ಯುನೈಟೆಡ್ ಬ್ರಿವರೀಸ್ ವಿರುದ್ಧದ ಕ್ರಿಮಿನಲ್ ಪ್ರಕರಣ; ತೀರ್ಪು ಕಾಯ್ದಿರಿಸಿದ ಹೈಕೋರ್ಟ್
- by Jagan Ramesh
- September 18, 2024
- 85 Views
ಬೆಂಗಳೂರು: ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ 98 ಕೋಟಿ ರೂ. ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಂಡ ಸಂಬಂಧ ಚಾಮರಾಜನಗರ ಲೋಕಸಭಾ ಕ್ಷೇತ್ರದ ನಂಜನಗೂಡು ವ್ಯಾಪ್ತಿಯ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿವ ಯುನೈಟೆಡ್ ಬ್ರಿವರೀಸ್ ಲಿಮಿಟೆಡ್ (ಯುಬಿಎಲ್) ವಿರುದ್ಧ ಅಬಕಾರಿ ಇಲಾಖೆ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪನ್ನು ಹೈಕೋರ್ಟ್ ಕಾಯ್ದಿರಿಸಿದೆ.
ನಂಜನಗೂಡು ಪೊಲೀಸ್ ಠಾಣೆಯಲ್ಲಿ ಅಬಕಾರಿ ಅಧಿಕಾರಿಗಳು ದಾಖಲಿಸಿರುವ ಎಫ್ಐಆರ್ ಮತ್ತದರ ಸಂಬಂಧ ನಂಜನಗೂಡು ಜೆಎಂಎಫ್ಸಿ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣಾ ಪ್ರಕ್ರಿಯೆ ರದ್ದು ಕೋರಿ ಯುಬಿಎಲ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಬುಧವಾರ ವಿಚಾರಣೆ ನಡೆಸಿತು.
ಯುಬಿಎಲ್ ಪರವಾಗಿ ಹಿರಿಯ ವಕೀಲ ಸಂದೇಶ ಚೌಟ ಹಾಗೂ ಪ್ರಾಸಿಕ್ಯೂಷನ್ ಪರವಾಗಿ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸುವುದಾಗಿ ಹೇಳಿತು. ಇದೇ ವೇಳೆ, ತೀರ್ಪು ಪ್ರಕಟವಾಗುವವರೆಗೆ ಪ್ರಕರಣಕ್ಕೆೆ ತಡೆ ನೀಡಲಾಗುವುದು. ಆದರೆ, ಅಬಕಾರಿ ಅಧಿಕಾರಿಗಳ ವಿರುದ್ಧ ನಡೆಯುತ್ತಿರುವ ಪ್ರಕರಣಕ್ಕೆೆ ತಡೆ ಇರುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.
ಅರ್ಜಿದಾರರ ವಾದವೇನು?
ಅಧಿಕೃತ ಮಾರಾಟ ಪರವಾನಗಿ ಪಡೆದು ಕೇರಳ ರಾಜ್ಯಕ್ಕೆ 17 ವಾಹನಗಳಲ್ಲಿ 7 ಸಾವಿರ ಬಿಯರ್ ಕೇಸ್ಗಳನ್ನು 2024ರ ಮಾರ್ಚ್ 30ರಂದು ಸಾಗಿಸಬೇಕಿತ್ತು. ತಾಂತ್ರಿಕ ಹಾಗೂ ಅರಣ್ಯ ಪ್ರದೇಶ ಹಾದು ಹೋಗುವ ಸಮಯದ ಕಾರಣಕ್ಕೆೆ ಏಳು ವಾಹನಗಳು ವಾಪಸ್ ಬರಬೇಕಾಯಿತು. ಇದರ ಮಾಹಿತಿಯನ್ನು ಸಂಬಂಧಪಟ್ಟ ಅಬಕಾರಿ ಅಧಿಕಾರಿಗಳಿಗೆ ನೀಡಲಾಗಿತ್ತು. ಹೀಗಿದ್ದರೂ, ಏಪ್ರಿಲ್ 1 ಮತ್ತು 2ರಂದು ಕಂಪನಿಯ ಮೇಲೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳ ತಂಡ ಮದ್ಯ ಹಾಗೂ ವಸ್ತುಗಳು ಸೇರಿ 98.52 ಕೋಟಿ ರೂ. ಮೊತ್ತದ ಸಾಮಾಗ್ರಿಗಳನ್ನು ಜಪ್ತಿ ಮಾಡಿತ್ತು ಎಂದು ಅರ್ಜಿದಾರರ ವಾದವಾಗಿದೆ. ಎಲ್ಲವೂ ಕಾನೂನು ರೀತಿ ನಡೆದಿದೆ ಎಂಬುದು ಸರ್ಕಾರದ ಸಮರ್ಥನೆಯಾಗಿದೆ.
ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಮದ್ಯ:
ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದ ವೇಳೆ ನಂಜನಗೂಡಿನಲ್ಲಿ 98.52 ಕೋಟಿ ರೂ. ಮೊತ್ತದ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂಬ ಸುದ್ದಿ ದೊಡ್ಡ ಸದ್ದು ಮಾಡಿತ್ತು. ಈ ಪ್ರಕರಣದಿಂದಾಗಿಯೇ ಅಕ್ರಮ ಮದ್ಯ ವಶದಲ್ಲಿ ಕರ್ನಾಟಕ ಇಡೀ ದೇಶದಲ್ಲಿ ಮುಂಚೂಣಿಯಲ್ಲಿರುವಂತೆ ಮಾಡಿತ್ತು.
Related Articles
Thank you for your comment. It is awaiting moderation.
Comments (0)