ಸೂಪರ್ ಸ್ಟಾರ್ ಕಾನೂನಿಗಿಂತ ಮೇಲಲ್ಲ; ದೈವಗಳ ಅಪಹಾಸ್ಯ ಪ್ರಕರಣದಲ್ಲಿ ರಣವೀರ್ ಸಿಂಗ್ ವಿರುದ್ಧ ಬಲವಂತದ ಕ್ರಮ ಬೇಡವೆಂದ ಹೈಕೋರ್ಟ್
- by Jagan Ramesh
- February 24, 2026
- 20 Views
ಬೆಂಗಳೂರು: ಕಾಂತಾರ ಚಾಪ್ಟರ್-1 ಚಿತ್ರದ ದೈವಪಾತ್ರಗಳನ್ನು ಅಪಹಾಸ್ಯ ಮಾಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಬೇಕು ಎಂಬ ಷರತ್ತಿಗೆ ಒಳಪಟ್ಟು ಅವರ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಪೊಲೀಸರಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಇದೇ ವೇಳೆ, ಸೂಪರ್ ಸ್ಟಾರ್ ಆದ ಮಾತ್ರಕ್ಕೆ ನಾಲಿಗೆ ಹರಿಬಿಡಬಾರದು. “ಸೂಪರ್ ಸ್ಟಾರ್ ಕಾನೂನಿಗಿಂತ ಮೇಲಲ್ಲ (ಸೂಪರ್ ಸ್ಟಾರ್ ಇಸ್ ನಾಟ್ ಊಪರ್ ಲಾ)” ಎಂದು ಮಾರ್ಮಿಕವಾಗಿ ನುಡಿದ ನ್ಯಾಯಪೀಠ, ಮತ್ತೊಬ್ಬರ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಯಾವುದೇ ಹಕ್ಕು ಅವರಿಗಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದೆ.
ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ದಾಖಲಾಗಿರುವ ಖಾಸಗಿ ದೂರು ಹಾಗೂ ಹೈಗ್ರೌಂಡ್ಸ್ ಠಾಣೆ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದು ಕೋರಿ ರಣವೀರ್ ಸಿಂಗ್ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಪೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ನಿರ್ದೇಶನ ನೀಡಿತು.
ಇದಕ್ಕೂ ಮುನ್ನ ರಣವೀರ್ ಸಿಂಗ್ ಪರ ಹಿರಿಯ ವಕೀಲ ಸಜನ್ ಪೂವಯ್ಯ ವಾದ ಮಂಡಿಸಿ, ಅರ್ಜಿದಾರರು ಅಜಾಗರೂಕ ಹಾಗೂ ಸಂವೇದನಾರಹಿತ ಹೇಳಿಕೆ ನೀಡಿದ್ದು, ತಮ್ಮ ತಪ್ಪು ಅರಿವಿಗೆ ಬಂದ ಕೂಡಲೇ ಕ್ಷಮೆ ಕೋರಿದ್ದಾರೆ. ದೈವಗಳನ್ನು ಅಪಮಾನಿಸುವ ಅಥವಾ ಯಾರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ಅವರಿಗೆ ಇರಲಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಈ ವಾದವನ್ನು ಆಕ್ಷೇಪಿಸಿದ ನ್ಯಾಯಪೀಠ, ನಟರಾದವರು ತಮ್ಮ ಮಾತುಗಳ ಮೇಲೆ ನಿಗಾ ಇಟ್ಟುಕೊಂಡಿರಬೇಕು. ಅರ್ಜಿದಾರರು ಸೂಪರ್ ಸ್ಟಾರ್ ಆಗಿರಬಹುದು. ಹಾಗೆಂದ ಮಾತ್ರಕ್ಕೆ ನಾಲಿಗೆ ಹರಿಬಿಡಬಾರದು. ಇಷ್ಟು ಅಜಾಗರೂಕವಾಗಿ ನಡೆದುಕೊಳ್ಳಬಾರದಿತ್ತು. ನೀವು ಹಾಸ್ಯ ಅಥವಾ ಏನನ್ನೇ ಮಾಡಬಹುದು. ಆದರೆ, ಮತ್ತೊಬ್ಬರ ಭಾವನೆಗಳಿಗೆ ಘಾಸಿ ಮಾಡಬಾರದು. ಕಲಾವಿದರಾದವರು ವೇದಿಕೆಯ ಮೇಲೆ ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿತು.
ಮುಂದುವರಿದು, ನಾವು-ನೀವು ಹಾಗೂ ಜನ ಇದನ್ನು ಮರೆತು ಬಿಡಬಹುದು. ಆದರೆ, ಇಂಟರ್‌ನೆಟ್ ಮರೆಯುವುದಿಲ್ಲ. ಕ್ಷಮೆ ಕೋರಿದ ಮಾತ್ರಕ್ಕೆ ನೀವು ಆಡಿದ ಮಾತುಗಳಿಂದಾಗಿರುವ ಘಾಸಿ ಮಾಸುವುದಿಲ್ಲ. ಇಂಥ ವಿಚಾರಗಳಲ್ಲಿ ಈ ನ್ಯಾಯಾಲಯ ಕಟ್ಟುನಿಟ್ಟಾಗಿದೆ. ಯಾವುದೇ ವ್ಯಕ್ತಿಗೂ ಹಾಸ್ಯ ಅಥವಾ ಪ್ರತಿಭೆಯ ಹೆಸರಿನಲ್ಲಿ ಧಾರ್ಮಿಕ ಭಾವನೆಗಳು ಹಾಗೂ ಮತ್ತೊಬ್ಬರ ಭಾವನೆಗಳಿಗೆ ಘಾಸಿ ಮಾಡುವ ಅಧಿಕಾರವಿಲ್ಲ ಎಂದು ತೀಕ್ಷ್ಣವಾಗಿ ನುಡಿಯಿತು.
ಸಜನ್ ಪೂವಯ್ಯ ಪ್ರತಿಕ್ರಿಯಿಸಿ, ಅರ್ಜಿದಾರರು ಯಾರ ಭಾವನೆಗಳಿಗೂ ಧಕ್ಕೆಯಾಗದಂತೆ ನಡೆದುಕೊಳ್ಳಬೇಕಿತ್ತು. ಇನ್ನು ಮುಂದೆ ಎಚ್ಚರವಹಿಸುತ್ತಾರೆ ಎಂದರು.
ಅಂತಿಮವಾಗಿ ನ್ಯಾಯಪೀಠ, ಅರ್ಜಿದಾರರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು ಅದಕ್ಕೆ ಕ್ಷಮೆಯನ್ನೂ ಯಾಚಿಸಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ. ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲಾಗಿದ್ದು, ಅರ್ಜಿಗೆ ಆಕ್ಷೇಪಣೆ ಸಲ್ಲಿಸಬೇಕು. ಅರ್ಜಿದಾರರು ತನಿಖೆಗೆ ಸಹಕರಿಸಲಿದ್ದಾರೆ ಎಂಬುದಕ್ಕೆ ಒಳಪಟ್ಟು ಅವರ ವಿರುದ್ಧ ಬಲವಂತದ ಕ್ರಮಕೈಗೊಳ್ಳಬಾರದು ಎಂದು ಹೈಗ್ರೌಂಡ್ಸ್ ಠಾಣೆ ಪೊಲೀಸರಿಗೆ ನಿರ್ದೇಶಿಸಿ, ವಿಚಾರಣೆಯನ್ನು ಮಾರ್ಚ್ 2ಕ್ಕೆ ಮುಂದೂಡಿತು.
Related Articles
Thank you for your comment. It is awaiting moderation.


Comments (0)