ಲೋಕಾ ಎಡಿಜಿಪಿ ಎಂ. ಚಂದ್ರಶೇಖರ್ಗೆ ಬೆದರಿಕೆ ಆರೋಪ; ಮಧ್ಯಸ್ಥಿಕೆದಾರರ ನೇಮಕಕ್ಕೆ ಎಚ್ಡಿಕೆ ಸಮ್ಮತಿ
- by Prashanth Basavapatna
- March 26, 2026
- 5 Views
ಬೆಂಗಳೂರು: ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹಾಗೂ ವಿಶೇಷ ಪೊಲೀಸ್ ತನಿಖಾ ದಳದ (ಎಸ್ಐಟಿ) ಮುಖ್ಯಸ್ಥ ಎಂ. ಚಂದ್ರಶೇಖರ್ ಅವರಿಗೆ ಬೆದರಿಕೆಯೊಡ್ಡಿದ ಆರೋಪದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಮಧ್ಯಸ್ಥಿಕೆದಾರರನ್ನು ನೇಮಿಸಲು ಸಮ್ಮತಿ ಇದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪರ ವಕೀಲರು ಹೈಕೋರ್ಟ್ಗೆ ತಿಳಿಸಿದರು.
ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಹಾಗೂ ನಗರದ 42ನೇ ಎಸಿಎಂಎಂ ನ್ಯಾಯಾಲಯದ (ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ) ವಿಚಾರಣೆ ರದ್ದು ಕೋರಿ ಎಚ್.ಡಿ. ಕುಮಾರಸ್ವಾಮಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಕುಮಾರಸ್ವಾಮಿ ಪರ ಹಾಜರಾದ ಹಿರಿಯ ವಕೀಲ ಹಷ್ಮತ್ ಪಾಷಾ ಅವರು, ಪ್ರಕರಣದಲ್ಲಿ ಮಧ್ಯಸ್ಥಿಕೆದಾರರನ್ನು ನೇಮಿಸುವುದಕ್ಕೆ ಅರ್ಜಿದಾರರು ಒಪ್ಪಿದ್ದಾರೆ. ಆದರೆ, ಮಧ್ಯಸ್ಥಿಕೆದಾರರ ಮುಂದೆ ಚಂದ್ರಶೇಖರ್ ಅವರ ಎದುರು ಬದುರು ಕೂರಲು ಸಿದ್ಧರಿಲ್ಲ. ಮಧ್ಯಸ್ಥಿಕೆದಾರರು ಇಬ್ಬರ ಅಭಿಪ್ರಾಯ ಪಡೆಯಬಹುದು ಎಂದರು.
ದೂರುದಾರರಾದ ಎಂ. ಚಂದ್ರಶೇಖರ್ ಪರ ವಕೀಲರು, ಕುಮಾರಸ್ವಾಮಿ ಪ್ರಭಾವಿಯಾಗಿದ್ದಾರೆ. ಚಂದ್ರಶೇಖರ್ ಅಧಿಕಾರಿಯಷ್ಟೇ. ನ್ಯಾಯಾಲಯ ನಮ್ಮ ಆತಂಕವನ್ನು ಪರಿಗಣಿಸಬೇಕು ಎಂದರು.
ಆಗ ನ್ಯಾಯಪೀಠ, ಮಧ್ಯಸ್ಥಿಕೆದಾರರು ಯಾರಿರಬೇಕು ಎಂಬುದನ್ನು ನ್ಯಾಯಾಲಯ ನಿರ್ಧರಿಸಲಿದೆ. ಇಬ್ಬರಿಗೂ ಒಪ್ಪಿಗೆಯಾಗುವ ಮಧ್ಯಸ್ಥಿಕೆದಾರರನ್ನು ನೇಮಿಸಲಾಗುವುದು. ಮಧ್ಯಸ್ಥಿಕೆದಾರರನ್ನು ನೇಮಿಸುವ ಕೆಲಸವನ್ನು ನ್ಯಾಯಾಲಯಕ್ಕೆ ಬಿಡಿ. ದೂರುದಾರ ಅಧಿಕಾರಿ ಚಂದ್ರಶೇಖರ್ ಅವರ ಆತಂಕದ ಬಗ್ಗೆ ಅರಿವಿದೆ ಎಂದು ಹೇಳಿತು.
ಅಂತಿಮವಾಗಿ, ದೂರುದಾರ ಚಂದ್ರಶೇಖರ್ ಪರ ವಕೀಲರ ಕೋರಿಕೆಯಂತೆ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರಿಗೆ ಚಂದ್ರಶೇಖರ್ ಜತೆ ಸಮಾಲೋಚಿಸುವಂತೆ ಸೂಚಿಸಿ, ವಿಚಾರಣೆಯನ್ನು ಏಪ್ರಿಲ್ 2ಕ್ಕೆ ಮುಂದೂಡಿತು.
ಅರ್ಜಿಯ ಕಳೆದ ವಿಚಾರಣೆ ವೇಳೆ ನ್ಯಾಯಪೀಠ, ಉಭಯ ಪಕ್ಷಕಾರರು ಒಪ್ಪಿದರೆ ಮಧ್ಯಸ್ಥಿಕೆದಾರರನ್ನು ನೇಮಿಸಲಾಗುವುದು. ಅರ್ಜಿದಾರರು ಹಾಗೂ ಪ್ರತಿವಾದಿಗಳು ಆನ್ಲೈನ್ ಅಥವಾ ಭೌತಿಕವಾಗಿ ತಮಗೆ ಅನುಕೂಲವಾಗುವ ರೀತಿಯಲ್ಲಿ ಮಧ್ಯಸ್ಥಿಕೆದಾರರ ಮುಂದೆ ಹಾಜರಾಗಬಹುದು ಎಂದು ಸಲಹೆ ನೀಡಿತ್ತಲ್ಲದೆ, ಮಧ್ಯಸ್ಥಿಕೆದಾರರ ಉಪಸ್ಥಿತಿಯಲ್ಲಿ ಪ್ರಕರಣಕ್ಕೆ ಇತಿಶ್ರೀ ಹಾಡುವ ಇಂಗಿತ ವ್ಯಕ್ತಪಡಿಸಿತ್ತು.
Related Articles
Thank you for your comment. It is awaiting moderation.


Comments (0)