ದಕ್ಷಿಣ ಕೊರಿಯಾ ಯುವತಿಗೆ ಲೈಂಗಿಕ ಕಿರುಕುಳ ಆರೋಪ; ಬಿಐಎಎಲ್ ಅಧಿಕಾರಿ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ
- by Prashanth Basavapatna
- April 6, 2026
- 111 Views
ಬೆಂಗಳೂರು: ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಕ್ಷಿಣ ಕೊರಿಯಾದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಂಬಂಧ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಎಐಎಲ್) ಸಿಬ್ಬಂದಿಯ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಪ್ರಕರಣ ರದ್ದು ಕೋರಿ ಬಿಐಎಎಲ್ ಸಿಬ್ಬಂದಿ ಮೊಹಮ್ಮದ್ ಅಫಾನ್ ಅಹ್ಮದ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಜಾಗೊಳಿಸಿದೆ.
ವಿಚಾರಣೆ ವೇಳೆ ನ್ಯಾಯಪೀಠ, ಸಂತ್ರಸ್ತೆಯು ಬೇರೊಂದು ದೇಶದ ಮಹಿಳೆಯಾಗಿದ್ದು, ಅರ್ಜಿದಾರ ಆರೋಪಿ ಏನು ಮಾಡಿದ್ದಾನೆ ಎಂಬುದನ್ನು ಆಕೆ ವಿವರಿಸಿದ್ದಾರೆ. ಆಕೆಯನ್ನು ಪುರುಷರ ಶೌಚಗೃಹಕ್ಕೆ ಕರೆದೊಯ್ದಿದ್ದೇಕೆ? ಎಂದು ತೀಕ್ಷ್ಣವಾಗಿ ಪ್ರಶ್ನಿಸಿತಲ್ಲದೆ, ಸಂತ್ರಸ್ತೆಯನ್ನು ಪುರುಷರ ಶೌಚಗೃಹಕ್ಕೆ ಕರೆದೊಯ್ದು ಎರಡೂ ಕೈಗಳನ್ನು ಅರ್ಧ ಎತ್ತಿ (ಟಿ ಪೊಷಿಷನ್) ನಿಲ್ಲುವಂತೆ ಮಾಡಿ, ಆಕೆಯ ಅನುಮತಿ ಇಲ್ಲದೇ ಖಾಸಗಿ ಅಂಗಗಳನ್ನು ಮುಟ್ಟಿದ್ದೀರಿ. ನೀವೆಂಥಾ ಅಧಿಕಾರಿ? ನಿಮ್ಮನ್ನು ಸುಮ್ಮನೆ ಬಿಡಬೇಕೆ? ಹೇಳಿ.. ಮಹಿಳಾ ಶೌಚಗೃಹದಲ್ಲಿ ಬೇರೊಬ್ಬರು ಇದ್ದರು ಎಂದು ಸಮರ್ಥನೆ ಬೇರೆ ನೀಡಿದ್ದೀರಿ ಎಂದು ಅರ್ಜಿದಾರರ ನಡೆಯನ್ನು ತೀವ್ರವಾಗಿ ಖಂಡಿಸಿ, ಅರ್ಜಿ ವಜಾಗೊಳಿಸಿತು.
ಪ್ರಕರಣವೇನು?
ದಕ್ಷಿಣ ಕೊರಿಯಾದ 32 ವರ್ಷದ ಯುವತಿ ನೀಡಿರುವ ದೂರಿನ ಪ್ರಕಾರ, 2026ರ ಜನವರಿ 19ರಂದು ದೂರುದಾರ ಯುವತಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೊರಿಯಾಗೆ ತೆರಳು ಆಗಮಿಸಿದ್ದರು. ಇಮಿಗ್ರೇಷನ್ ತಪಾಸಣೆ ಮುಗಿಸಿ ತೆರಳುವ ವೇಳೆ ಬಿಎಐಎಲ್ನ ಸಿಬ್ಬಂದಿಯೊಬ್ಬರು ಆಕೆಯ ಬಳಿ ಬಂದು ವಿಮಾನ ಟಿಕೆಟ್ ಪರಿಶೀಲಿಸಿದ್ದರು. ಆನಂತರ, ಆಕೆಯ ಚೆಕ್ ಇನ್ ಬ್ಯಾಗೇಜ್ ಕುರಿತು ಸಮಸ್ಯೆ ಇದೆ ಎಂದು ಹೇಳಿ, ಬ್ಯಾಗ್ ತಪಾಸಣೆ ಮಾಡಿ ಅದರಲ್ಲಿ ಬೀಪ್ ಶಬ್ದ ಬಂದಿದೆ ಎಂದು ತಿಳಿಸಿ, ಮತ್ತೆ ತಪಾಸಣೆಗೆ ಹೋದರೆ ಸಮಯವಾಗುತ್ತದೆ. ನಿಮ್ಮನ್ನು ವೈಯಕ್ತಿಕವಾಗಿ ತಪಾಸಣೆ ಮಾಡಬೇಕು ಎಂದು ಹೇಳಿ ಪುರುಷರ ಶೌಚಾಲಯಕ್ಕೆ ಕರೆದೊಯ್ದು, ಅಲ್ಲಿ ಸಂತ್ರಸ್ತೆಯ ಅನುಮತಿ ಪಡೆಯದೇ ಆಕೆಯ ಎದೆಯ ಭಾಗ ಮತ್ತು ಹಿಂಭಾಗ ಮುಟ್ಟಿದ್ದರೆಂದು ಆರೋಪಿಸಲಾಗಿದೆ.
ದೂರುದಾರೆಯ ಎದೆಯನ್ನು ಮತ್ತೆ ಸ್ಪರ್ಶಿಸಿ, ಒತ್ತಿ ಹಿಡಿದು, ನಂತರ ತಿರುಗಿಕೊಳ್ಳಲು ಹೇಳಿ, ಮತ್ತೆ ಹಿಂದಿನಿಂದ ಎದೆಯನ್ನು ಸ್ಪರ್ಶಿಸಿದ್ದರು. ಇದಕ್ಕೆ ಒಪ್ಪದೇ ಇದ್ದಾಗ ಏಕಾಏಕಿ ಅಪ್ಪಿಕೊಂಡು ಧನ್ಯವಾದ ಹೇಳಿ, ಕಳುಹಿಸಿದ್ದರು ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನು ಆಧರಿಸಿ ಬಿಐಎಎಲ್ ಪೊಲೀಸರು ಬಿಎನ್ ಸೆಕ್ಷನ್ 75(1)(i) ಅಡಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
Related Articles
Thank you for your comment. It is awaiting moderation.


Comments (0)