ಜೀವಾವಧಿ ಶಿಕ್ಷೆ ರದ್ದು ಕೋರಿ ವಿನಯ ಕುಲಕರ್ಣಿ, ಚಂದ್ರಶೇಖರ ಇಂಡಿ ಮೇಲ್ಮನವಿ; ಸಿಬಿಐಗೆ ಹೈಕೋರ್ಟ್ ನೋಟಿಸ್
- by Jagan Ramesh
- April 28, 2026
- 18 Views
ಬೆಂಗಳೂರು: ಧಾರವಾಡದ ಬಿಜೆಪಿ ಮುಖಂಡ ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ದೋಷಿ ಎಂದು ತೀರ್ಮಾನಿಸಿ, ಜೀವಾವಧಿ ಶಿಕ್ಷೆ ವಿಧಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಹಾಗೂ ಚಂದ್ರಶೇಖರ ಇಂಡಿ ಸಲ್ಲಿಸಿರುವ ಮೇಲ್ಮನವಿಗಳ ಸಂಬಂಧ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ತೀರ್ಪು ರದ್ದುಕೋರಿ ಅಪರಾಧಿಗಳಾದ ವಿನಯ ಕುಲಕರ್ಣಿ (ಎ15) ಹಾಗೂ ಚಂದ್ರಶೇಖರ್ ಇಂಡಿ ಅಲಿಯಾಸ್ ಚಂದು ಮಾಮ (ಎ16) ಸಲ್ಲಿಸಿರುವ ಕ್ರಿಮಿನಲ್ ಮೇಲ್ಮನವಿಗಳನ್ನು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಹಾಗೂ ನ್ಯಾಯಮೂರ್ತಿ ಟಿ. ವೆಂಕಟೇಶ್ ನಾಯ್ಕ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಪ್ರತಿವಾದಿ ಸಿಬಿಐಗೆ ನೋಟಿಸ್ ಜಾರಿಗೊಳಿಸಿತಲ್ಲದೆ, ವಿಚಾರಣಾ ನ್ಯಾಯಾಲಯದ ದಾಖಲೆಗಳನ್ನು ಪಡೆದುಕೊಳ್ಳುವಂತೆ ಹೈಕೋರ್ಟ್ ರಿಜಿಸ್ಟ್ರಿಗೆ ಸೂಚಿಸಿ ಅರ್ಜಿ ವಿಚಾರಣೆ ಮುಂದೂಡಿತು.
ಇದಕ್ಕೂ ಮುನ್ನ ವಿನಯ ಕುಲಕರ್ಣಿ ಪರ ಹಾಜರಿದ್ದ ಹಿರಿಯ ವಕೀಲ ಸಿ.ವಿ. ನಾಗೇಶ್ ಅವರು, ಯಾವುದೇ ಸಾಕ್ಷಿ ಇಲ್ಲದಿದ್ದರೂ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ವಿಚಾರಣೆಯ ಹಂತದಲ್ಲಿ ವಿನಯ ಕುಲಕರ್ಣಿ ಮತ್ತು ಚಂದ್ರಶೇಖರ್ ಜಾಮೀನಿನ ಮೇಲೆ ಹೊರಗಿದ್ದರು. ಮೆರಿಟ್ ಆಧರಿಸಿ ಆರೋಪಿಗಳಿಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ನ್ಯಾಯದಾನದಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎಂದು ಕೆಲಕಾಲ ಆರೋಪಿಗಳ ಜಾಮೀನು ರದ್ದುಪಡಿಸಿ, ಜೈಲಿಗೆ ಕಳುಹಿಸಲಾಗಿತ್ತು. ಆನಂತರ, ಮತ್ತೆ ನ್ಯಾಯಾಲಯ ಜಾಮೀನು ನೀಡಿತ್ತು. ಏಳು ಪ್ರತ್ಯಕ್ಷದರ್ಶಿಗಳು, ಉಳಿದೆಲ್ಲ ಪ್ರಾಸಿಕ್ಯೂಷನ್ ಸಾಕ್ಷಿಗಳು ಪ್ರತಿಕೂಲವಾಗಿವೆ. ಆದ್ದರಿಂದ, ಮೇಲ್ಮನವಿಯನ್ನು ವಿಚಾರಣೆಗೆ ಪರಿಗಣಿಸಿ, ದಾಖಲೆ ಸಲ್ಲಿಸಲು ನಿರ್ದೇಶಿಸಬೇಕು ಎಂದು ಕೋರಿದರು.
ಚಂದ್ರಶೇಖರ್ ಇಂಡಿ ಪರ ಹಿರಿಯ ವಕೀಲ ಎಂ. ನಾಗಮುತ್ತು ಅವರು, ಪಿತೂರಿ ಆರೋಪಕ್ಕೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಶಿಕ್ಷೆ ಅಮಾನತು ಮಾಡಬೇಕು ಎಂದು ಕೋರುತ್ತಿದ್ದೇವೆ. 16ನೇ ಆರೋಪಿಯಾದ ಚಂದ್ರಶೇಖರ್ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ. ಅಪ್ರೂವರ್ ಆಗಿದ್ದ ವ್ಯಕ್ತಿ ಪ್ರತಿಕೂಲ ಸಾಕ್ಷಿಯಾಗಿ ಬದಲಾಗಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಆಗ ನ್ಯಾಯಪೀಠ, ಮೆರಿಟ್ ಮೇಲೆ ಈಗ ವಿಚಾರಣೆ ನಡೆಸುವುದಿಲ್ಲ ಎಂದು ತಿಳಿಸಿ, ಸಿಬಿಐಗೆ ನೋಟಿಸ್ ಜಾರಿಗೊಳಿಸಿತು. ಈ ಮಧ್ಯೆ, ವಿನಯ ಕುಲಕರ್ಣಿ ಪರ ವಕೀಲರು, ಏಪ್ರಿಲ್ 30ರಂದು ಮೇಲ್ಮನವಿಯನ್ನು ವಿಚಾರಣೆಗೆ ಪಟ್ಟಿ ಮಾಡುವಂತೆ ಮನವಿ ಮಾಡಿದಾಗ, ಯಾವುದೇ ತುರ್ತು ಸಂದರ್ಭವಿದ್ದರೆ ರಜಾಕಾಲದ ನ್ಯಾಯಪೀಠದ ಮುಂದೆ ಮನವಿ ಸಲ್ಲಿಸಲು ಮೇಲ್ಮನವಿದಾರರು ಸ್ವತಂತ್ರರಿದ್ದಾರೆ ಎಂದು ಹೇಳಿತು.
ಇದಕ್ಕೆ ಆಕ್ಷೇಪಿಸಿದ ಸಿಬಿಐ ಪರ ವಕೀಲ ರಾಹುಲ್ ಕೃಷ್ಣಾರೆಡ್ಡಿ ಅವರು, ವಿಚಾರಣಾ ನ್ಯಾಯಾಲಯದ ತೀರ್ಪು 680 ಪುಟಗಳಷ್ಟಿದ್ದು, ಆಕ್ಷೇಪಣೆ ಸಲ್ಲಿಸಲು ಹೆಚ್ಚಿನ ಸಮಯಾವಕಾಶ ಬೇಕಾಗುತ್ತದೆ. ಹೀಗಾಗಿ, ನಮ್ಮ ಆಕ್ಷೇಪಣೆಯನ್ನೂ ದಾಖಲಿಸಬೇಕು ಎಂದರು. ಇದನ್ನೂ ಆದೇಶದಲ್ಲಿ ದಾಖಲಿಸಿದ ನ್ಯಾಯಪೀಠ ಅರ್ಜಿ ವಿಚಾರಣೆ ಮುಂದೂಡಿತು.
ಯೋಗೀಶ ಗೌಡರ ಕೊಲೆ ಪ್ರಕರಣದಲ್ಲಿ ಮೇಲ್ಮನವಿದಾರರಾದ ವಿನಯ ಕುಲಕರ್ಣಿ, ಚಂದ್ರಶೇಖರ್ ಇಂಡಿ ಸೇರಿ 17 ಮಂದಿಯನ್ನು ದೋಷಿಗಳೆಂದು ತೀರ್ಮಾನಿಸಿ 2026ರ ಏಪ್ರಿಲ್ 15ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ತೀರ್ಪು ನೀಡಿದ್ದರು. ಏಪ್ರಿಲ್ 17ರಂದು ಶಿಕ್ಷೆ ಪ್ರಮಾಣ ಪ್ರಕಟಿಸಿದ್ದ ನ್ಯಾಯಾಲಯ, 16 ಮಂದಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿತ್ತು. ಈ ತೀರ್ಪು ರದ್ದು ಕೋರಿ ವಿನಯ ಕುಲಕರ್ಣಿ ಹಾಗೂ ಚಂದ್ರಶೇಖರ್ ಇಂಡಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ಜತೆಗೆ, ಜೀವಾವಧಿ ಶಿಕ್ಷೆ ವಿಧಿಸಲಾಗಿರುವ ತೀರ್ಪನ್ನು ಅಮಾನತಿನಲ್ಲಿರಿಸಿ, ಜಾಮೀನು ಮಂಜೂರು ಮಾಡಬೇಕು ಹಾಗೂ ಪ್ರಕರಣದಲ್ಲಿ ದೋಷಿಗಳೆಂದು ತೀರ್ಮಾನಿಸಿ ಹೊರಡಿಸಿರುವ ತೀರ್ಪು ಅನುಷ್ಠಾನಗೊಳಿಸದಂತೆ ತಡೆಯಾಜ್ಞೆ ನೀಡುವಂತೆ ಕೋರಿ ಎರಡು ಮಧ್ಯಂತರ ಅರ್ಜಿಗಳನ್ನೂ ಸಲ್ಲಿಸಿದ್ದಾರೆ.
Related Articles
Thank you for your comment. It is awaiting moderation.



Comments (0)