾರಿಕಾ ಘಟಕದ ಹಿಂದಿರುವ ಪ್ರದೇಶಕ್ಕೆ ಕರೆದೊಯ್ದು, ಮೈ ಕೈಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದರು. ನಂತರ, ಮನೆಗೆ ಕರೆದೊಯ್ದು ದೈಹಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.
ದೇವರಾಜೇಗೌಡ ನನ್ನನ್ನು ದೈಹಿಕವಾಗಿ ಬಳಸಿಕೊಂಡು ಜೀವ ಬೆದರಿಕೆ ಹಾಕಿದ್ದರು. ಫೆಬ್ರವರಿ 2ರಂದು ನಾನು ಹೇಳಿದ ಜಾಗಕ್ಕೆ ನೀನು ಬರಲಿಲ್ಲ ಎಂದರೆ ನಾನು ನಿನಗೆ ಕಳುಹಿಸಿರುವ ಪೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇನೆ ಎಂದು ಬೆದರಿಸಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದರು. ಈ ದೂರಿನ ಆಧಾರದಲ್ಲಿ ಲೈಂಗಿಕ ದೌರ್ಜನ್ಯ, ಲೈಂಗಿಕ ಕಿರುಕುಳ, ಜೀವ ಬೆದರಿಕೆ, ಅವಮಾನ ಮಾಡಿರುವುದು ಹಾಗೂ ಇನ್ನಿತರ ಆರೋಪಗಳಲ್ಲಿ ದೇವರಾಜೇಗೌಡ ವಿರುದ್ಧ ಪ್ರಕರಣ ದಾಖಲಾಗಿದೆ.
Related Articles
Thank you for your comment. It is awaiting moderation.



Comments (0)