ಗ್ರಾ.ಪಂ. ಚುನಾಯಿತ ಸದಸ್ಯರ ಅವಧಿಯ ಕೊನೆಯಲ್ಲೂ ಅವಿಶ್ವಾಸ ನಿರ್ಣಯ ಮಂಡಿಸಬಹುದು – ಹೈಕೋರ್ಟ್
- by Prashanth Basavapatna
- February 10, 2026
- 9 Views
ಬೆಂಗಳೂರು: ಗ್ರಾಮ ಪಂಚಾಯತಿ ಚುನಾಯಿತ ಸದಸ್ಯರ ಅವಧಿಯ ಕೊನೆಯಲ್ಲೂ ಅವಿಶ್ವಾಸ ನಿರ್ಣಯ ಮಂಡನೆಗೆ ಅನುಮತಿ ನೀಡಬಹುದು. ಇದರಿಂದ, ಚುನಾಯಿತ ಪದಾಧಿಕಾರಿಗಳು ಉಳಿದ ಅಧಿಕಾರಾವಧಿ ದುರುಪಯೋಗಪಡಿಸಿಕೊಳ್ಳುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಅಲ್ಲದೆ, ಸದಸ್ಯರು ಪ್ರಮಾಣವಚನ ಸ್ವೀಕರಿಸಿದ ದಿನಾಂಕದಿಂದ 15 ತಿಂಗಳ ಅವಧಿ ಹೊರತುಪಡಿಸಿ ಯಾವುದೇ ಸಂದರ್ಭದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶವಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಚಲ್ದಿಗಾನಹಳ್ಳಿಯ ಗ್ರಾ.ಪಂ. ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಸಂಬಂಧ ಸದಸ್ಯರ ಮನವಿಯ ಮೇರೆಗೆ ಉಪವಿಭಾಗಾಧಿಕಾರಿ ದಿನಾಂಕ ನಿಗದಿಪಡಿಸಿದ್ದ ಕ್ರಮ ಪ್ರಶ್ನಿಸಿ ಗ್ರಾ.ಪಂ. ಅಧ್ಯಕ್ಷ ಸಿ.ಎನ್. ಶ್ರೀನಿವಾಸ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಹೈಕೋರ್ಟ್ ಆದೇಶವೇನು?
ಗ್ರಾಮ ಪಂಚಾಯತಿ ಸದಸ್ಯರು ಪ್ರಮಾಣವಚನ ಸ್ವೀಕರಿಸಿದ ದಿನಾಂಕದಿಂದ 15 ತಿಂಗಳ ಆರಂಭಿಕ ಅವಧಿಯಲ್ಲಿ ಮಾತ್ರ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶವಿಲ್ಲ. ಆದರೆ, 15 ತಿಂಗಳ ಬಳಿಕ ಯಾವುದೇ ಸಂದರ್ಭದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸುವುದಕ್ಕೆ ಅವಕಾಶವಿರಲಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಅವಧಿಯ ಕೊನೆಯ ಹಂತದಲ್ಲಿ ಅವಿಶ್ವಾಸ ಮಂಡಿಸಲು ಸದಸ್ಯರು ಮುಂದಾಗಿದ್ದಾರೆಂದು ಅರ್ಜಿದಾರರ ಪರ ವಕೀಲರು ತಿಳಿಸಿದ್ದಾರೆ. ಆದರೆ, ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ 15 ತಿಂಗಳ ಬಳಿಕ ಯಾವ ಸಂದರ್ಭದಲ್ಲಾದರೂ ಅವಿಶ್ವಾಸ ನಿರ್ಣಯ ಮಂಡಿಸಬಹುದಾಗಿದೆ. ಆದ್ದರಿಂದ, ಅರ್ಜಿದಾರರ ವಾದ ಒಪ್ಪಲಾಗುವುದಿಲ್ಲ. ಜತೆಗೆ, ಅವಧಿಯ ಅಂತ್ಯದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲು ಅನುಮತಿ ನೀಡುವುದರಿಂದ ಚುನಾಯಿತ ಪದಾಧಿಕಾರಿಗಳ ಉಳಿದ ಅಧಿಕಾರಾವಧಿ ದುರುಪಯೋಗವಾಗಲಿದೆ ಎನ್ನಲಾಗುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಸದಸ್ಯರ ಮನವಿ ಮೇರೆಗೆ ಅವಿಶ್ವಾಸ ನಿರ್ಣಯ ಅಂಗೀಕರಿಸುವ ಸಲುವಾಗಿ ಉಪವಿಭಾಗಾಧಿಕಾರಿಗಳು ಸಭೆ ನಡೆಸಲು ದಿನಾಂಕ ನಿಗದಿ ಮಾಡಿರುವುದಲ್ಲಿ ಯಾವುದೇ ದೋಷ ಕಂಡು ಬಂದಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿರುವ ನ್ಯಾಯಪೀಠ, ಆರ್ಥಿಕ ಅವ್ಯವಹಾರ ಸಂಬಂಧ ಅರ್ಜಿದಾರರು ಮಾಡಿರುವ ಆರೋಪ ಸಂಬಂಧ ಪರಿಶೀಲನೆ ನಡೆಸಲು ಸಕ್ಷಮ ಪ್ರಾಧಿಕಾರಕ್ಕೆ ರವಾನಿಸಬೇಕು. ನ್ಯಾಯಾಲಯದ ಆದೇಶದ ಪ್ರತಿ ಸಿಕ್ಕ ಏಳು ದಿನಗಳೊಳಗೆ ಅಕ್ರಮ ಆರೋಪ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾ.ಪಂ. ಕಾರ್ಯದರ್ಶಿಗೆ ಸೂಚಿಸಿದೆ.
ಪ್ರಕರಣವೇನು?
ಶ್ರೀನಿವಾಸಪುರ ತಾಲೂಕಿನ ಚಲ್ದಿಗಾನಹಳ್ಳಿಯ ಗ್ರಾ.ಪಂ. ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಕೈಗೊಳ್ಳುವ ಸಂಬಂಧ ಸದಸ್ಯರು ಮನವಿ ಸಲ್ಲಿಸಿದ್ದರು. ಆ ಮನವಿಯ ಆಧಾರದಲ್ಲಿ 2026ರ ಜನವರಿ 7ರಂದು ಅವಿಶ್ವಾಸ ನಿರ್ಣಯಕ್ಕೆ ಸಭೆ ನಡೆಸುವುದಕ್ಕಾಗಿ ಉಪ ವಿಭಾಗಾಧಿಕಾರಿಗಳು 2025ರ ಡಿಸೆಂಬರ್ 20ರಂದು ನೋಟಿಸ್ ಜಾರಿ ಮಾಡಿದ್ದರು. ಅದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.
ವಿಚಾರಣೆ ವೇಳೆ ವಾದ ಮಂಡಿಸಿದ್ದ ಅರ್ಜಿದಾರರ ಪರ ವಕೀಲರು, ಪಂಚಾಯತ್‌ನಲ್ಲಿ ಲಭ್ಯವಿರುವ 65 ಲಕ್ಷ ರೂ. ಅನುದಾನ ಬಿಡುಗಡೆಗೆ ಕೆಲ ಸದಸ್ಯರು ಮನವಿ ಮಾಡಿದ್ದರು. ಅದಕ್ಕೆ ಅಧ್ಯಕ್ಷರು ಒಪ್ಪದ ಕಾರಣ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾಗಿದ್ದಾರೆ. 2020ರ ಡಿಸೆಂಬರ್ 30ರಂದು ಆಯ್ಕೆಯಾಗಿದ್ದು, ಅವರ ಅವಧಿ ಪೂರ್ಣಗೊಳ್ಳುವ ಸಮಯದಲ್ಲಿ ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿದ್ದಾರೆ. ಆದ್ದರಿಂದ, ನೋಟಿಸ್ ರದ್ದುಪಡಿಸಬೇಕು ಎಂದು ಕೋರಿದ್ದರು.
Related Articles
Thank you for your comment. It is awaiting moderation.


Comments (0)