ವಂದೇ ಮಾತರಂ ಗಾಯನ ಕಡ್ಡಾಯ; ಕೇಂದ್ರದ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಕೆ
- by Jagan Ramesh
- February 21, 2026
- 7 Views
ಬೆಂಗಳೂರು: ಶಾಲೆಗಳಲ್ಲಿ ಪ್ರತಿದಿನ ‘ವಂದೇ ಮಾತರಂ’ ಗೀತೆಯನ್ನು ಎಲ್ಲ ಆರು ಚರಣಗಳೊಂದಿಗೆ ಕಡ್ಡಾಯವಾಗಿ ಹಾಡುವ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿರುವ ಶಿಷ್ಟಾಚಾರ ಮಾರ್ಗಸೂಚಿಗಳನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ಬೆಂಗಳೂರಿನ ವಕೀಲ ಸೋಮಶೇಖರ್ ರಾಜವಂಶಿ ಎಂಬುವರು ಈ ಪಿಐಎಲ್ ಸಲ್ಲಿಸಿದ್ದು, ಅರ್ಜಿಯಲ್ಲಿ ಗೃಹ ವ್ಯವಹಾರಗಳ ಸಚಿವಾಲಯ, ಶಿಕ್ಷಣ ಸಚಿವಾಲಯ, ರಾಜ್ಯ ಶಿಕ್ಷಣ ಇಲಾಖೆ, ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ಮತ್ತಿತರರನ್ನು ಪ್ರತಿವಾದಿಯನ್ನಾಗಿಸಲಾಗಿದೆ. ಅರ್ಜಿಯು ಇನ್ನಷ್ಟೇ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಬೇಕಿದೆ.
ಅರ್ಜಿಯಲ್ಲೇನಿದೆ?
ವಂದೇ ಮಾತರಂ ಗೀತೆಯನ್ನು ಶಾಲೆಗಳ ಪ್ರಾರಂಭಕ್ಕೂ ಮುನ್ನ ಕಡ್ಡಾಯವಾಗಿ ಹಾಡಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ವ್ಯವಹಾರಗಾಲ ಸಚಿವಾಲಯದ ಅಧಿಕೃತ ಜಾಲಾತಾಣದಲ್ಲಿ ಭಾರತದ ರಾಷ್ಟ್ರ ಗೀತೆಗೆ ಸಂಬಂಧಿಸಿದ ಆದೇಶಗಳು ಎಂಬ ಆದೇಶ ಪ್ರಕಟಿಸಲಾಗಿದೆ. ಈ ಆದೇಶದಂತೆ ವಂದೇ ಮಾತರಂ ಗೀತೆಯಲ್ಲಿರುವ ಆರು ಚರಣಗಳುಳ್ಳ ಅಧಿಕೃತ ಆವೃತ್ತಿಯನ್ನು ಎಲ್ಲ ಶಾಲೆಗಳು ಪ್ರಾರಂಭಕ್ಕೂ ಮುನ್ನ ಪ್ರತಿ ದಿನ ಸಾಮೂಹಿಕವಾಗಿ ಹಾಡಬೇಕು ಎಂದು ಸೂಚಿಸಲಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಸಂವಿಧಾನದ ರಚನಾ ಸಭೆಯಲ್ಲಿ ವಂದೇ ಮಾತರಂ ಗೀತೆಯಲ್ಲಿನ ಒಟ್ಟು ಆರು ಚರಣಗಳಲ್ಲಿ ಎರಡು ಚರಣಗಳನ್ನು ಮಾತ್ರ ಹಾಡಬೇಕು ಎಂದು ನಿರ್ಧರಿಸಲಾಗಿತ್ತು. ಆದರೆ, ಗೃಹ ಇಲಾಖೆ ಹೊರಡಿಸಿರುವ ಆದೇಶದಲ್ಲಿ ಎಲ್ಲ ಆರು ಚರಣಗಳನ್ನು ಕಡ್ಡಾಯವಾಗಿ ಹಾಡಬೇಕು ಎಂದು ತಿಳಿಸಲಾಗಿದೆ. ಆದರೆ, ವಂದೇ ಮಾತರಂ ಗೀತೆಯ 3 ರಿಂದ 6ರ ವರೆಗಿನ ಚರಣಗಳಲ್ಲಿ ಹಿಂದು ದೇವತೆಗಳಾದ ದುರ್ಗಾ, ಕಮಲಾ (ಲಕ್ಷ್ಮೀ) ಮತ್ತು ವಾಣಿ (ಸರಸ್ವತಿ)ಯನ್ನು ಸೇರ್ಪಡೆ ಮಾಡಲಾಗಿದೆ. ಅಲ್ಲದೆ, ಈ ಸಂಬಂಧ ಹೊರಡಿಸಿರುವ ಮಾರ್ಗಸೂಚಿಗಳಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳ ಗೀತೆಯ ಶ್ಲೋಕಗಳನ್ನು ಪ್ರತಿದಿನ ಹಾಡುವುದಕ್ಕೆ ನಿರ್ದೇಶನ ನೀಡಲಾಗಿದೆ. ಈ ಅಂಶವು ಸಂವಿಧಾನದ ಪರಿಚ್ಚೇದ 25 (ಆತ್ಮಸಾಕ್ಷಿಯ ಹಕ್ಕು), 28 (ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಬೋಧನೆ ನಿಷೇಧ) ಮತ್ತು 14ಕ್ಕೆ (ಸಮಾನತೆ) ತದ್ವಿರುದ್ಧವಾಗಿದೆ ಎಂದು ಹೇಳಲಾಗಿದೆ.
ಪ್ರಮುಖ ಮನವಿಗಳೇನು?
• ವಂದೇ ಮಾತರಂ ಗೀತೆಯ 3ರಿಂದ 6ನೇ ಚರಣಗಳನ್ನು ಅಧಿಕೃತ ಆವೃತ್ತಿಯ ಭಾಗವನ್ನಾಗಿ ಸೂಚಿಸಿ, ಕಡ್ಡಾಯವಾಗಿ ಹಾಡುವುದಕ್ಕೆ ಸಂಬಂಧಿಸಿದ ಶಿಷ್ಟಾಚಾರ ಆದೇಶವನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು. ಶಾಲೆಗಳಲ್ಲಿ ದಿನ ನಿತ್ಯ ವಂದೇ ಮಾತರಂ ಹಾಡುವುದನ್ನು ಕಡ್ಡಾಗೊಳಿಸಿ ಹೊರಡಿಸಲಾಗಿರುವ ಶಿಷ್ಟಾಚಾರ ಮಾರ್ಗಸೂಚಿಗಳ ಆದೇಶವನ್ನು ಪರಿಷ್ಕರಣೆ ಮಾಡುವಂತೆ ಗೃಹ ವ್ಯವಹಾರಗಳ ಸಚಿವಾಲಯಕ್ಕೆ ನಿರ್ದೇಶಿಸಬೇಕು.
• ವಂದೇ ಮಾತರಂ ಗೀತೆಯಲ್ಲಿ ಯಾವುದೇ ಧಾರ್ಮಿಕ ಅಂಶಗಳನ್ನು ಒಳಗೊಳ್ಳದ ಮೊದಲ ಎರಡು ಚರಣಗಳಿಗೆ ಸೀಮಿತಗೊಳಿಸಲು ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕೇಂದ್ರೀಯ ವಿದ್ಯಾಲಯಗಳ ಸಂಘಟನೆ ಶಾಲೆಗಳಲ್ಲಿ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವುದನ್ನು ಖಚಿತಪಡಿಸಿಕೊಳ್ಳಲು ನಿರ್ದೇಶನ ನೀಡಬೆಕು.
• ಗೃಹ ಸಚಿವಾಲಯದ ಆದೇಶ ಅಲ್ಪ ಸಂಖ್ಯಾತರ ನಂಬಿಕೆ ಮತ್ತು ದೇವರ ಬಗ್ಗೆ ನಂಬಿಕೆಯಿಲ್ಲದ ಕುಟುಂಬಗಳ ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ರಾಷ್ಟ್ರೀಯ ಅಲ್ಪ ಸಂಖ್ಯಾತರ ಆಯೋಗ ಮತ್ತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ನಿರ್ದೇಶಿಸಬೇಕು.
Related Articles
Thank you for your comment. It is awaiting moderation.


Comments (0)