ಪಿಪಿಇ ಕಿಟ್, ವೈದ್ಯಕೀಯ ಉಪಕರಣ ಖರೀದಿಯಲ್ಲಿ ಅವ್ಯವಹಾರ ಆರೋಪ; ಮಧ್ಯಂತರ ಆದೇಶ ತೆರವಿಗೆ ಹೈಕೋರ್ಟ್ ನಕಾರ
- by Jagan Ramesh
- April 28, 2026
- 115 Views
ಬೆಂಗಳೂರು: ಕೋವಿಡ್-19 ಸಂದರ್ಭದಲ್ಲಿ ಪಿಪಿಇ ಕಿಟ್ ಹಾಗೂ ಕೆಲ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ 167 ಕೋಟಿ ರೂ. ಹಗರಣ ಸಂಬಂಧ ಆರೋಪಿತರ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಮತ್ತು ದೋಷಾರೂಪ ಪಟ್ಟಿ ಸಲ್ಲಿಸದಂತೆ ನೀಡಿದ್ದ ಮಧ್ಯಂತರ ಆದೇಶ ತೆರವುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.
ಹಗರಣದ ಆರೋಪ ಸಂಬಂಧ ವೈದ್ಯಕೀಯ ಶಿಕ್ಷಣ ಇಲಾಖೆಯ ಮುಖ್ಯ ಲೆಕ್ಕಾಧಿಕಾರಿ ಹಾಗೂ ಹಣಕಾಸು ಸಲಹೆಗಾರ ಡಾ. ವಿಷ್ಣುಪ್ರಸಾದ್ ಅವರು 2024ರ ಡಿಸೆಂಬರ್ 12ರಂದು ನೀಡಿದ ದೂರಿನ ಆಧಾರದಲ್ಲಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಣಾ ಪ್ರಕ್ರಿಯೆ ರದ್ದು ಕೋರಿ ಪಿಪಿಇ ಕಿಟ್ ಪೂರೈಸಿದ್ದ ಲಾಜ್ ಎಕ್ಸಪೋರ್ಟ್ ಲಿಮಿಟೆಡ್ ಹಾಗೂ ಪ್ರೂಡಂಟ್ ಮ್ಯಾನೇಜ್ಮೆಂಟ್ ಸಲೂಷನ್ ಕಂಪನಿಗಳು ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಈ ವೇಳೆ ಸರ್ಕಾರದ ಪರ ವಕೀಲರು, ಇದು ಹಣ ದುರುಪಯೋಗದ ಪ್ರಕರಣವಾಗಿದೆ. ಪಿಪಿಇ ಕಿಟ್ ಗಳನ್ನು ಪೂರೈಸಲಾಗಿಲ್ಲ ಎಂಬುದು ಸಾಬೀತಾಗಿದೆ. ತನಿಖೆ ಬಹುತೇಕ ಪೂರ್ಣಗೊಂಡಿದೆ. ಮುಂದಿನ ಪ್ರಕ್ರಿಯೆಗೆ ಅನುಕೂಲವಾಗಲು ಮಧ್ಯಂತರ ಆದೇಶ ತೆರವುಗೊಳಿಸುವಂತೆ ಕೋರಿದರು.
ಆದರೆ, ಮಧ್ಯಂತರ ಆದೇಶ ತೆರವುಗೊಳಿಸಲು ನಿರಾಕರಿಸಿದ ನ್ಯಾಯಪೀಠ ವಿಚಾರಣೆಯನ್ನು ಜೂನ್ 2ಕ್ಕೆ ಮುಂದೂಡಿತು.
ಪ್ರಕರಣದಲ್ಲಿ ಲಾಜ್ ಎಕ್ಸ್‌ಪೋರ್ಟ್ಸ್ ಲಿಮಿಟೆಡ್ ಮತ್ತು ಪ್ರೂಡೆಂಟ್ ಮ್ಯಾನೇಜ್‌ಮೆಂಟ್ ಸೊಲ್ಯೂಷನ್ಸ್ ನಿರ್ದೇಶಕರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ 2024ರ ಡಿಸೆಂಬರ್ 16ರಂದು ಹೈಕೋರ್ಟ್ ಮಧ್ಯಂತರ ಆದೇಶ ನೀಡಿತ್ತು.
Related Articles
Thank you for your comment. It is awaiting moderation.


Comments (0)