ಮೂರ್ಕಂಗುಡ್ಡ ಅರಣ್ಯ ವಿವಾದ; ಶತಮಾನದ ಹಿಂದೆ ಕೈಬಿಟ್ಟ ಪ್ರಸ್ತಾವನೆ ಮುಂದಿಟ್ಟು ತೆರವು ಕ್ರಮ ಸಲ್ಲದು – ಹೈಕೋರ್ಟ್
- by Prashanth Basavapatna
- November 20, 2026
- 10 Views
ಬೆಂಗಳೂರು: ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮೂರ್ಕಂಗುಡ್ಡ ಪ್ರದೇಶವನ್ನು ಅರಣ್ಯವೆಂದು ಪರಿಗಣಿಸಿ ಕೈಗೊಳ್ಳಲಾಗಿದ್ದ ಕ್ರಮಗಳಿಗೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಿರುವ ಹೈಕೋರ್ಟ್, ಆರು ಅರ್ಜಿಗಳನ್ನು ಭಾಗಶಃ ಪುರಸ್ಕರಿಸಿದೆ.
ಸರ್ಕಾರ ನೀಡಿದ್ದ ಒತ್ತುವರಿ ನೋಟಿಸ್ ತೆರವು ಆದೇಶಗಳನ್ನು ಮೆಸರ್ಸ್ ಸೆಂಟಿನೆಲ್ ಅಡ್ವೆಂಚರ್ಸ್ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳ ಕುರಿತು ವಿಸ್ತೃತ ತೀರ್ಪು ಪ್ರಕಟಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯಪೀಠ, ಅರ್ಜಿದಾರರಿಗೆ ಸಂಬಂಧಿಸಿದಂತೆ ಅರಣ್ಯಾಧಿಕಾರಿಗಳು ನೀಡಿದ್ದ ಹಲವು ನೋಟಿಸ್ಗಳು ಹಾಗೂ ತೆರವು ಆದೇಶಗಳನ್ನು ರದ್ದುಪಡಿಸಿದೆ.
ಜತೆಗೆ, 1924ರಲ್ಲೇ ಕೈಬಿಡಲಾದ 1920ರ ಅರಣ್ಯ ಪ್ರಸ್ತಾವನೆಯನ್ನು ಆಧರಿಸಿ ಈಗ ಕ್ರಮ ಮುಂದುವರಿಸಲಾಗದು ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ರಾಜ್ಯದಾದ್ಯಂತ ಅರಣ್ಯ ಸ್ವರೂಪದ ಪ್ರದೇಶಗಳ ವೈಜ್ಞಾನಿಕವಾಗಿ ಗುರುತಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.
ಮೀಸಲು ಅರಣ್ಯ ಎಂದು ಘೋಷಿಸಲು ಕರ್ನಾಟಕ ಅರಣ್ಯ ಕಾಯ್ದೆ-1963ರಂತೆ ಪ್ರಕ್ರಿಯೆ ಅನುಸರಿಸುವುದು ಅಗತ್ಯ. ಅನಧಿಕೃತ ಸ್ವಾಧೀನ ಹೊಂದಿದವರ ವಾದ ಆಲಿಸಬೇಕು. ನಂತರವೇ ಅರಣ್ಯ ಇತ್ಯರ್ಥಾಧಿಕಾರಿ (ಫಾರೆಸ್ಟ್ ಸೆಟಲ್ಮೆಂಟ್ ಆಫೀಸರ್) ತೀರ್ಮಾನ ಕೈಗೊಳ್ಳಬೇಕೆಂದು ನ್ಯಾಯಾಲಯ ಆದೇಶಿಸಿದೆ.
ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ, ಹಿಂದೆ ಎರಡು ಪ್ರತ್ಯೇಕ ನಿರ್ಧಾರಗಳನ್ನು ಕೈಗೊಳ್ಳಲಾಗಿತ್ತು. ಮೊದಲನೆಯದು ಇಡೀ ಮೂರ್ಕಂಗುಡ್ಡ ಬ್ಲಾಕ್ನ ಅರಣ್ಯ ಪ್ರಸ್ತಾವ ಕೈಬಿಡುವ ನಿರ್ಧಾರ, ಎರಡನೆಯದು ಅದರ ಪರಿಣಾಮವಾಗಿ ಖಾಸಗಿ ಜಮೀನಿನ ಸ್ವಾಧೀನ ಪ್ರಕ್ರಿಯೆ ಹಿಂಪಡೆಯುವ ನಿರ್ಧಾರವಾಗಿತ್ತು. ಆದ್ದರಿಂದ, ಸ್ವಾಧೀನ ಹಿಂಪಡೆದ ಆದೇಶವನ್ನಷ್ಟೇ ಪರಿಗಣಿಸಿ ಅರಣ್ಯ ಪ್ರಸ್ತಾವನೆ ಜೀವಂತವಾಗಿದೆ ಎಂದು ವಾದಿಸಲಾಗದು ಎಂದು ಹೇಳಿದೆ.
ಸರ್ಕಾರ 2022ರ ಡಿಸೆಂಬರ್ 19ರಂದು ಅರಣ್ಯ ಇತ್ಯರ್ಥಾಧಿಕಾರಿಯನ್ನು ನೇಮಿಸಿತ್ತು. ನಂತರ 2023ರಲ್ಲಿ ಆದೇಶಗಳನ್ನು ಹೊರಡಿಸಿ, ಹಳೆಯ ಪ್ರಸ್ತಾವನೆಯ ಆಧಾರದಲ್ಲಿ ಹಕ್ಕುಗಳ ವಿಚಾರಣೆ ಮುಂದುವರಿಸಲಾಗಿತ್ತು. ಆದರೆ, ಅಧಿಕಾರಿಯ ನೇಮಕ ಮಾತ್ರದಿಂದ ಕಾನೂನಿನ ಪ್ರಕಾರ ಅಗತ್ಯವಿರುವ ಹೊಸ ಪ್ರಾಥಮಿಕ ಅಧಿಸೂಚನೆಯ ಅವಶ್ಯಕತೆ ನಿವಾರಣೆಯಾಗುವುದಿಲ್ಲ. ಕರ್ನಾಟಕ ಅರಣ್ಯ ಕಾಯ್ದೆಯ ಸೆಕ್ಷನ್ 4(1)ರ ಅಡಿಯಲ್ಲಿ ಹೊಸ ಅಧಿಸೂಚನೆ ಹೊರಡಿಸಿರುವುದನ್ನು ಈ ಪ್ರಕರಣಗಳಲ್ಲಿ ಸಾಬೀತುಪಡಿಸಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಹೊಸದಾಗಿ ಮೀಸಲು ಅರಣ್ಯ ರೂಪಿಸಲು ಸರ್ಕಾರ ಬಯಸಿದರೆ, ಕಾಯ್ದೆಯ ಅನ್ವಯ ಕ್ರಮ ಆರಂಭಿಸಬೇಕು. ಹಕ್ಕು ಪ್ರತಿಪಾದಿಸುವವರಿಗೆ ನೋಟಿಸ್ ನೀಡಿ ದಾಖಲೆ ಸಲ್ಲಿಕೆ ಮತ್ತು ವಿಚಾರಣೆಗೆ ಅವಕಾಶ ನೀಡಬೇಕು. ತಿಳಿದಿರುವ ಅಥವಾ ಭೂಮಿಯ ಹಕ್ಕುದಾರರು, ಅನುಭೋಗದಾರರು ಎಂದು ಪರಿಗಣಿಸಲ್ಪಡುವ ವ್ಯಕ್ತಿಗಳಿಗೆ ವೈಯಕ್ತಿಕ ನೋಟಿಸ್ ನೀಡುವುದೂ ಪ್ರಕ್ರಿಯೆಯ ಭಾಗವಾಗಿದೆ. ಹಕ್ಕುಗಳ ಪ್ರತಿಪಾದನೆಗೆ ಕನಿಷ್ಠ ಮೂರು ತಿಂಗಳ ಅವಕಾಶ ನೀಡಿದ ನಂತರದ ಕಾನೂನು ಕ್ರಮಗಳನ್ನು ಅನುಸರಿಸಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ವಿವರಿಸಿದೆ.
ಕರ್ನಾಟಕ ಅರಣ್ಯ ಕಾಯ್ದೆಯ ಸೆಕ್ಷನ್ 64ಎ ಅಡಿಯಲ್ಲಿ ತೆರವು ಕ್ರಮ ಕೈಗೊಳ್ಳಲು, ಸಂಬಂಧಿತ ಜಮೀನು ಆ ಸೆಕ್ಷನ್ನಲ್ಲಿ ಉಲ್ಲೇಖಿಸಿರುವ ಅರಣ್ಯ ವರ್ಗಗಳಿಗೆ ಸೇರುತ್ತದೆಯೇ ಅಥವಾ ಅರಣ್ಯ ಇಲಾಖೆಯ ನಿಯಂತ್ರಣದಲ್ಲಿರುವ ಇತರ ಜಮೀನಾಗಿದೆಯೇ ಎಂಬುದನ್ನು ಮೊದಲು ಸಾಬೀತುಪಡಿಸಬೇಕು. ಅನಧಿಕೃತವಾಗಿ ಭೂಮಿಯ ಸ್ವಾಧೀನ ಹೊಂದಿದ್ದಾರೆಂಬ ಆರೋಪ ಒಂದರಿಂದಲೇ, ಅದು ಅರಣ್ಯ ಇಲಾಖೆಯ ನಿಯಂತ್ರಣದಲ್ಲಿರುವ ಜಮೀನು ಎಂಬ ನಿರ್ಣಯಕ್ಕೆ ಬರಲಾಗದು. ಜಮೀನಿನ ಗುರುತು, ಸರ್ವೆ ಸಂಖ್ಯೆ, ಗಡಿ ಮತ್ತು ಕಾನೂನು ಸ್ಥಿತಿಯನ್ನು ಪ್ರತ್ಯೇಕವಾಗಿ ಪರಿಶೀಲಿಸಬೇಕು ಎಂದು ಹೇಳಿದೆ.
ಏನಿದು ಶತಮಾನಗಳ ವಿವಾದ?
ಸಕಲೇಶಪುರ ತಾಲೂಕಿನ ಹಾನುಬಾಳು ಹೋಬಳಿಯ ಮೂರ್ಕಂಗುಡ್ಡ ಬ್ಲಾಕ್ಗೆ ಸೇರಿದ ಸುಮಾರು 7,938 ಎಕರೆ 38 ಗುಂಟೆ ಪ್ರದೇಶವನ್ನು ರಾಜ್ಯ ಅರಣ್ಯವನ್ನಾಗಿ ರೂಪಿಸುವ ಪ್ರಸ್ತಾವನೆ ಈ ವಿವಾದದ ಮೂಲವಾಗಿದೆ. ಆಚನಹಳ್ಳಿ, ಅಗಣಿ, ಕ್ಯಾಮನಹಳ್ಳಿ, ನಾಡಹಳ್ಳಿ, ಕಾಡುಮನೆ, ಜಂಬರಡಿ ಹಾಗೂ ಸಂಬಂಧಿತ ಎಸ್ಟೇಟ್ ಪ್ರದೇಶಗಳು ಈ ಪ್ರಸ್ತಾವನೆಯ ವ್ಯಾಪ್ತಿಯಲ್ಲಿದ್ದವು.
ಮೈಸೂರು ಅರಣ್ಯ ನಿಯಮಾವಳಿ-1900ರ ಸೆಕ್ಷನ್ 4ರ ಅಡಿಯಲ್ಲಿ 1920ರ ಫೆಬ್ರವರಿ 5ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಪ್ರತ್ಯೇಕ ಅಧಿಸೂಚನೆಯ ಮೂಲಕ 68 ಎಕರೆ 33 ಗುಂಟೆ ಖಾಸಗಿ ಜಮೀನಿನ ಸ್ವಾಧೀನಕ್ಕೂ ಪ್ರಸ್ತಾಪಿಸಲಾಗಿತ್ತು. ಆದರೆ, ಗ್ರಾಮಸ್ಥರ ಆಕ್ಷೇಪಣೆಗಳ ಹಿನ್ನೆಲೆಯಲ್ಲಿ ನಡೆದ ಪರಿಶೀಲನೆಯ ನಂತರ 1924ರ ಜನವರಿ 11ರಂದು ಸರ್ಕಾರ ಅರಣ್ಯ ಘೋಷಣೆಯ ಪ್ರಸ್ತಾವನ್ನೇ ಕೈಬಿಟ್ಟಿತ್ತು. ನಂತರ ಒತ್ತುವರಿ ಮಾಡಲಾಗಿದೆ ಎಂದು ಅರಣ್ಯಾಧಿಕಾರಿಗಳು ನೀಡಿದ್ದ ನೋಟಿಸ್ಗಳನ್ನು ಅರ್ಜಿದಾರರು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು.
Related Articles
Thank you for your comment. It is awaiting moderation.


Comments (0)