ತೀರ್ಪುಗಾರರನ್ನೂ ತನಿಖೆಗೆ ಒಳಪಡಿಸಲು ಪೊಲೀಸರು ಮುಂದಾಗಿದ್ದಾರೆ; ಹೈಕೋರ್ಟ್‌ ಮುಂದೆ ಝೀ ವಾಹಿನಿ ದೂರು

ಬೆಂಗಳೂರು: ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಸಂಚಿಕೆಯೊಂದರಲ್ಲಿ ಮಹಾಭಾರತದ ಪಾತ್ರಗಳು ಹಾಗೂ ಹಿಂದು ದೇವತೆಗಳನ್ನು ಅಪಹಾಸ್ಯ ಮಾಡಿದ ಆರೋಪಕ್ಕೆ ಸಂಬಂಧಿಸಿದ ತನಿಖೆಗೆ ಹಾಜರಾಗಿ ಎಲ್ಲ ರೀತಿಯಲ್ಲಿ ಸಹಕರಿಸಲಾಗಿದೆ. ಹೀಗಿದ್ದರೂ, ಕಾರ್ಯಕ್ರಮದ ತೀರ್ಪುಗಾರರನ್ನೂ ತನಿಖೆಗೆ ಒಳಪಡಿಸಲು ಪೊಲೀಸರು ಬಯಸುತ್ತಿದ್ದಾರೆ ಎಂದು ಝೀ ಎಂಟರ್‌ಪ್ರೈಸಸ್ ಹೈಕೋರ್ಟ್‌ ಮುಂದೆ ದೂರಿದೆ.

ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಕೋರಿ ಝೀ ಎಂಟರ್‌ಪ್ರೈಸಸ್‌ನ ಪ್ರತಿನಿಧಿ ದೀಪಕ್ ಶ್ರೀರಾಮುಲು ಹಾಗೂ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ನಿರ್ದೇಶಕ ಕೆ. ಅನಿಲ್‌ ಕುಮಾರ್‌ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಹಿರಿಯ ವಕೀಲ ಸಂದೇಶ್ ಚೌಟ ಹಾಜರಾಗಿ, ಅರ್ಜಿದಾರರು ಪ್ರಕರಣದ ತನಿಖೆಗೆ ಹಾಜರಾಗಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಕಾರ್ಯಕ್ರಮದ ತೀರ್ಪುಗಾರರಾದ ತಾರಾ, ಜಗ್ಗೇಶ್ ಹಾಗೂ ಮತ್ತೊಬ್ಬ ಸೆಲೆಬ್ರಿಟಿಯನ್ನೂ ತನಿಖೆಗೆ ಹಾಜರಾಗಬೇಕೆಂದು ಬಯಸಿದ್ದಾರೆ. ವಿದ್ಯುನ್ಮಾನ ಸಾಕ್ಷ್ಯಗಳು ಲಭ್ಯವಿದೆಯಾದರೂ, ತೀರ್ಪುಗಾರರನ್ನು ತನಿಖೆಗೆ ಕರೆಸುವಷ್ಟು ಕಠಿಣ ನಿಲುವು ತಾಳುವ ಅಗತ್ಯವಿಲ್ಲ ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ತೀರ್ಪುಗಾರರನ್ನು ಏಕೆ ಕರೆಸಬೇಕು? ಅವರಿಗೆ ಏಕೆ ತೊಂದರೆ ಕೊಡುತ್ತೀರಿ? ಎಂದು ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿತಲ್ಲದೆ, ತೀರ್ಪುಗಾರರಿಗೆ ಪೊಲೀಸರು ನೀಡಿರುವ ಸಮನ್ಸ್ ಪ್ರತಿ ಎಲ್ಲಿ ಎಂದು ಅರ್ಜಿದಾರರ ಪರ ವಕೀಲರನ್ನು ಕೇಳಿತು.

ಸಂದೇಶ್ ಚೌಟ ಪ್ರತಿಕ್ರಿಯಿಸಿ, ಪೊಲೀಸರು ಸಮನ್ಸ್ ನೀಡಿಲ್ಲ. ನಾವು ತನಿಖೆಗೆ ಹಾಜರಾದ ಸಂದರ್ಭದಲ್ಲಿ ನಮ್ಮ ಮೂಲಕ ತೀರ್ಪುಗಾರರನ್ನು ಕರೆಸುವ ಯತ್ನ ಮಾಡುತ್ತಿದ್ದಾರೆ. ಅವರ ವಿಳಾಸ ಮತ್ತಿತರ ವಿವರಗಳನ್ನು ನೀಡುವಂತೆ ಹೇಳುತ್ತಿದ್ದಾರೆ ಎಂದರು.

ಆಗ ನ್ಯಾಯಪೀಠ, ನೀವು ಹೇಳುತ್ತಿರುವುದಕ್ಕೆ ದಾಖಲೆಗಳೇನಿವೆ ಎಂದು ಪ್ರಶ್ನಿಸಿತು. ಸಂದೇಶ್ ಚೌಟ ಉತ್ತರಿಸಿ, ನಮ್ಮನ್ನು ಠಾಣೆಗೆ ಕರೆದು ನಮ್ಮ ಬಳಿ ಅವರು ವಿವರಗಳನ್ನು ಕೇಳಿದ್ದಾರೆ. ಅದರ ಬಗ್ಗೆ ನಾವು ಹೇಳಿಕೆ ನೀಡುತ್ತುದ್ದೇವೆ. ಅವರು ನಮ್ಮ ಬಳಿ ಕೇಳದೇ ಇದ್ದರೆ ನಾವು ಕೋರ್ಟ್ ಮುಂದೆ ಹೇಳುತ್ತಲೇ ಇರಲಿಲ್ಲ. ಇದನ್ನು ಪೊಲೀಸರು ಅಲ್ಲಗಳೆಯುವುದಿಲ್ಲ ಎಂದು ಭಾವಿಸುತ್ತೇವೆ. ಸರ್ಕಾರದ ಪರ ವಕೀಲರು ಈ ಕುರಿತು ತನಿಖಾಧಿಕಾರಿಯಿಂದಲೇ ತಿಳಿದುಕೊಳ್ಳಬಹುದು ಎಂದರು.

ಇದನ್ನು ಆಲಿಸಿದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಫೆಬ್ರವರಿ 27ಕ್ಕೆ ಮುಂದೂಡಿತು. ಈ ವೇಳೆ ಸಂದೇಶ್ ಚೌಟ ಅವರು, ಮುಂದಿನ ವಿಚಾರಣೆ ವೇಳೆ ವಿವಾದಿತ ಸಂಚಿಕೆಯನ್ನು ನ್ಯಾಯಾಲಯಕ್ಕೆ ತೋರಿಸಲು ಅನುಮತಿಸಬೇಕು. ನಾಟಕವೊಂದರ ರಿಹರ್ಸಲ್ ಅನ್ನು ಹಾಸ್ಯದ ಮೂಲಕ ತೋರಿಸಲಾಗಿದೆಯಷ್ಟೇ ಎಂದರು.

ಅದರ ಬಗ್ಗೆ ಮುಂದಿನ ವಿಚಾರಣೆ ವೇಳೆ ನೋಡೋಣ ಎಂದು ತಿಳಿಸಿ ವಿಚಾರಣೆ ಮುಂದೂಡಿದ ನ್ಯಾಯಪೀಠ, ಝೀ ವಾಹಿನಿ, ಕಾರ್ಯಕ್ರಮದ ಕಲಾವಿದರು, ನಿರ್ದೇಶಕರ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವನ್ನು ಮುಂದಿನ ವಿಚಾರಣೆವರೆಗೆ ವಿಸ್ತರಿಸಿತು.

ಪ್ರಕರಣದ ಹಿನ್ನೆಲೆ:
ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಎಪಿಸೋಡ್ ಒಂದರಲ್ಲಿ ಪ್ರಸಾರವಾದ ಹಾಸ್ಯದ ಸ್ಕಿಟ್‌ನ ಪಾತ್ರಧಾರಿಗಳು, ಸ್ಕ್ರಿಪ್ಟ್ ತಯಾರಿಸಿದವರು, ನಿರ್ದೇಶಕರು, ಕನ್ನಡ ವಾಹಿನಿ, ಜಿ5 ಒಟಿಟಿ ಮತ್ತು ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳು ಮಹಾಭಾರತದಲ್ಲಿನ ಪೂಜ್ಯರ ಪಾತ್ರಗಳನ್ನು ಹಿಂದು ಧರ್ಮದ ಭಾವನೆಗೆ ಧಕ್ಕೆ ಬರುವಂತೆ ಬಿಂಬಿಸಿದ್ದಾರೆ. ಶ್ರೀ ಕೃಷ್ಣ, ಪಾಂಡವರು, ಧೃತರಾಷ್ಟ್ರನ ಪಾತ್ರಧಾರಿಗಳನ್ನು ಅವಾಚ್ಯ ಶಬ್ದದಿಂದ ನಿಂದಿಸಲಾಗಿದೆ. ಶ್ರೀಕೃಷ್ಣನ ಪಾತ್ರದಾರಿಗೆ 2-3 ಸಾರಿ ಕಪಾಳ ಮೋಕ್ಷ ಮತ್ತು ದ್ರೌಪದಿ ಪಾತ್ರದಾರಿಗೆ ಮೈಮೇಲೆ ಸರಾಯಿ ಸಿಂಪಡಿಸಿ ಆ ಪಾತ್ರಗಳಿಗೆ ಅವಹೇಳನ ಮಾಡಿ, ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಲಾಗಿದೆ ಎಂದು ಹುಬ್ಬಳ್ಳಿಯ ಕೇಶ್ವಾಪುರದ ಪ್ರಶಾಂತ್‌ ನರಗುಂದ 2025ರ ನವೆಂಬರ್‌ 15ರಂದು ದೂರು ನೀಡಿದ್ದರು.

ದೂರು ಆಧರಿಸಿ, ಕಾಮಿಡಿ ಕಿಲಾಡಿಗಳು ಕಲಾವಿದರು, ಸ್ಕ್ರಿಪ್ಟ್‌ ರೈಟರ್‌, ನಿರ್ದೇಶಕ, ಜೀ ಕನ್ನಡ ವಾಹಿನಿ, ಜಿ5 ಒಟಿಟಿ, ಕಾಮಿಡಿ ಕಿಲಾಡಿಗಳು ಪ್ರಸಾರಕರು ಮತ್ತು ಇತರರ ವಿರುದ್ಧ ಬಿಎನ್‌ಎಸ್‌ ಸೆಕ್ಷನ್‌ 299ರ ಅಡಿ ಹುಬ್ಬಳ್ಳಿಯ ಸಬ್‌ ಅರ್ಬನ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆನಂತರ ಅದನ್ನು ಬೆಂಗಳೂರಿನ ಸುಬ್ರಹ್ಮಣ್ಯಪುರ ಠಾಣೆಗೆ ವರ್ಗಾಯಿಸಲಾಗಿದೆ. ಈ ಪ್ರಕರಣ ರದ್ದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಅರ್ಜಿಯ ಕಳೆದ ವಿಚಾರಣೆ ವೇಳೆ ನ್ಯಾಯಪೀಠ, ವಾಕ್‌ ಸ್ವಾತಂತ್ರ್ಯದ ನೆಪದಲ್ಲಿ ನಿಮಗೆ ಅನಿಸಿದ್ದೆಲ್ಲವನ್ನೂ ಮಾಡಬಹುದೇ? ದೇವರು, ಪೌರಾಣಿಕ ವ್ಯಕ್ತಿಗಳನ್ನು ನಿಷ್ಪ್ರಯೋಜಕರು ಎನ್ನುವ ರೀತಿಯಲ್ಲಿ ಬಿಂಬಿಸುವವರನ್ನು ಏಕೆ ಬಿಡಬೇಕು? ಹಾಸ್ಯದ ಹೆಸರಿನಲ್ಲಿ ಏನಾದರೂ ಈ ದೇಶದಲ್ಲಿ ನಡೆಯುತ್ತದೆ? ಈ ರೀತಿಯಲ್ಲಿ ವಾಕ್‌ ಸ್ವಾತಂತ್ರ್ಯ ಬಳಕೆ ಸರಿಯೇ? ಎಂದು ಝೀ ವಾಹಿನಿ ಹಾಗೂ ಕಾರ್ಯಕ್ರಮದ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡಿತ್ತು.

 

Related Articles

Comments (0)

Leave a Comment