‘ಬಸವಣ್ಣನವರ ಗೌರವಕ್ಕೆ ಧಕ್ಕೆಯಾದರೆ ಸರ್ಕಾರ ಸುಮ್ಮನಿರಲ್ಲ’: ಮುಖ್ಯಮಂತ್ರಿ ಎಚ್ಚರಿಕೆ
- by Legal Samachar
- November 20, 2026
- 11 Views
ಬೆಂಗಳೂರು: ಕರ್ನಾಟಕದ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವಣ್ಣನವರ ಗೌರವಕ್ಕೆ ಧಕ್ಕೆ ತರುವ ಯಾವುದೇ ಪ್ರಯತ್ನವನ್ನು ಸರ್ಕಾರ ಸಹಿಸುವುದಿಲ್ಲ. ಬಸವಣ್ಣನವರ ಬಗ್ಗೆ ಅವಹೇಳನಕಾರಿ ಬರಹ ಪ್ರಕಟಿಸಿರುವ ಆರೋಪದ ಹಿನ್ನೆಲೆಯಲ್ಲಿ ಲೇಖಕ ರವಿ ಹಂಜ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಇಂತಹ ಕೃತ್ಯಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ಎ ಚ್ಚರಿಕೆ ನೀಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಬಸವಣ್ಣನವರು ಕನ್ನಡಿಗರ ಅಸ್ಮಿತೆ. 12ನೇ ಶತಮಾನದಲ್ಲಿಯೇ ಕರ್ನಾಟಕದ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಇತಿಹಾಸಕ್ಕೆ ಹೊಸ ದಿಕ್ಕು ನೀಡಿದ ಮಹಾನ್ ಚೇತನ. ‘ಅನುಭವ ಮಂಟಪ’ದ ಮೂಲಕ ಜಗತ್ತಿಗೆ ಸಂಸತ್ತಿನ ಪರಿಕಲ್ಪನೆಯನ್ನು ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದ್ದಾರೆ.
ಸಮಾನತೆ, ಕಾಯಕ, ದಾಸೋಹ, ಮಾನವೀಯತೆ, ಸಾಮಾಜಿಕ ನ್ಯಾಯ ಹಾಗೂ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಪ್ರತಿಪಾದಿಸಿದ ಬಸವಣ್ಣನವರು ಮಹಾನ್ ಮಾನವತಾವಾದಿ. ಅವರ ಕಾಯಕ ತತ್ವಗಳ ಆಧಾರದಲ್ಲಿಯೇ ಸರ್ಕಾರ ಜನಪರವಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಆಶಯಗಳನ್ನು ಗೌರವಿಸುತ್ತಾ ಬಂದಿದೆ ಎಂದು ತಿಳಿಸಿದ್ದಾರೆ.

ಆದರೆ, ಲೇಖಕ ರವಿ ಹಂಜ್ ಅವರು ‘ಬಸವ ಮಂಟಪ’ ಎಂಬ ವಿವಾದಿತ ಪುಸ್ತಕದಲ್ಲಿ ಬಸವಣ್ಣನವರ ಕುರಿತು ಅವಹೇಳನಕಾರಿ ಬರಹಗಳನ್ನು ಬರೆದಿರುವುದು ಖಂಡನೀಯ. ಇಡೀ ಮಾನವಕುಲಕ್ಕೆ ದಾರಿದೀಪವಾಗಿರುವ ಸಮಾಜ ಸುಧಾರಕನಿಗೆ ಮಾಡಿರುವ ಅವಮಾನವನ್ನು ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
ಈ ವಿಚಾರವನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಲೇಖಕ ರವಿ ಹಂಜ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ನಾಡಿನ ಮಹನೀಯರ ಬಗ್ಗೆ ಹಗುರವಾಗಿ ಬರೆಯುವ ಹಾಗೂ ಸಮಾಜದ ಶಾಂತಿ ಕದಡುವ ಪ್ರಯತ್ನ ಮಾಡುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
“ನಮ್ಮ ಬಸವಣ್ಣನವರ ಗೌರವಕ್ಕೆ ಧಕ್ಕೆಯಾದರೆ ಸರ್ಕಾರ ಸುಮ್ಮನಿರಲ್ಲ”
ಕರ್ನಾಟಕದ ಸಾಂಸ್ಕೃತಿಕ ನಾಯಕ, ಕ್ರಾಂತಿಕಾರಿ ಮಾರ್ಗದ ಹರಿಕಾರ ಜಗಜ್ಯೋತಿ ಬಸವಣ್ಣನವರು ನಮ್ಮೆಲ್ಲರ ಅಸ್ಮಿತೆ. 12ನೇ ಶತಮಾನದಲ್ಲಿಯೇ ಕರ್ನಾಟಕದ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಇತಿಹಾಸಕ್ಕೆ ಹೊಸ ದಿಕ್ಕು ನೀಡಿದ ಮಹಾನ್ ಚೇತನರು.
ಜಗತ್ತಿಗೆ ಮೊಟ್ಟಮೊದಲ ಬಾರಿಗೆ ‘ಅನುಭವ ಮಂಟಪ’ದ ಮೂಲಕ ಸಂಸತ್ತು ಪರಿಕಲ್ಪನೆಯನ್ನು ನೀಡಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ಸಮಾನತೆ, ಕಾಯಕ, ದಾಸೋಹ, ಮಾನವೀಯತೆ, ಸಾಮಾಜಿಕ ನ್ಯಾಯ ಹಾಗೂ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಪ್ರತಿಪಾದಿಸಿದ ಮಹಾನ್ ಮಾನವತಾವಾದಿ ನಮ್ಮ ಬಸವಣ್ಣನವರು.
ನಮ್ಮ ಸರ್ಕಾರವು ಬಸವಣ್ಣನವರ ಇದೇ ಕಾಯಕ ತತ್ವಗಳ ಅಡಿಯಲ್ಲಿ ಜನಪರವಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಆಶಯಗಳನ್ನು ಸದಾ ಗೌರವಿಸುತ್ತಾ ಪಾಲಿಸುತ್ತಾ ಬಂದಿದೆ.
ಆದರೆ, ಇದೀಗ ರವಿ ಹಂಜ್ ಎನ್ನುವ ಲೇಖಕ ʻಬಸವ ಮಂಟಪ’ ಎಂಬ ವಿವಾದಿತ ಪುಸ್ತಕವನ್ನು ಬರೆದು, ಬಸವಣ್ಣನವರ ಬಗ್ಗೆ ಅತ್ಯಂತ ಅವಹೇಳನಕಾರಿಯಾಗಿ ನಿಂದಿಸಿರುವುದು ಖಂಡನೀಯ. ಇಡೀ ಮಾನವ ಕುಲಕ್ಕೆ ದಾರಿದೀಪವಾದಂತಹ ಮಹಾನ್ ಸಮಾಜ ಸುಧಾರಕನಿಗೆ ಮಾಡಿರುವ ಈ ಅವಮಾನವನ್ನು ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ.
ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ನಾಡಿನ ಸಾಂಸ್ಕೃತಿಕ ನಾಯಕನಿಗೆ ಅಪಮಾನ ಎಸಗಿದ ಲೇಖಕ ರವಿ ಹಂಜ್ ವಿರುದ್ಧ ಎಫ್ಐಆರ್ ದಾಖಲಿಸಿದ್ದೇವೆ. ನಾಡಿನ ಮಹನೀಯರ ಬಗ್ಗೆ ಹಗುರವಾಗಿ ಬರೆಯುವ ಮತ್ತು ಸಮಾಜದ ಶಾಂತಿ ಕದಡುವ ಇಂತಹ ಕಿಡಿಗೇಡಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ, ಸರ್ಕಾರ ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದೆ.
ಬಸವಣ್ಣನವರ ತತ್ವಗಳಿಗೆ ಹಾಗೂ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವ ಯಾವುದೇ ಪ್ರಯತ್ನಗಳನ್ನು ನಮ್ಮ ಸರ್ಕಾರ ನಿರ್ದಾಕ್ಷಿಣ್ಯವಾಗಿ ಮಟ್ಟಹಾಕಲಿದೆ.
— DK Shivakumar (@DKShivakumar) November 20, 2026
ಬಸವಣ್ಣನವರ ತತ್ವಗಳಿಗೆ ಮತ್ತು ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವ ಯಾವುದೇ ಪ್ರಯತ್ನಗಳನ್ನು ಸರ್ಕಾರ ನಿರ್ದಾಕ್ಷಿಣ್ಯವಾಗಿ ತಡೆಯಲಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.


Comments (0)