ಚಾಮುಂಡೇಶ್ವರಿ ದೇವಾಲಯದ ಸ್ಥಿರ-ಚರಾಸ್ತಿಗಳ ಪರಭಾರೆ ಬೇಡ; ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು: ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಸಂಬಂಧಿಸಿದ ಚರ ಮತ್ತು ಸ್ಥಿರಾಸ್ತಿಗಳನ್ನು ಸದ್ಯಕ್ಕೆ ಯಾವುದೇ ರೀತಿಯಲ್ಲಿ ಪರಭಾರೆ ಮಾಡದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆಯ ಸಿಂಧುತ್ವ ಪ್ರಶ್ನಿಸಿ ಮೈಸೂರು ರಾಜ ವಂಶಸ್ಥೆ ರಾಣಿ ಪ್ರಮೋದಾದೇವಿ ಒಡೆಯರ್ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ನಿರ್ದೇಶನ ನೀಡಿತು.

ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಚಾಮುಂಡೇಶ್ವರಿ ಕ್ಷೇತ್ರದ ಮಾಲೀಕತ್ವಕ್ಕೆ ಸಂಬಂಧಿಸಿದ ವ್ಯಾಜ್ಯ ಕಳೆದ 23 ವರ್ಷಗಳಿಂದ ನ್ಯಾಯಾಲಯದಲ್ಲಿ ಬಾಕಿ‌ ಇದೆ. 2004ರಲ್ಲಿ ರಾಜಮನೆತನ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆಯಾದರೂ, ಆ ಆದೇಶದ ವಿರುದ್ಧ ಸಲ್ಲಿಸಿರುವ ಮೇಲ್ಮನವಿ ಇನ್ನೂ ವಿಚಾರಣಾ ಹಂತದಲ್ಲಿದೆ. ಪ್ರಕರಣ ನ್ಯಾಯಾಲಯದಲ್ಲಿರುವಾಗ ವಿಧಾನಮಂಡಲದಲ್ಲಿ ವಿಧೇಯಕ ಮಂಡಿಸಿ ಪ್ರಾಧಿಕಾರ ರಚನೆ ಮಾಡಿರುವುದು ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ 81 ಹಾಗೂ 161ಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿದರು.

ಸರ್ಕಾರದಿಂದ ನ್ಯಾಯಾಲಯಕ್ಕೆ ಅಗೌರವ:
2024ರ ಫೆಬ್ರವರಿ 19ರಂದು ವಿಧೇಯಕ ಮಂಡಿಸಿ, 21ರಂದು ಅನುಮೋದನೆ ಪಡೆದುಕೊಳ್ಳಲಾಗಿದೆ. ಅದರ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಆದ್ದರಿಂದ, ವಿಧೇಯಕದ ಸಿಂಧುತ್ವ ಪ್ರಶ್ನಾರ್ಹವಾಗಿದೆ ಎಂದರಲ್ಲದೆ, ಕಳೆದ 2 ದಶಕಗಳಿಂದ ನ್ಯಾಯಾಲಯದಲ್ಲಿ ವ್ಯಾಜ್ಯವಿದ್ದರೂ ಸರ್ಕಾರ ಆ ಬಗ್ಗೆ ಏನೂ ಮಾಡಿಲ್ಲ. ಬದಲಿಗೆ ರಾಜಮನೆತನವೇ ಮೇಲ್ಮನವಿಯ ತ್ವರಿತ ವಿಚಾರಣೆಗೆ ನ್ಯಾಯಾಲಯಕ್ಕೆ ಮನವಿ ಮಾಡುತ್ತಿದೆ. ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳದೆ ಯಥಾಸ್ಥಿತಿ ಕಾಯ್ದುಕೊಳ್ಳಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕಳೆದೊಂದು ವರ್ಷದಿಂದ ನ್ಯಾಯಾಲಯಕ್ಕೆ ಮನವಿ ಮಾಡಿಕೊಳ್ಳಲಾಗುತ್ತಿದೆ. ಪ್ರಕರಣ ವಿಚಾರಣಾ ಹಂತದಲ್ಲಿರುವಾಗ ವಿಧೇಯಕ ತರುವ ಮುನ್ನ ಸರ್ಕಾರ ನ್ಯಾಯಾಲಯದ ಮೊರೆ ಹೋಗಬಹುದಿತ್ತು. ಅದನ್ನೂ ಮಾಡದೇ ಪ್ರಾಧಿಕಾರ ರಚಿಸಲಾಗಿದೆ. ಇದು ನ್ಯಾಯಾಲಯಕ್ಕೆ ಅಗೌರವ ತೋರಿದಂತಾಗುತ್ತದೆ ಎಂದು ಅರ್ಜಿದಾರರ ಪರ ವಕೀಲರು ಆಕ್ಷೇಪಿಸಿದರು.

ಚಾಮುಂಡೇಶ್ವರಿ ಕ್ಷೇತ್ರವು ಮೈಸೂರು ರಾಜಮನೆತನದ ಖಾಸಗಿ ಆಸ್ತಿಯಾಗಿದ್ದು, ಅದರಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಸರ್ಕಾರಕ್ಕಿಲ್ಲ. ಪ್ರಾಧಿಕಾರ ರಚನೆಯಿಂದ ಕ್ಷೇತ್ರದ ಆಸ್ತಿ, ವಜ್ರಾಭರಣಗಳು ಸರ್ಕಾರದ ಸುಪರ್ದಿಗೆ ಹೋಗಲಿದೆ. ಕ್ಷೇತ್ರದ ಧಾರ್ಮಿಕ ವಿಧಿ-ವಿಧಾನಗಳು, ಸಂಪ್ರದಾಯಗಳಲ್ಲಿ ಸರ್ಕಾರದ ಹಸ್ತಕ್ಷೇಪ ಇರಲಿದೆ. ಕ್ಷೇತ್ರದಲ್ಲಿ ಯಾರಾದರೂ ಮೃತಪಟ್ಟರೆ ಆ ಇಡೀ ದಿನ ದೇವಸ್ಥಾನ ಬಂದ್ ಮಾಡಲಾಗುತ್ತಿದೆ. ಆದರೆ, ಇತ್ತೀಚಿಗೆ ಸಾವೊಂದು ಸಂಭವಿಸಿದ್ದ ಸಂದರ್ಭದಲ್ಲೂ ಪ್ರಭಾವಿ ರಾಜಕಾರಣಿಯೊಬ್ಬರಿಗಾಗಿ ದೇವಸ್ಥಾನ ತೆರೆಯಲಾಗಿತ್ತು. ದೇವಾಲಯದ ಚರ ಮತ್ತು ಸ್ಥಿರಾಸ್ತಿಗಳಲ್ಲಿ ವೇಗವಾಗಿ ಬದಲಾವಣೆ ತರಲಾಗುತ್ತಿದೆ. ಆದ್ದರಿಂದ, ಪ್ರಾಧಿಕಾರ ರಚನೆಗೆ ಮಧ್ಯಂತರ ತಡೆ ನೀಡುವುದರ ಜತೆಗೆ, ದೇವಾಲಯದ ಸಂಪ್ರದಾಯಗಳಲ್ಲಿ ಸರ್ಕಾರ ಮಧ್ಯಪ್ರವೇಶಿಸದಂತೆ ಹಾಗೂ ಚರ ಮತ್ತು ಸ್ಥಿರಾಸ್ತಿಗಳ ಪರಭಾರೆ ಮಾಡದಂತೆ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಪ್ರಮೋದಾದೇವಿ ಒಡೆಯರ್ ಪರ ವಕೀಲರು ಮನವಿ ಮಾಡಿದರು.

ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎನ್. ದೇವದಾಸ್ ವಾದ ಮಂಡಿಸಿ, ಅರ್ಜಿದಾರರ ಪರ ವಕೀಲರು ಸಂಬಂಧಪಡದ ವಿಷಯಗಳನ್ನು ಉಲ್ಲೇಖಿಸುತ್ತಿದ್ದಾರೆ. ಸಂವಿಧಾನದ ಪರಿಚ್ಛೇದ 212 ರ ಅನುಸಾರ ಸರ್ಕಾರಕ್ಕೆ ಅಧಿಕಾರವಿದೆ. ಕಾಯ್ದೆ, ಪ್ರಾಧಿಕಾರದ ಸಿಂಧುತ್ವ ಬೇಕಿದ್ದರೆ ಅರ್ಜಿದಾರರು ಪ್ರಶ್ನಿಸಲಿ. ಆದರೆ, ವಿಧಾನಮಂಡಲದ ಪ್ರಕ್ರಿಯೆ ಪ್ರಶ್ನಿಸುವಂತಿಲ್ಲ. ಅರ್ಜಿದಾರರ ವಾದಗಳಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶಬೇಕು ಎಂದು ಮನವಿ ಮಾಡಿದರು.

ವಾದ-ಪ್ರತಿ ವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಸೆಪ್ಟೆಂಬರ್ 25ಕ್ಕೆ ಮುಂದೂಡಿತಲ್ಲದೆ, ಅಲ್ಲಿಯವರೆಗೆ ದೇವಸ್ಥಾನದ ಚರ ಮತ್ತು ಸ್ಥಿರಾಸ್ತಿಗಳ ಪರಭಾರೆ ಮಾಡದಂತೆ ಸರ್ಕಾರಕ್ಕೆ ನಿರ್ದೇಶನ‌ ನೀಡಿತು.

Related Articles

Comments (0)

Leave a Comment