ಕೋಗಿಲು ಬಡಾವಣೆಯಲ್ಲಿ ಯಾರಿಗೂ ತಾತ್ಕಾಲಿಕ ಹಕ್ಕು ಪತ್ರ ನೀಡಲಾಗಿಲ್ಲ; ಹೈಕೋರ್ಟ್‌ಗೆ ರಾಜ್ಯ ಸರ್ಕಾರದ ಮಾಹಿತಿ

ಬೆಂಗಳೂರು: ಯಲಹಂಕ ಬಳಿಯ ಕೋಗಿಲು ಬಡಾವಣೆಯಲ್ಲಿನ ವಾಸಿಂ ಮತ್ತು ಫಕೀರ್ ಕಾಲನಿಗಳಲ್ಲಿ ಯಾವುದೇ ವ್ಯಕ್ತಿಗೆ ನಿವೇಶನಕ್ಕೆ ಸಂಬಂಧಿಸಿದಂತೆ ತಾತ್ಕಾಲಿಕ ಹಕ್ಕು ಪತ್ರ ನೀಡಲಾಗಿಲ್ಲ. ಕೋಗಿಲು ಬಡಾವಣೆಯ ಹೊರೆಗೆ ಮೂವರಿಗೆ ಹಕ್ಕು ಪತ್ರ ನೀಡಿರುವ ಮಾಹಿತಿ ಇದ್ದು, ನಾಲ್ಕು ಮಂದಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿತು.

ಮನೆಗಳ ತೆರವು ಕಾರ್ಯಾಚರಣೆಯನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಕೋಗಿಲು ಬಡಾವಣೆ ನಿವಾಸಿಗಳಾದ ಜೈಬಾ ತಬಸ್ಸುಮ್, ರೆಹಾನಾ ಹಾಗೂ ಆರೀಫ್ ಬೇಗಂ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆಯೇ ನಿವೇಶನಕ್ಕೆ ತಾತ್ಕಾಲಿಕ ಹಕ್ಕು ಪತ್ರ ನೀಡಿರುವ ಮಾಹಿತಿ ಎಲ್ಲಿ ಎಂಬ ನ್ಯಾಯಪೀಠದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಅವರು, ಮೂವರಿಗೆ ಕೋಗಿಲು ಬಡಾವಣೆಯ ಹೊರಗೆ ತಾತ್ಕಾಲಿಕ ನಿವೇಶನ ಹಂಚಿಕೆಯಾಗಿದೆ. ಅದೂ ಸಹ ಷರತ್ತಿಗೆ ಒಳಪಟ್ಟಿದೆ. ಉಳಿದ ನಾಲ್ವರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದರು.

ತೆರವು ಕಾರ್ಯಾಚರಣೆಯಲ್ಲಿ 167 ಮಂದಿ ಸಂತ್ರಸ್ತರಾಗಿದ್ದು, ನಾಲ್ಕು ಸ್ಥಳಗಳಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಅಲ್ಲಿಗೆ ಯಾರೂ ಬರುತ್ತಿಲ್ಲ. ಈ ಸಂಬಂಧ ನ್ಯಾಯಾಲಯದ ನಿರ್ದೇಶನದಂತೆ ಪ್ರಮಾಣಪತ್ರ ಸಲ್ಲಿಸಲಾಗಿದೆ ಎಂದು ಅಡ್ವೊಕೇಟ್ ಜನರಲ್ ಹೇಳಿದರು.

ಅರ್ಜಿದಾರರ ಪರ ವಕೀಲರು, ನಾಲ್ಕು ಪುನರ್ವಸತಿ ಕೇಂದ್ರಗಳನ್ನು ಮುಚ್ಚಲಾಗಿದೆ. ಸಂಪರ್ಕ ಸಂಖ್ಯೆಯೂ ಸರಿಯಾಗಿಲ್ಲ. ಬಿಬಿಎಂಪಿಗೆ ತೆರವು ಕಾರ್ಯಾಚರಣೆ ನಡೆಸುವ ಅಧಿಕಾರವಿಲ್ಲ ಎಂದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಪ್ರಕರಣದಲ್ಲಿ ನ್ಯಾಯಾಲಯಕ್ಕೆ ನೆರವಾಗಲು ವಕೀಲೆ ಬಿ.ವಿ. ವಿದ್ಯುಲ್ಲತಾ ಅವರನ್ನು ಅಮೈಕಸ್‌ ಕ್ಯೂರಿಯನ್ನಾಗಿ ನೇಮಿಸಿತಲ್ಲದೆ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು (ಕೆಎಸ್‌ಎಲ್‌ಎಸ್‌ಯು) ಸಂತ್ರಸ್ತರ ಪುನರ್ವಸತಿಗೆ ಸಂಬಂಧಿಸಿದಂತೆ ವರದಿ ನೀಡಬೇಕು ಮತ್ತು ಅಮಿಕಸ್‌ ಕ್ಯೂರಿಗೆ ನೆರವಾಗಬೇಕು ಎಂದು ನಿರ್ದೇಶಿಸಿ, ಅರ್ಜಿ ವಿಚಾರಣೆ ಮುಂದೂಡಿತು.

Related Articles

Comments (0)

Leave a Comment