ಹೈಕೋರ್ಟ್ನಲ್ಲಿ ಕಡತಗಳ ಪತ್ತೆಗೆ ಆರ್ಎಫ್ಐಡಿ ವ್ಯವಸ್ಥೆ; ಸುತ್ತೋಲೆ ಹೊರಡಿಸಿದ ರಿಜಿಸ್ಟ್ರಾರ್ ಜನರಲ್
- by Prashanth Basavapatna
- November 28, 2026
- 16 Views
ಬೆಂಗಳೂರು: ರಾಜ್ಯ ಹೈಕೋರ್ಟ್ನ ಎಲ್ಲ ಶಾಖೆಗಳಲ್ಲಿ ಪ್ರಕರಣಗಳ ಕಡತಗಳ ಚಲನವಲನ ಪತ್ತೆಹಚ್ಚಲು ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ (ಆರ್ಎಫ್ಐಡಿ) ಆಧಾರಿತ ಕಡತ ಪತ್ತೆ ವ್ಯವಸ್ಥೆಯ ಬಳಕೆ ಕಡ್ಡಾಯಗೊಳಿಸಲಾಗಿದ್ದು, ಕಡತ ಸ್ವೀಕರಿಸಿದ ತಕ್ಷಣ ಹಾಗೂ ಮತ್ತೊಂದು ವಿಭಾಗಕ್ಕೆ ಕಳುಹಿಸುವ ಮುನ್ನ ಅದರ ಆರ್ಎಫ್ಐಡಿ ಟ್ಯಾಗ್ ಸ್ಕ್ಯಾನ್ ಮಾಡುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಆದೇಶದ ಮೇರೆಗೆ ರಿಜಿಸ್ಟ್ರಾರ್ ಜನರಲ್ ಎಂ. ಚಂದ್ರಶೇಖರ ರೆಡ್ಡಿ ಹೊರಡಿಸಿರುವ ಸುತ್ತೋಲೆಯಲ್ಲಿ ಈ ಕುರಿತ ಸೂಚನೆಗಳಿದ್ದು, ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ನಿರ್ದೇಶಿಸಲಾಗಿದೆ.
ಸುತ್ತೋಲೆಯಲ್ಲೇನಿದೆ?
ಹೈಕೋರ್ಟ್ನಲ್ಲಿ ಪ್ರಕರಣಗಳ ಕಡತಗಳ ಸ್ಕ್ಯಾನಿಂಗ್ ಮತ್ತು ಡಿಜಿಟಲೀಕರಣ ಪ್ರಕ್ರಿಯೆ ಆರಂಭಿಸಲಾಗಿದೆ. ಅದರ ಭಾಗವಾಗಿ 2026ರ ಜೂನ್ನಿಂದ ಹೊಸದಾಗಿ ದಾಖಲಾಗುವ ಪ್ರಕರಣಗಳ ವಿವರಗಳನ್ನು ಆರ್ಎಫ್ಐಡಿ ಟ್ಯಾಗ್ಗಳಿಗೆ ಜೋಡಿಸಿ, ಅರ್ಜಿ ಸಲ್ಲಿಕೆ ಕೌಂಟರ್ಗಳಲ್ಲಿಯೇ ಕಡತಗಳಿಗೆ ಅಳವಡಿಸಲಾಗುತ್ತಿದೆ. ಜೂನ್ಗೂ ಮೊದಲು ದಾಖಲಾದ ಪ್ರಕರಣಗಳು ವಿಚಾರಣೆಗೆ ಬಂದಾಗ ಅವುಗಳ ಕಡತಗಳಿಗೂ ಟ್ಯಾಗ್ ಅಳವಡಿಸಲಾಗುತ್ತಿದೆ. ವಿವಿಧ ಶಾಖೆಗಳ ನಡುವೆ ಕಡತಗಳ ಚಲನವಲನ ದಾಖಲಿಸಲು ಹೈಕೋರ್ಟ್ನ ಇಂಜಿನಿಯರ್ಗಳು ವೆಬ್ ಆಧಾರಿತ ತಂತ್ರಾಂಶ ಅಭಿವೃದ್ಧಿಪಡಿಸಿದ್ದಾರೆ. ಪ್ರಕರಣ ದಾಖಲಾದ ಹಂತದಿಂದ ಇತ್ಯರ್ಥವಾಗುವವರೆಗೆ ಕಡತ ಎಲ್ಲಿದೆ ಎಂಬುದನ್ನು ಪತ್ತೆಹಚ್ಚಲು ಇದು ನೆರವಾಗಲಿದೆ. ಪ್ರತಿ ಶಾಖೆ ಹಾಗೂ ಸಿಬ್ಬಂದಿ ಕಡತ ನಿರ್ವಹಣೆಗೆ ತೆಗೆದುಕೊಳ್ಳುವ ಸಮಯವನ್ನೂ ತಿಳಿಯಬಹುದಾಗಿದೆ ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.
ಅರ್ಜಿ ಸ್ವೀಕಾರ, ಪರಿಶೀಲನೆ, ಬಾಕಿ ಪ್ರಕರಣಗಳು, ಬೋರ್ಡ್, ಟಪಾಲು, ನಕಲು ವಿಭಾಗ ಸೇರಿ ಸಂಬಂಧಿತ ಶಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಈ ವ್ಯವಸ್ಥೆಯಲ್ಲಿ ನೋಂದಾಯಿಸಿ, ಅಗತ್ಯ ತರಬೇತಿ ನೀಡಲಾಗಿದೆ. ಕಂಪ್ಯೂಟರ್ಗಳು ಮತ್ತು ಆರ್ಎಫ್ಐಡಿ ರೀಡರ್ಗಳನ್ನೂ ಅಳವಡಿಸಲಾಗಿದೆ. ಪ್ರತಿ ಸಿಬ್ಬಂದಿ ತಮ್ಮದೇ ಲಾಗಿನ್ ಐಡಿ ಬಳಸಿ ಕಡತದ ಸ್ವೀಕೃತಿ ಮತ್ತು ರವಾನೆ ದಾಖಲಿಸಬೇಕು. ಯಾವುದೇ ಹಂತದಲ್ಲಿ ಸ್ಕ್ಯಾನ್ ತಪ್ಪಿದರೆ ತಕ್ಷಣ ಶಾಖಾಧಿಕಾರಿಗೆ ತಿಳಿಸಿ, ಅಗತ್ಯ ನಮೂದು ಮಾಡಿಸಬೇಕು. ಕಡತಕ್ಕೆ ಟ್ಯಾಗ್ ಇಲ್ಲದಿದ್ದರೂ ಅಥವಾ ಟ್ಯಾಗ್, ರೀಡರ್, ತಂತ್ರಾಂಶದಲ್ಲಿ ತೊಂದರೆ ಕಂಡುಬಂದರೂ ಕೂಡಲೇ ವರದಿ ಮಾಡಬೇಕು ಎಂದು ಸೂಚಿಸಲಾಗಿದೆ.
ಶಾಖಾಧಿಕಾರಿಗಳು ಕಡತಗಳ ಸ್ವೀಕೃತಿ ಮತ್ತು ರವಾನೆ ಸರಿಯಾಗಿ ದಾಖಲಾಗುತ್ತಿದೆಯೇ ಎಂಬುದನ್ನು ನಿಯಮಿತವಾಗಿ ಪರಿಶೀಲಿಸಬೇಕು. ಸ್ಕ್ಯಾನ್ ತಪ್ಪಿರುವುದು, ವಿಳಂಬ ಹಾಗೂ ಇತರ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಬೇಕು. ವ್ಯವಸ್ಥೆಯ ಬಳಕೆ, ತಪ್ಪಿದ ಸ್ಕ್ಯಾನ್ಗಳು, ಟ್ಯಾಗ್ ಇಲ್ಲದ ಕಡತಗಳು, ತಾಂತ್ರಿಕ ಸಮಸ್ಯೆಗಳು ಹಾಗೂ ಕೈಗೊಂಡ ಕ್ರಮಗಳ ಕುರಿತು ಪ್ರತಿ ವಾರ ರಿಜಿಸ್ಟ್ರಾರ್ (ನ್ಯಾಯಾಂಗ) ಅವರಿಗೆ ವರದಿ ಸಲ್ಲಿಸಬೇಕು. ಆ ವರದಿಗಳನ್ನು ಮೇಲ್ವಿಚಾರಣೆ ಮತ್ತು ಅಗತ್ಯ ಕ್ರಮಕ್ಕಾಗಿ ರಿಜಿಸ್ಟ್ರಾರ್ (ಕಂಪ್ಯೂಟರ್ಸ್) ಅವರಿಗೆ ಕಳುಹಿಸಬೇಕು. ಎಲ್ಲ ಶಾಖೆಗಳಲ್ಲಿ ಸೂಚನೆಗಳ ಪರಿಣಾಮಕಾರಿ ಅನುಷ್ಠಾನವನ್ನು ರಿಜಿಸ್ಟ್ರಾರ್ (ನ್ಯಾಯಾಂಗ) ಖಾತ್ರಿಪಡಿಸಬೇಕು ಎಂದು ಸುತ್ತೋಲೆಯಲ್ಲಿ ನಿರ್ದೇಶಿಸಲಾಗಿದೆ.
Related Articles
Thank you for your comment. It is awaiting moderation.


Comments (0)