ಕೆಎಸ್ಸಿಎ ಪದಾಧಿಕಾರಿಗಳು ಸದ್ಯಕ್ಕೆ ನಿರಾಳ; ಬಲವಂತದ ಕ್ರಮ ಜರುಗಿಸಿದಂತೆ ಹೈಕೋರ್ಟ್ ಆದೇಶ
- by Jagan Ramesh
- June 6, 2025
- 55 Views

ಬೆಂಗಳೂರು: ಹದಿನೆಂಟು ವರ್ಷಗಳ ಬಳಿಕ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ವಿಜಯೋತ್ಸವ ಆಚರಣೆ ವೇಳೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್ಸಿಎ) ಪದಾಧಿಕಾರಿಗಳ ವಿರುದ್ಧ ಆತುರದ ಕ್ರಮ ಜರುಗಿಸದಂತೆ ಹೈಕೋರ್ಟ್ ಆದೇಶಿಸಿದೆ.
ಪ್ರಕರಣ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದುಕೋರಿ ಕೆಎಸ್ಸಿಎ ಅಧ್ಯಕ್ಷ ರಘುರಾಮ್ ಭಟ್, ಕಾರ್ಯದರ್ಶಿ ಎ. ಶಂಕರ್, ಖಜಾಂಚಿ ಇ.ಎಸ್. ಜಯರಾಮ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧ ಮುಂದಿನ ಆದೇಶದವರೆಗೂ ಆತುರದ ಕ್ರಮಕ್ಕೆ ಮುಂದಾಗಬಾರದು. ಅರ್ಜಿದಾರರು ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಬೇಕು ಹಾಗೂ ವಿಚಾರಣಾ ನ್ಯಾಯಾಲಯದ ವ್ಯಾಪ್ತಿ ತೊರೆದು ಹೋಗಬಾರದು ಎಂದು ಆದೇಶಿಸಿತಲ್ಲದೆ, ಅರ್ಜಿ ಸಂಬಂಧ ವಿಶೇಷ ಸರ್ಕಾರಿ ಅಭಿಯೋಜಕರಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಜೂನ್ 16ಕ್ಕೆ ಮುಂದೂಡಿತು.
ಅರ್ಜಿದಾರರ ವಾದವೇನು?
ಇದಕ್ಕೂ ಮುನ್ನ, ಕೆಎಸ್ಸಿಎ ಪದಾಧಿಕಾರಿಗಳನ್ನು ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಅಶೋಕ ಹಾರನಹಳ್ಳಿ ಹಾಗೂ ಎಂ.ಎಸ್. ಶ್ಯಾಮ್ ಸುಂದರ್, ಒಂದೇ ಆರೋಪಕ್ಕೆ ಸಂಬಂಧಿಸಿದಂತೆ ಆರ್ಸಿಬಿ ಫ್ರಾಂಚೈಸಿಯ ಪದಾಧಿಕಾರಿಗಳು, ಕಾರ್ಯಕ್ರಮ ಆಯೋಜನೆಯ ಜವಾಬ್ದಾರಿ ಹೊತ್ತಿದ್ದ ಡಿಎನ್ಎ ಸಂಸ್ಥೆಯ ವಿರುದ್ಧವೂ ಪ್ರತ್ಯೇಕ ಎಫ್ಐಆರ್ ದಾಖಲಿಸಲಾಗಿದೆ. ಮುಖ್ಯಮಂತ್ರಿಗಳು ಬಂಧಿಸುವಂತೆ ನಿರ್ದೇಶಿಸಿದ್ದಾರೆ. ಇದರಿಂದ, ಅರ್ಜಿದಾರರ ಹಕ್ಕುಗಳಿಗೆ ಧಕ್ಕೆಯಾಗಲಿದೆ. ಪೊಲೀಸರಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಬಂಧನಕ್ಕೆ ಅವಕಾಶ ನೀಡಬಾರದು. ಈ ಮಧ್ಯೆ, ಎಫ್ಐಆರ್ ದಾಖಲಿಸಿರುವ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಅಧಿಕಾರಿಯನ್ನು ಸರ್ಕಾರವೇ ಅಮಾನತು ಮಾಡಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ರಾಜ್ಯ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎ. ಬೆಳ್ಳಿಯಪ್ಪ ಹಾಗೂ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ವಾದ ಮಂಡಿಸಿ, ಪ್ರಕರಣ ಸಂಬಂಧ ಮ್ಯಾಜಿಸ್ಟೀರಿಯಲ್ ತನಿಖೆಯ ಜತೆಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ನೇತೃತ್ವದಲದಲ್ಲಿ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ. ಅನಗತ್ಯವಾಗಿ ಎಲ್ಲರನ್ನೂ ಬಂಧಿಸುವುದಿಲ್ಲ. ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು. ಒಂದೊಮ್ಮೆ ಅರ್ಜಿದಾರರಿಗೆ ಆತಂಕವಿದ್ದರೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಬಹುದು ಎಂದರು.
ಅರ್ಜಿಯಲ್ಲೇನಿದೆ?
ಕಾಲ್ತುಳಿತ ಘಟನೆಯನ್ನು ಹೈಕೋರ್ಟ್ ಸ್ವಯಂಪ್ರೇರಿತ ಪ್ರಕರಣವಾಗಿ ಪರಿಗಣಿಸಿದೆ. ಅದರ ಬೆನ್ನಲ್ಲೇ ಎಫ್ಐಆರ್ ದಾಖಲಿಸುವುದು ಸೂಕ್ತವಲ್ಲ. ಆರ್ಸಿಬಿ ವಿಜಯೋತ್ಸವ ಆಚರಣೆಗೆ ಸರ್ಕಾರವೇ ಕರೆ ನೀಡಿದ್ದು, ವಿಧಾನ ಸೌಧದ ಮೆಟ್ಟಿಲುಗಳ ಮೇಲೆ ಆಟಗಾರರನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಮಂತ್ರಿ ಮಂಡಲದ ಸದಸ್ಯರು ಹಾಗೂ ಅಧಿಕಾರಿಗಳು ಸನ್ಮಾನಿಸಿದ್ದಾರೆ. ಜನರನ್ನು ನಿಯಂತ್ರಿಸಬೇಕಿರುವುದು ಆರ್ಸಿಬಿ, ಕಾರ್ಯಕ್ರಮದ ಸಂಘಟಕರು ಮತ್ತು ಪೊಲೀಸರ ಕರ್ತವ್ಯವಾಗಿದ್ದು, ಕೆಎಸ್ಸಿಎ ಅದಕ್ಕೆ ಹೊಣೆಯಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣ ಮಾತ್ರ ಕೆಎಸ್ಸಿಎ ನಿಯಂತ್ರಣಕ್ಕೆ ಬರಲಿದ್ದು, ಅಸೋಸಿಯೇಷನ್ಗೂ, ಅಭಿಮಾನಿಗಳಿಗೂ ಸಂಬಂಧವಿಲ್ಲ. ಬೆಂಗಳೂರು ಪೊಲೀಸ್ ಆಯುಕ್ತರು ಸೇರಿ ಐವರು ಅಧಿಕಾರಿಗಳನ್ನು ಅಮಾನತು ಮಾಡಿರುವುದು ಸಂಪೂರ್ಣವಾಗಿ ಪೊಲೀಸ್ ಇಲಾಖೆಯ ವೈಫಲ್ಯವನ್ನು ಎತ್ತಿ ತೋರುತ್ತದೆ. ಒತ್ತಡಕ್ಕೆ ಮಣಿದು ನಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದಕ್ಕೆ ಕಾನೂನಿನ ಮಾನ್ಯತೆ ಇಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
ದೂರಿನಲ್ಲಿರುವ ಆರೋಪಗಳು ನಿರಾಧಾರವಾಗಿದ್ದು, ಅರ್ಜಿದಾರರ ವಿರುದ್ಧದ ಕಾನೂನು ಪ್ರಕ್ರಿಯೆ ಆರಂಭಿಸಿರುವುದು ಕಾನೂನಿನ ದುರ್ಬಳಕೆಯಾಗಿದೆ. ಅರ್ಜಿದಾರರನ್ನು ಬಂಧಿಸುವಂತೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಲಾಗದು. ಬಂಧನದ ಬಗ್ಗೆ ತನಿಖಾಧಿಕಾರಿ ನಿರ್ಧರಿಸಬೇಕು. ಇಲ್ಲಿ ಮುಖ್ಯಮಂತ್ರಿ ಆದೇಶ ಇರುವುದರಿಂದ ತನಿಖಾಧಿಕಾರಿಗಳು ಕಣ್ಮುಚ್ಚಿ ಬಂಧಿಸುವ ಸಾಧ್ಯತೆ ಇದೆ ಎನ್ನುವುದು ಅರ್ಜಿದಾರರ ಅಳಲಾಗಿದೆ.
Related Articles
Thank you for your comment. It is awaiting moderation.
Comments (0)