ವಂದೇ ಮಾತರಂ ಗೀತೆಯ ಎಲ್ಲ ಚರಣಗಳ ಗಾಯನ ಕಡ್ಡಾಯ; ಪಿಐಎಲ್ ವಿಚಾರಣೆ ಏ. 9ಕ್ಕೆ ಮುಂದೂಡಿದ ಹೈಕೋರ್ಟ್

ಬೆಂಗಳೂರು: ಶಾಲೆಗಳಲ್ಲಿ ಪ್ರತಿದಿನ ‘ವಂದೇ ಮಾತರಂ’ ಗೀತೆಯನ್ನು ಎಲ್ಲ ಆರು ಚರಣಗಳೊಂದಿಗೆ ಕಡ್ಡಾಯವಾಗಿ ಹಾಡುವ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿರುವ ಶಿಷ್ಟಾಚಾರ ಮಾರ್ಗಸೂಚಿಗಳನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಏಪ್ರಿಲ್ 9ಕ್ಕೆ ಮುಂದೂಡಿದೆ.

ಬೆಂಗಳೂರಿನ ವಕೀಲ ಸೋಮಶೇಖರ್ ರಾಜವಂಶಿ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಕೇಂದ್ರ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ (ಎಎಸ್‌ಜಿ) ಕೆ. ಅರವಿಂದ ಕಾಮತ್‌ ಹಾಜರಾಗಿ, ಸುಪ್ರೀಂಕೋರ್ಟ್‌ನಲ್ಲಿ ಇಂಥದೇ ಮನವಿಯುಳ್ಳ ಅರ್ಜಿಯೊಂದು ಸಲ್ಲಿಕೆಯಾಗಿತ್ತು. ಈ ಅರ್ಜಿಯಲ್ಲಿ ಪ್ರಶ್ನಿಸಲಾಗಿರುವ ಆದೇಶವನ್ನೇ ಅಲ್ಲೂ ಸಹ ಪ್ರಶ್ನಿಸಲಾಗಿತ್ತು. ಆ ಅರ್ಜಿಯನ್ನು ನಿನ್ನೆಯಷ್ಟೇ (ಮಾರ್ಚ್ 25) ಸುಪ್ರೀಂಕೋರ್ಟ್ ವಜಾಗೊಳಿಸಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಆಗ ನ್ಯಾಯಪೀಠ, ಸುಪ್ರೀಂಕೋರ್ಟ್ ಆದೇಶದ ಪ್ರತಿ ಇದೆಯೇ ಎಂದು ಎಎಸ್‌ಜಿ ಅವರನ್ನು ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಕಾಮತ್, ಇನ್ನೂ ಆದೇಶ ಬಿಡುಗಡೆಯಾಗಿಲ್ಲ. ಅರ್ಜಿ ವಿಚಾರಣೆ ಮುಂದೂಡಿದರೆ, ಆದೇಶ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದರು.

ಇದನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಏಪ್ರಿಲ್ 9ಕ್ಕೆ ಮುಂದೂಡಿತು.

ಅರ್ಜಿಯಲ್ಲೇನಿದೆ?
ವಂದೇ ಮಾತರಂ ಗೀತೆಯನ್ನು ಶಾಲೆಗಳ ಪ್ರಾರಂಭಕ್ಕೂ ಮುನ್ನ ಕಡ್ಡಾಯವಾಗಿ ಹಾಡಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಅಧಿಕೃತ ಜಾಲಾತಾಣದಲ್ಲಿ ಭಾರತದ ರಾಷ್ಟ್ರ ಗೀತೆಗೆ ಸಂಬಂಧಿಸಿದ ಆದೇಶಗಳು ಎಂಬ ಆದೇಶ ಪ್ರಕಟಿಸಲಾಗಿದೆ. ಈ ಆದೇಶದಂತೆ ವಂದೇ ಮಾತರಂ ಗೀತೆಯಲ್ಲಿರುವ ಆರು ಚರಣಗಳುಳ್ಳ ಅಧಿಕೃತ ಆವೃತ್ತಿಯನ್ನು ಎಲ್ಲ ಶಾಲೆಗಳು ಪ್ರಾರಂಭಕ್ಕೂ ಮುನ್ನ ಪ್ರತಿ ದಿನ ಸಾಮೂಹಿಕವಾಗಿ ಹಾಡಬೇಕು ಎಂದು ಸೂಚಿಸಲಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಸಂವಿಧಾನದ ರಚನಾ ಸಭೆಯಲ್ಲಿ ವಂದೇ ಮಾತರಂ ಗೀತೆಯಲ್ಲಿನ ಒಟ್ಟು ಆರು ಚರಣಗಳಲ್ಲಿ ಎರಡು ಚರಣಗಳನ್ನು ಮಾತ್ರ ಹಾಡಬೇಕು ಎಂದು ನಿರ್ಧರಿಸಲಾಗಿತ್ತು. ಆದರೆ, ಗೃಹ ಇಲಾಖೆ ಹೊರಡಿಸಿರುವ ಆದೇಶದಲ್ಲಿ ಎಲ್ಲ ಆರು ಚರಣಗಳನ್ನು ಕಡ್ಡಾಯವಾಗಿ ಹಾಡಬೇಕು ಎಂದು ತಿಳಿಸಲಾಗಿದೆ. ಆದರೆ, ವಂದೇ ಮಾತರಂ ಗೀತೆಯ 3 ರಿಂದ 6ರ ವರೆಗಿನ ಚರಣಗಳಲ್ಲಿ ಹಿಂದು ದೇವತೆಗಳಾದ ದುರ್ಗಾ, ಕಮಲಾ (ಲಕ್ಷ್ಮೀ) ಮತ್ತು ವಾಣಿ (ಸರಸ್ವತಿ)ಯನ್ನು ಸೇರ್ಪಡೆ ಮಾಡಲಾಗಿದೆ. ಅಲ್ಲದೆ, ಈ ಸಂಬಂಧ ಹೊರಡಿಸಿರುವ ಮಾರ್ಗಸೂಚಿಗಳಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳ ಗೀತೆಯ ಶ್ಲೋಕಗಳನ್ನು ಪ್ರತಿದಿನ ಹಾಡುವುದಕ್ಕೆ ನಿರ್ದೇಶನ ನೀಡಲಾಗಿದೆ. ಈ ಅಂಶವು ಸಂವಿಧಾನದ ವಿಧಿ 25 (ಆತ್ಮಸಾಕ್ಷಿಯ ಹಕ್ಕು), 28 (ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಬೋಧನೆ ನಿಷೇಧ) ಮತ್ತು 14ಕ್ಕೆ (ಸಮಾನತೆ) ತದ್ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ಪ್ರಮುಖ ಮನವಿಗಳೇನು?
• ವಂದೇ ಮಾತರಂ ಗೀತೆಯ 3ರಿಂದ 6ನೇ ಚರಣಗಳನ್ನು ಅಧಿಕೃತ ಆವೃತ್ತಿಯ ಭಾಗವನ್ನಾಗಿ ಸೂಚಿಸಿ, ಕಡ್ಡಾಯವಾಗಿ ಹಾಡುವುದಕ್ಕೆ ಸಂಬಂಧಿಸಿದ ಶಿಷ್ಟಾಚಾರ ಆದೇಶವನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು. ಶಾಲೆಗಳಲ್ಲಿ ದಿನ ನಿತ್ಯ ವಂದೇ ಮಾತರಂ ಹಾಡುವುದನ್ನು ಕಡ್ಡಾಗೊಳಿಸಿ ಹೊರಡಿಸಲಾಗಿರುವ ಶಿಷ್ಟಾಚಾರ ಮಾರ್ಗಸೂಚಿಗಳ ಆದೇಶವನ್ನು ಪರಿಷ್ಕರಣೆ ಮಾಡುವಂತೆ ಗೃಹ ವ್ಯವಹಾರಗಳ ಸಚಿವಾಲಯಕ್ಕೆ ನಿರ್ದೇಶಿಸಬೇಕು.

• ವಂದೇ ಮಾತರಂ ಗೀತೆಯಲ್ಲಿ ಯಾವುದೇ ಧಾರ್ಮಿಕ ಅಂಶಗಳನ್ನು ಒಳಗೊಳ್ಳದ ಮೊದಲ ಎರಡು ಚರಣಗಳಿಗೆ ಸೀಮಿತಗೊಳಿಸಲು ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕೇಂದ್ರೀಯ ವಿದ್ಯಾಲಯಗಳ ಸಂಘಟನೆ ಶಾಲೆಗಳಲ್ಲಿ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವುದನ್ನು ಖಚಿತಪಡಿಸಿಕೊಳ್ಳಲು ನಿರ್ದೇಶನ ನೀಡಬೆಕು.

• ಗೃಹ ಸಚಿವಾಲಯದ ಆದೇಶ ಅಲ್ಪ ಸಂಖ್ಯಾತರ ನಂಬಿಕೆ ಮತ್ತು ದೇವರ ಬಗ್ಗೆ ನಂಬಿಕೆಯಿಲ್ಲದ ಕುಟುಂಬಗಳ ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ರಾಷ್ಟ್ರೀಯ ಅಲ್ಪ ಸಂಖ್ಯಾತರ ಆಯೋಗ ಮತ್ತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ನಿರ್ದೇಶಿಸಬೇಕು.

Related Articles

Comments (0)

Leave a Comment