ಪ್ರತ್ಯೇಕವಾಗಿ ವಾಸಿಸುತ್ತಿದ್ದ ಪತ್ನಿಯೊಂದಿಗೆ ಬಲವಂತದ ಸಂಭೋಗ; ಪತಿ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ
- by LegalSamachar
- April 9, 2026
- 10 Views
ಬೆಂಗಳೂರು: ಪ್ರತ್ಯೇಕವಾಗಿ ವಾಸವಾಗಿರುವ ಪತ್ನಿಯೊಂದಿಗೆ ಬಲವಂತವಾಗಿ ದೈಹಿಕ ಸಂಪರ್ಕ ನಡೆಸಿದ ಆರೋಪದಲ್ಲಿ ಪತಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಬಲವಂತದ ಸಂಭೋಗ, ಜೀವ ಬೆದರಿಕೆ ಮತ್ತು ಮನೆಯ ಅತಿಕ್ರಮ ಪ್ರವೇಶ ಆರೋಪದಲ್ಲಿ ನಗರದ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪತ್ನಿ ದಾಖಲಿಸಿರುವ ದೂರಿಗೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದು ಕೋರಿ ತಮಿಳುನಾಡಿನ ದಕ್ಷಿಣ ಮಧುರೈ ಜಿಲ್ಲೆಯ ನಿವಾಸಿ ಆರ್. ನಿಶಾಂತ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.
ಪತಿಯ ವಾದವೇನು?
ಅರ್ಜಿ ವಿಚಾರಣೆ ವೇಳೆ ಆರೋಪಿ ಪತಿಯ ಪರ ವಕೀಲರು ವಾದ ಮಂಡಿಸಿ, ದೂರುದಾರ ಪತ್ನಿ ತನ್ನ ಖಾಸಗಿ ಭಾಗದಲ್ಲಿ ಉಂಟಾದ ನೋವಿನಿಂದ ರಾತ್ರಿ ಆಸ್ಪತ್ರೆಯ ತುರ್ತು ಘಟಕಕ್ಕೆ ದಾಖಲಾಗಿ ಚಿಕಿತ್ಸೆ ಪಡೆದಿದ್ದೇನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆದರೆ, ಆಸ್ಪತ್ರೆಯ ದಾಖಲಾತಿಗಳಲ್ಲಿ ಪತ್ನಿ ಹೊರರೋಗಿಗಳ ವಿಭಾಗಕ್ಕೆ ದಾಖಲಾಗಿರುವುದಾಗಿ ಉಲ್ಲೇಖವಾಗಿದೆ. ಪತ್ನಿಯ ಅಥವಾ ಪತಿಯ ದೇಹದ ಮೇಲೆ ಯಾವೊಂದು ಗೀಚು ಸಹ ಇರಲಿಲ್ಲ. ಸಂಭೋಗ ನಡೆದಿಲ್ಲ ಎಂಬುದಾಗಿ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ವರದಿ ಹೇಳುತ್ತದೆ. ಇದರಿಂದ, ದೂರುದಾರೆ ತನ್ನ ಪತಿಯನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿರುವುದು ತಿಳಿಯುತ್ತದೆ ಎಂದರು.
ಖುದ್ದು ವಾದ ಮಂಡಿಸಿದ ದೂರುದಾರೆ ಪತ್ನಿ, ಘಟನೆ ನಡೆದ ದಿನ ನಾನು ಮುಂಜಾನೆ 4.40ಕ್ಕೆ ತುರ್ತು ನಿಗಾ ಘಟಕ್ಕೆ ದಾಖಲಾಗಿದ್ದೇನೆ. ಆ ಸಮಯದಲ್ಲಿ ಹೊರರೋಗಿಯ ವಿಭಾಗ ತೆರೆದಿರಲಿಲ್ಲ. ಆ ಸಮಯದಲ್ಲಿ ಸ್ತ್ರೀರೋಗತಜ್ಞೆ ಇರಲಿಲ್ಲ. ಅದಕ್ಕೆ ನೀವು ದಾಖಲಾಗಬೇಕೆ? ಎಂದು ನನಗೆ ಆಸ್ಪತ್ರೆಯ ಸಿಬ್ಬಂದಿ ಕೇಳಿದ್ದರು. ಆ ದಾಖಲಾತಿ ಫಾರಂನಲ್ಲಿ ಆ ಸಮಯ ಉಲ್ಲೇಖವಾಗಿದೆ. ಇನ್ನೂ ಪೊಲೀಸರು ಸಂಗ್ರಹಿಸಿರುವ ಸಿಡಿಆರ್ನಿಂದ ಘಟನೆ ನಡೆದಾಗ ಪತಿ ಘಟನಾ ಸ್ಥಳದಲ್ಲಿರುವುದು ದೃಢಪಟ್ಟಿದೆ ಎಂದು ತಿಳಿಸಿದರು.
ಆರೋಪಿ ಪರ ವಕೀಲರು, ಪತ್ನಿ ದಾಖಲಿಸಿರುವ ಕ್ರೌರ್ಯ ಪ್ರಕರಣ ಕುರಿತು ಮಾತುಕತೆ ನಡೆಸಲು ದೂರುದಾರೆಯೇ ಅರ್ಜಿದಾರರನ್ನು ಮನೆಗೆ ಕರೆದಿದ್ದರು. ಆ ವೇಳೆ ಸಂಭೋಗ ನಡೆದೇ ಇಲ್ಲ ಎಂದು ಪ್ರತಿಪಾದಿಸಿದರು.
ಆಗ ನ್ಯಾಯಪೀಠ, ಪತಿಯ ಪರ ವಕೀಲರನ್ನು ಉದ್ದೇಶಿಸಿ, ಸಂಭೋಗ ನಡೆದಿಲ್ಲ ಎಂದು ಪತಿ ಹೇಳುತ್ತಿದ್ದಾರೆ. ಆದರೆ, ವಿಚಾರಣಾ ನ್ಯಾಯಾಲಯ ವಿಚಾರಣೆ ರದ್ದತಿಗೆ ಕೋರಿದ ಈ ಅರ್ಜಿಯ ವಿಚಾರಣೆ ವೇಳೆ ಘಟನೆ ನಡೆದ ದಿನ ಏನೆಲ್ಲ ಸಂಭವಿಸಿದೆ ಎಂದು ಹೈಕೋರ್ಟ್ ನಿರ್ಧರಿಸಬೇಕೆ? ಈ ಕುರಿತು ವಿಚಾರಣಾ ನ್ಯಾಯಾಲಯವೇ ಸಾಕ್ಷ್ಯಧಾರಗಳ ವಿಚಾರಣೆ ನಡೆಸಿ ನಿರ್ಧರಿಸಬೇಕಲ್ಲವೇ? ಪತಿ ಮತ್ತು ಪತ್ನಿ ಪ್ರತ್ಯೇಕಗೊಂಡು ವಾಸ ಮಾಡುತ್ತಿದ್ದಾಗ, ಪತ್ನಿಯೊಂದಿಗೆ ಬಲವಂತದ ಸಂಭೋಗ ನಡೆಸಿದರೆ ಅದು ಅತ್ಯಾಚಾರ ಅಪರಾಧವಾಗುತ್ತದೆ ಎಂದು ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 376 (ಬಿ) ಹೇಳುತ್ತದೆ. ಈ ಪ್ರಕರಣದಲ್ಲಿ ಪತಿ ಮತ್ತು ಪತ್ನಿ ಎರಡು ವರ್ಷಗಳ ಹಿಂದೆಯೇ ಪ್ರತ್ಯೇಕಗೊಂಡಿದ್ದಾರೆ. ಮತ್ತೇಕೆ ಪತ್ನಿ ಮನೆಗೆ ಪತಿ ಹೋದರು? ಎಂದು ಪ್ರಶ್ನಿಸಿತು.
ಮುಂದುವರಿದು, ಕ್ರೌರ್ಯ ಅಪರಾಧ ಮತ್ತು ಜೀವನಾಂಶ ವಿಚಾರಗಳ ವಿಚಾರಣೆ ವೇಳೆ, 2016ರಲ್ಲಿಯೇ ಪತ್ನಿ ಸ್ವಯಿಚ್ಛೆಯಿಂದ ಮನೆಬಿಟ್ಟು ಹೋಗಿದ್ದಾರೆ ಎಂಬುದಾಗಿ ಪತಿಯೇ ಹೇಳಿದ್ದಾರೆ. ಆದರೆ, ಅತ್ಯಾಚಾರ ಕೇಸ್ ಬಂದಾಗ ನಾವು ಜತೆಯಾಗಿ ಇದ್ದೇವೆ ಎಂದು ಪತಿ ಹೇಳುತ್ತಾರೆ. ಯಾವುದೇ ಕಾರಣಕ್ಕೂ ಅತ್ಯಾಚಾರ ಪ್ರಕರಣ ರದ್ದುಪಡಿಸಲಾಗದು. ದೋಷಾರೋಪಗಳನ್ನು ಕೈ ಬಿಡಲು ಕೋರಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ. ಇಲ್ಲವೇ ಈ ಅರ್ಜಿಯನ್ನು ಮೆರಿಟ್ ಮೇಲೆ ವಿಚಾರಣೆ ನಡೆಸಿ ತೀರ್ಪು ನೀಡಬೇಕೆಂದರೆ ಹೇಳಿ, ಕೂಡಲೇ ತೀರ್ಪು ಬರೆಸಲಾಗುವುದು ಎಂದು ಪತಿ ಪರ ವಕೀಲರಿಗೆ ಸೂಚಿಸಿತು.
ಈ ವೇಳೆ ದೂರುದಾರ ಪತ್ನಿಯು, 2016ರಿಂದ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದೇವೆ ಎಂದು ಪತಿ ಹೇಳುತ್ತಿದ್ದಾರೆ. ಆದರೆ, 2019ರಿಂದ ಪ್ರತ್ಯೇಕವಾಗಿ ವಾಸವಾಗಿದ್ದೇವೆ ಎಂದು ನಾನು ಹೇಳುತ್ತಿದ್ದೇನೆ. ಘಟನೆಯು 2021ರ ಅಂತ್ಯದಲ್ಲಿ ನಡೆದಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಪತಿಯ ಪರ ವಕಿಲರು, ಆರೋಪಗಳನ್ನು ಕೈ ಬಿಡಲು ಕೋರಿ ವಿಚಾರಣಾ ನ್ಯಾಯಾಲಲಯಕ್ಕೆ ಅರ್ಜಿ ಸಲ್ಲಿಸುವ ಸ್ವಾತಂತ್ರ್ಯ ಕಾಯ್ದಿರಿಸಬೇಕು ಎಂದು ಎಂದು ಕೋರಿದರು.
ಅಂತಿಮವಾಗಿ ನ್ಯಾಯಪೀಠ, ಆರೋಪಗಳನ್ನು ಕೈಬಿಡಲು ಕೋರಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಪತಿಗೆ ಅನುಮತಿಸಿ ಅರ್ಜಿ ವಜಾಗೊಳಿಸಿತು.
Related Articles
Thank you for your comment. It is awaiting moderation.



Comments (0)