ಹುಬ್ಬಳ್ಳಿಯಲ್ಲಿ ವಲಸೆ ಕಾರ್ಮಿಕನ ಎನ್‌ಕೌಂಟರ್ ಪ್ರಕರಣ; ನ್ಯಾಯಾಂಗ ತನಿಖೆಗೆ ರಾಜ್ಯ ಸರ್ಕಾರದ ಸಲಹೆ
- by Ramya B T
- February 27, 2026
- 14 Views
ಬೆಂಗಳೂರು: ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಆರೋಪ ಎದುರಿಸುತ್ತಿದ್ದ ಬಿಹಾರ ಮೂಲದ ವಲಸೆ ಕಾರ್ಮಿಕ ರಿತೇಶ್ ಕುಮಾರ್ ಎನ್‌ಕೌಂಟರ್ ಪ್ರಕರಣವನ್ನು ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ (ನ್ಯಾಯಾಂಗ) ತನಿಖೆಗೆ ವಹಿಸಬಹುದು ಎಂದು ರಾಜ್ಯ ಸರ್ಕಾರ ಹೈಕೊರ್ಟ್‌ಗೆ ತಿಳಿಸಿದೆ.
ರಿತೇಶ್ ಎನ್‌ಕೌಂಟರ್ ನಡೆಸಿದ ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ಆದೇಶಿಸಬೇಕು. ಪ್ರಕರಣದ ತನಿಖೆಯನ್ನು ಸ್ವತಂತ್ರ ತನಿಖಾ ಸಂಸ್ಥೆಗೆ ವಹಿಸಬೇಕು ಎಂದು ಕೋರಿ ಪೀಪಲ್ಸ್ ಯೂನಿಯನ್ ಫಾರ್ ಲಿಬರ್ಟೀಸ್ ಕರ್ನಾಟಕ (ಪಿಯುಸಿಎಲ್) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ರಾಜ್ಯ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು, ಎನ್‌ಕೌಂಟರ್ ಮಾಡಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ಆದೇಶಿಸುವಂತೆ ಅರ್ಜಿದಾರರು ಕೋರಿದ್ದಾರೆ. ಘಟನೆ ಸಂಬಂಧ ಸ್ವತಂತ್ರ ತನಿಖೆ ನಡೆಸಬೇಕು ಎಂಬ ಕಾರಣದಿಂದ ಸಿಐಡಿಗೆ ವಹಿಸಲಾಗಿದೆ. ಸುಪ್ರೀಂಕೋರ್ಟ್ ಮಾರ್ಗಸೂಚಿಗಳು ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಾರ್ಗಸೂಚಿಗಳ ಅನ್ವಯವೇ ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎಲ್ಲ ರೀತಿಯ ತನಿಖೆಗೂ ಸರ್ಕಾರ ಸಿದ್ಧವಿದ್ದು, ನ್ಯಾಯಾಂಗ ತನಿಖೆಗೆ ಆದೇಶಿಸಿದರೂ ಅದನ್ನು ಸರ್ಕಾರ ವಿರೋಧಿಸುವುದಿಲ್ಲ ಎಂದರು.
ಮುಂದುವರಿದು, ಎನ್‌ಕೌಂಟರ್ ನಡೆಸಿದ ಅಧಿಕಾರಿಗಳನ್ನು ರಕ್ಷಣೆ ಮಾಡಲು ಸರ್ಕಾರ ಪ್ರಯತ್ನಿಸುತ್ತಿಲ್ಲ. ಪ್ರಕರಣವನ್ನು ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ತನಿಖೆಗೆ ವಹಿಸುವುದನ್ನೂ ವಿರೋಧಿಸುವುದಿಲ್ಲ. ಯಾವ ವಿಚಾರದಿಂದಲೂ ಸರ್ಕಾರ ಅಂತರ ಕಾಯ್ದುಕೊಳ್ಳುವುದಿಲ್ಲ. ನ್ಯಾಯಾಲಯ ಪ್ರಕರಣವನ್ನು ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ತನಿಖೆಗೆ ವಹಿಸಬಹುದು. ಮ್ಯಾಜಿಸ್ಟ್ರೇಟ್ ತನಿಖೆ ನಡೆಸಿ ಕೋರ್ಟ್‌ಗೆ ವರದಿ ಸಲ್ಲಿಸಲಿ. ಆದನ್ನು ಆಧರಿಸಿ ಹೈಕೋರ್ಟ್ ಮುಂದಿನ ನಿರ್ಧಾರ ತೆಗೆದಕೊಳ್ಳಬಹುದು ಎಂದು ತಿಳಿಸಿದರು.
ಇದನ್ನು ಆಲಿಸಿದ ನ್ಯಾಯಪೀಠ, ಎನ್‌ಕೌಂಟರ್ ನಡೆಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ಆದೇಶಿಸಬೇಕು. ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಅರ್ಜಿದಾರರು ಕೋರಿದ್ದಾರೆ. ಸರ್ಕಾರ ಸಹ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ತನಿಖೆ ನಡೆಸಬಹುದು ಎಂದು ಹೇಳಿದ್ದು, ಇದು ಸೂಕ್ತ ಸಲಹೆಯಾಗಿದೆ. ಈ ಅಂಶಗಳನ್ನು ಪರಿಗಣಿಸಲಾಗುವುದು. ಸರ್ಕಾರದ ಸಲಹೆಗೆ ಅರ್ಜಿದಾರರು ಪ್ರತಿಕ್ರಿಯೆ ಸಲ್ಲಿಸಲಿ ಎಂದು ಸೂಚಿಸಿ,ವಿಚಾರಣೆಯನ್ನು ಮಾರ್ಚ್ 2ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ:
ಬಿಹಾರ ಮೂಲದ ವಲಸೆ ಕಾರ್ಮಿಕ ರಿತೇಶ್ ಕುಮಾರ್, ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದನು. 2025ರ ಏಪ್ರಿಲ್ 13ರಂದು ಆತನನ್ನು ಘಟನಾ ಸ್ಥಳಕ್ಕೆ ಮಹಜರು ಮಾಡಲು ಕರೆದೊಯ್ದಿದ್ದಾಗ ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದನೆಂಬ ಕಾರಣಕ್ಕೆ ಪೊಲೀಸರು ಹೊಡೆದ ಗುಂಡಿಗೆ ಬಲಿಯಾಗಿದ್ದನು.
Related Articles
Thank you for your comment. It is awaiting moderation.


Comments (0)