ಪ್ರಯಾಣಿಕರಿಗೆ ಟಿಕೆಟ್ ವಿತರಿಸದ ಆರೋಪ; ನಿರ್ವಾಹಕನ ಮರುನೇಮಕ ಆದೇಶ ಎತ್ತಿ ಹಿಡಿದ ಹೈಕೋರ್ಟ್ ವಿಭಾಗೀಯ ಪೀಠ
- by Prashanth Basavapatna
- November 28, 2026
- 16 Views
ಬೆಂಗಳೂರು: ಇಬ್ಬರು ಪ್ರಯಾಣಿಕರಿಗೆ ಟಿಕೆಟ್ ನೀಡದ ಆರೋಪದಲ್ಲಿ ವಜಾಗೊಂಡಿದ್ದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ಎನ್ಡಬ್ಲ್ಯುಕೆಆರ್ಟಿಸಿ) ನಿರ್ವಾಹಕರೊಬ್ಬರನ್ನು ಮರುನೇಮಕ ಮಾಡಿಕೊಳ್ಳುವಂತೆ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ನೀಡಿದ್ದ ಆದೇಶವನ್ನು ವಿಭಾಗೀಯ ನ್ಯಾಯಪೀಠ ಎತ್ತಿಹಿಡಿದಿದೆ.
ನಿರ್ವಾಹಕ ಮಂಟಯ್ಯ ಪರವಾಗಿ ಏಕಸದಸ್ಯ ನ್ಯಾಯಪೀಠ 2022ರ ನವೆಂಬರ್ 10ರಂದು ನೀಡಿದ್ದ ಆದೇಶ ಪ್ರಶ್ನಿಸಿ ಎನ್ಡಬ್ಲ್ಯುಕೆಆರ್ಟಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಹಾಗೂ ನ್ಯಾಯಮೂರ್ತಿ ಹೇಮಾ ಕುಲಕರ್ಣಿ ಅವರಿದ್ದ ವಿಭಾಗೀಯ ನ್ಯಾಯಪೀಠ (ಧಾರವಾಡ) ವಜಾಗೊಳಿಸಿದೆ.
ಮಂಟಯ್ಯ ಸ್ವತಃ ಸಾಕ್ಷ್ಯ ನೀಡಿರಲಿಲ್ಲ. ಆಡಳಿತ ಮಂಡಳಿಯ ಸಾಕ್ಷ್ಯ ಮಂಡನೆ ಮುಗಿದ ಬಳಿಕ ತಮ್ಮ ಪರದ ಸಾಕ್ಷ್ಯ ಮಂಡಿಸಲು ಅವರಿಗೆ ಸಮಯವನ್ನೂ ನೀಡಿರಲಿಲ್ಲ ಎಂಬುದನ್ನು ಗಮನಿಸಿರುವ ವಿಭಾಗೀಯ ನ್ಯಾಯಪೀಠ, ನಿರ್ವಾಹಕರನ್ನು ತಪ್ಪಿತಸ್ಥರೆಂದು ನಿರ್ಧರಿಸಿ ವಜಾಗೊಳಿಸುವ ಮೊದಲು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ (ನಡತೆ ಮತ್ತು ಶಿಸ್ತು) ನಿಯಮಾವಳಿ-1971ರ ನಿಯಮ 23(18)ರ ಅಡಿ ಕಡ್ಡಾಯವಾಗಿ ನಡೆಸಬೇಕಿದ್ದ ಪ್ರಶ್ನಿಸುವ ಪ್ರಕ್ರಿಯೆಯನ್ನೂ ಕೈಗೊಂಡಿರಲಿಲ್ಲ ಎಂದು ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಮಂಟಯ್ಯ ಅವರಿಗೆ ತಮ್ಮ ಪರ ಸಾಕ್ಷ್ಯ ಮಂಡಿಸುವ ಅವಕಾಶ ಹಾಗೂ ವಿರುದ್ಧದ ಸಾಕ್ಷ್ಯದಲ್ಲಿನ ಅಂಶಗಳಿಗೆ ವಿವರಣೆ ನೀಡುವ ಅಂತಿಮ ಶಾಸನಬದ್ಧ ಅವಕಾಶ ಎರಡನ್ನೂ ನಿರಾಕರಿಸಲಾಗಿದೆ. ಇದರಿಂದ, ಅವರ ಪ್ರತಿವಾದದ ಹಕ್ಕಿಗೆ ಧಕ್ಕೆಯಾಗಿರುವುದು ಸ್ಪಷ್ಟವಾಗಿದೆ. ನೌಕರನಿಗೆ ಅವಕಾಶ ನೀಡಿದ್ದರೆ ಫಲಿತಾಂಶ ಖಚಿತವಾಗಿ ಬದಲಾಗುತ್ತಿತ್ತೇ ಎಂಬುದಷ್ಟೇ ಮುಖ್ಯವಲ್ಲ. ಕಾನೂನು ಒದಗಿಸಿರುವ ಅರ್ಥಪೂರ್ಣ ಅವಕಾಶವನ್ನು ನಿರಾಕರಿಸಲಾಗಿದೆಯೇ ಎಂಬುದು ಮುಖ್ಯವಾಗುತ್ತದೆ. ಶಿಕ್ಷೆ ವಿಧಿಸುವ ಅಧಿಕಾರಕ್ಕಿಂತ ನ್ಯಾಯಸಮ್ಮತವಾಗಿ ನಡೆದುಕೊಳ್ಳುವ ಕರ್ತವ್ಯಕ್ಕೆ ಆದ್ಯತೆ ಇರಬೇಕು ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣದ ಹಿನ್ನೆಲೆ:
2012ರ ಆಗಸ್ಟ್ನಲ್ಲಿ ಮಂಟಯ್ಯ ಕರ್ತವ್ಯದಲ್ಲಿದ್ದ ಬಸ್ ತಪಾಸಣೆ ನಡೆಸಿದ ತನಿಖಾ ತಂಡ, ಇಬ್ಬರು ಪ್ರಯಾಣಿಕರಿಗೆ ಟಿಕೆಟ್ ನೀಡಿರಲಿಲ್ಲ ಹಾಗೂ ತಲಾ 146 ರೂ. ಪ್ರಯಾಣ ದರ ಸಂಗ್ರಹಿಸಿರಲಿಲ್ಲ ಎಂಬುದನ್ನು ಪತ್ತೆಹಚ್ಚಿತ್ತು. ಶಿಸ್ತು ವಿಚಾರಣೆಯ ಬಳಿಕ 2014ರಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಮಂಟಯ್ಯ ಸಲ್ಲಿಸಿದ್ದ ಅರ್ಜಿಯನ್ನು ಕಾರ್ಮಿಕ ನ್ಯಾಯಾಲಯ 2016ರಲ್ಲಿ ತಿರಸ್ಕರಿಸಿತ್ತು. ಬಳಿಕ ಮಂಟಯ್ಯ ಹೈಕೋರ್ಟ್ ಮೊರೆ ಹೋಗಿದ್ದರು.
ವಿಚಾರಣೆ ನಡೆಸಿದದ್ದ ಏಕಸದಸ್ಯ ನ್ಯಾಯಪೀಠ, ಪ್ರಕರಣದಲ್ಲಿ ನಿಯಮ 23(18)ರ ಪಾಲನೆಯಾಗಿಲ್ಲ ಎಂಬುದನ್ನು ಗಮನಿಸಿತ್ತು. ಆರೋಪ ಎದುರಿಸುತ್ತಿರುವ ನೌಕರನಿಗೆ ತನ್ನ ನಿಲುವು ವಿವರಿಸಲು ಅವಕಾಶ ನೀಡಬೇಕೆಂಬ ಈ ನಿಯಮವನ್ನು ಪಾಲಿಸದ ಹಿನ್ನೆಲೆಯಲ್ಲಿ, ಮಂಟಯ್ಯ ಅವರನ್ನು ಮರುನೇಮಕ ಮಾಡಿಕೊಳ್ಳುವಂತೆ ಆದೇಶಿಸಿತ್ತು. ಜತೆಗೆ, ವಜಾ ಶಿಕ್ಷೆಯನ್ನು ಸಂಚಿತ ಪರಿಣಾಮದೊಂದಿಗೆ 2 ವಾರ್ಷಿಕ ವೇತನ ಬಡ್ತಿಗಳನ್ನು ತಡೆಹಿಡಿಯುವ ಶಿಕ್ಷೆಯಾಗಿ ಮಾರ್ಪಡಿಸಿತ್ತು. ಈ ಆದೇಶದ ವಿರುದ್ಧ ನಿಗಮ ಮೇಲ್ಮನವಿ ಸಲ್ಲಿಸಿತ್ತು.
Related Articles
Thank you for your comment. It is awaiting moderation.


Comments (0)