ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳಿಗೆ ಪುನರ್ವಸತಿ; ನೋಡಲ್ ಅಧಿಕಾರಿ ನೇಮಿಸಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು: ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳ ಪುನರ್ವಸತಿಗೆ ಸಮಗ್ರ ಕ್ರಿಯಾ ಯೋಜನೆ ರೂಪಿಸಲು ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ನೋಡಲ್ ಅಧಿಕಾರಿಯೊಬ್ಬರನ್ನು ನೇಮಕ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳನ್ನು ಗುರುತಿಸಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರ್ಕಾರಕ್ಕೆ ನಿರ್ದೇಶನ ಕೋರಿ ಲೆಟ್ಜ್‌ ಕಿಟ್‌ ಫೌಂಢಷನ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಹೆಚ್ಚುವರಿ ಅಡ್ವೋಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಅವರು, ಭಿಕ್ಷುಕರ ಸೆಸ್ ಸಂಗ್ರಹಣೆ ಸಂಬಂಧ ಗ್ರೆಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮುಖ್ಯ ಲೆಕ್ಕಾಧಿಕಾರಿ ಸಲ್ಲಿಸಿರುವ ಪ್ರಮಾಣಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.

ಜಿಬಿಎ ವ್ಯಾಪ್ತಿಯಲ್ಲಿ 20024-25ರಲ್ಲಿ 86.26 ಕೋಟಿ ರೂ. ಭಿಕ್ಷುಕರ ಸೆಸ್ ಸಂಗ್ರಹ ಮಾಡಲಾಗಿದ್ದು, ಅದರಲ್ಲಿ 10.32 ಕೋಟಿ ರೂ. ಗಳನ್ನು ಕೇಂದ್ರ ಪರಿಹಾರ ಸಮಿತಿಗೆ (ಸಿಆರ್‌ಸಿ) ಪಾವತಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಇಲ್ಲಿವರೆಗೆ 73.12 ಕೋಟಿ ರೂ. ಸಂಗ್ರಹಿಸಲಾಗಿದೆ. ಈಗ ಜಿಬಿಎ ವ್ಯಾಪ್ತಿಯಲ್ಲಿ 5 ಹೊಸ ಪಾಲಿಕೆಗಳಾಗಿದ್ದು, ಕಳೆದ ವರ್ಷದ ಬಾಕಿ 75 ಕೋಟಿ ರೂ. ಹಾಗೂ ಈ ವರ್ಷದ ಭಿಕ್ಷುಕರ ಸೆಸ್ ಪಾಲನ್ನು 2026ರ ಮಾರ್ಚ್ 31ರೊಳಗೆ ಕೇಂದ್ರ ಪರಿಹಾರ ಸಮಿತಿಗೆ ಪಾವತಿಸುವಂತೆ ಆಯಾ ಪಾಲಿಕೆಗೆಗಳ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ ಎಂದು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.

ಕಾನೂನು ಸೇವಾ ಪ್ರಾಧಿಕಾರದ ಪರ ವಕೀಲೆ ಮೈತ್ರೆಯಿ ಕೃಷ್ಣನ್ ವಾದ ಮಂಡಿಸಿ, ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಿಂದ ಸಂಗ್ರಹಿಸಲಾದ 40.88 ಕೋಟಿ ರೂ. ಭಿಕ್ಷುಕರ ಸೆಸ್ ಪೌರಾಡಳಿತ ನಿರ್ದೇಶನಾಲಯದಿಂದ ಬರುವುದು ಬಾಕಿ ಇದೆ. ಅದೇ ರೀತಿ ಪಂಚಾಯಿತಿಗಳಲ್ಲಿ ಸಂಗ್ರಹಿಸಲಾದ ಸೆಸ್ ಬಗ್ಗೆ ಗ್ರಾಮೀಣಾಭಿವೃದ್ದಿ ಇಲಾಖೆಯಿಂದ ಮಾಹಿತಿ ಬರಬೇಕಿದೆ. ಪ್ರಾಧಿಕಾರ ನಡೆಸಿದ ಸಮೀಕ್ಷೆಯಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ್ದ 720 ಮಕ್ಕಳನ್ನು ಗುರುತಿಸಲಾಗಿದ್ದು, ಪುನರ್ವಸತಿಗೆ ಕೆಲ ಶಿಫಾರಸುಗಳನ್ನು ಸೂಚಿಸಲಾಗಿದೆ ಎಂದು ತಿಳಿಸಿದರು.

ಇದನ್ನು ಆಲಿಸಿದ ನ್ಯಾಯಪೀಠ, ಜಿಬಿಎ ಸೇರಿದಂತೆ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯಿತಿಗಳಲ್ಲಿ ಸಂಗ್ರಹಿಸಲಾಗಿರುವ ಒಟ್ಟು ಭಿಕ್ಷುಕರ ಸೆಸ್, ಅದರಲ್ಲಿ ಸಿಆರ್‌ಸಿಗೆ ಪಾವತಿಸಲಾದ ಮೊತ್ತ, ಬಾಕಿ ಉಳಿದ ಮೊತ್ತದ ಬಗ್ಗೆ ವಸ್ತುಸ್ಥಿತಿ ವರದಿ ನೀಡುವಂತೆ ರಾಜ್ಯ ಸರ್ಕಾರ ಹಾಗೂ ಜಿಬಿಎಗೆ ನಿರ್ದೇಶನ ನೀಡಿತು.

ಜತೆಗೆ, ಮಕ್ಕಳ ಭಿಕ್ಷಾಟನೆ ನಿರ್ಮೂಲನೆ ಮತ್ತು ಅವರ ಪುನರ್ವಸತಿಗೆ 6 ವಾರಗಳಲ್ಲಿ ಸಮಗ್ರ ಕ್ರಿಯಾ ಯೋಜನೆ ರೂಪಿಸಬೇಕು. ಕ್ರಿಯಾ ಯೋಜನೆ ರೂಪಿಸಲು ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ನೋಡಲ್ ಅಧಿಕಾರಿಯೊಬ್ಬರನ್ನು ನೇಮಕ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಏಪ್ರಿಲ್ 1ಕ್ಕೆ ಮುಂದೂಡಿತು.

Related Articles

Comments (0)

Leave a Comment