ಸಭೆಯಲ್ಲಿ ಭಾಗವಹಿಸದಂತೆ ಬೆಂವಿವಿ ಸಿಂಡಿಕೇಟ್ ಸದಸ್ಯರಿಗೆ ಹೈಕೋರ್ಟ್ ಸೂಚನೆ; ನಾಮನಿರ್ದೇಶನ ಪ್ರಶ್ನಿಸಿರುವ ಅರ್ಜಿ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯಗಳಿಗೆ ನಾಮನಿರ್ದೇಶನಗೊಂಡಿರುವ 9 ಸಿಂಡಿಕೇಟ್‌ ಸದಸ್ಯರು ಆ ಸ್ಥಾನದಲ್ಲಿ ಕಾರ್ಯನಿರ್ವಹಣೆ ಮಾಡದಂತೆ ಹಾಗೂ ಸಿಂಡಿಕೇಟ್ ಸಭೆಯಲ್ಲಿ ಭಾಗವಹಿಸದಂತೆ ಹೈಕೋರ್ಟ್‌ ಮತ್ತೊಮ್ಮೆ ಮೌಖಿಕ ಸೂಚನೆ ನೀಡಿದೆ.

ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ನಗರ ವಿಶ್ವವಿದ್ಯಾಲಯ ಮತ್ತು ಬೆಂಗಳೂರು ಉತ್ತರ ವಿಶ್ವವಿದ್ಯಾಲಯಗಳಿಗೆ 9 ಸಿಂಡಿಕೇಟ್‌ ಸದಸ್ಯರ ನಾಮನಿರ್ದೇಶನ ಮಾಡಿ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಆಗಸ್ಟ್ 27ರಂದು ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಶಿಕ್ಷಣ ತಜ್ಞರಾದ ಡಾ.ಪಿ.ಬಿ. ಜಯಕೃಷ್ಣ, ಕೆ.ರಾಮಮೂರ್ತಿ, ಆರ್‌ಎಸ್‌ಎನ್‌ ಪ್ರಸಾದ್‌ ಮತ್ತು ಡಾ.ಎಂ. ಚಿಕ್ಕಮುನಿಯಪ್ಪ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್‌ ಚಂದನಗೌಡರ್‌ ಅವರಿದ್ದ ಪೀಠ, ನಾಮನಿರ್ದೇಶಿತ ಸಿಂಡಿಕೇಟ್‌ ಸದಸ್ಯರು ತಮ್ಮ ಸ್ಥಾನದಲ್ಲಿ ಕಾರ್ಯನಿರ್ವಹಣೆ ಮಾಡದಂತೆ ಹಿಂದಿನ ವಿಚಾರಣೆ ವೇಳೆ ಸೂಚಿಸಲಾಗಿತ್ತು. ಆದರೆ, ಇತ್ತೀಚೆಗೆ ನಡೆದ ಬೆಂಗಳೂರು ಉತ್ತರ ವಿವಿಯ ಘಟಿಕೋತ್ಸವದಲ್ಲಿ ನಾಮನಿರ್ದೇಶಿತ ಸಿಂಡಿಕೇಟ್‌ ಸದಸ್ಯರು ಭಾಗವಹಿಸಿದ್ದಾರೆ ಎಂದು ಅರ್ಜಿದಾರರ ಪರ ವಕೀಲರಾದ ಬಿ.ಎಸ್. ನಂದಿನಿ ತಿಳಿಸುತ್ತಿದ್ದಾರೆ. ನ್ಯಾಯಾಲಯದ ಸೂಚನೆಯಿದ್ದರೂ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲವೆಂದು ನುಡಿಯಿತು. ಬಳಿಕ, ಸಿಂಡಿಕೇಟ್‌ ಸದಸ್ಯರಿಗೆ ಆ ಸ್ಥಾನದಲ್ಲಿ ಕಾರ್ಯ ನಿರ್ವಹಿಸದಂತೆ ಸೂಚನೆ ನೀಡುವಂತೆ ಸರ್ಕಾರದ ಪರ ವಕೀಲರಿಗೆ ನ್ಯಾಯಪೀಠ ಮೌಖಿಕವಾಗಿ ಸೂಚಿಸಿತು.

ಇದನ್ನೂ ಓದಿರಿ: ಬೆಂವಿವಿ ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯರ ಕಾರ್ಯನಿರ್ವಹಣೆ ಬೇಡ; ಹೈಕೋರ್ಟ್ ಮೌಖಿಕ ಸೂಚನೆ

ವಿಚಾರಣೆಗೆ ಹಾಜರಿದ್ದ ಸರ್ಕಾರದ ಪರ ವಕೀಲರು, ಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದರಲ್ಲದೇ, ಪ್ರತಿವಾದಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಪರಿಣಿತರಾಗಿದ್ದು, ಅವರ ನಾಮನಿರ್ದೇಶನ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಸಿಂಡಿಕೇಟ್‌ ಸದಸ್ಯರ ಪರ ವಕೀಲರು ಹಾಜರಾಗಿ, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದರು.

ಅದನ್ನು ಪರಿಗಣಿಸಿದ ನ್ಯಾಯಪೀಠ, ಸರ್ಕಾರ ಹಾಗೂ ನಾಮನಿರ್ದೇಶಿತ ಸಿಂಡಿಕೆಟ್‌ ಸದಸ್ಯರು ಸೇರಿದಂತೆ ಅರ್ಜಿಯಲ್ಲಿನ ಎಲ್ಲ ಪ್ರತಿವಾದಿಗಳು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಬೇಕು ಎಂದು ಸೂಚಿಸಿ, ಅರ್ಜಿ ವಿಚಾರಣೆ ಮುಂದೂಡಿತು.

ಪ್ರಕರಣವೇನು?
ಡಾ.ಜಯಶ್ರೀ ಹೆಗ್ಡೆ, ಎಂ.ಎ. ಮಹದೇವ ನಾಯ್ಕ, ರಮೇಶ್‌ ಬಾಬು, ಆಯೇಷಾ ಫರ್ಜಾನಾ, ವಿ.ಶಿವಕುಮಾರ್‌, ಎಸ್‌.ಆರ್‌. ಸಹನಾ, ಜೈದೀಪ್‌, ಅರ್ಬಾಜ್‌ ಪಾಷಾ ಮತ್ತು ಎಂ.ಗೋಪಾಲ ಗೌಡ ಅವರನ್ನು ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ನಗರ ವಿಶ್ವವಿದ್ಯಾಲಯ ಮತ್ತು ಬೆಂಗಳೂರು ಉತ್ತರ ವಿಶ್ವವಿದ್ಯಾಲಯಗಳ ಸಿಂಡಿಕೇಟ್‌ ಸದಸ್ಯರ ಸ್ಥಾನಕ್ಕೆ ನಾಮ ನಿರ್ದೇಶನ ಮಾಡಿ ರಾಜ್ಯ ಉನ್ನತ ಶಿಕ್ಷಣ (ವಿಶ್ವವಿದ್ಯಾಲಯಗಳು-2) ಇಲಾಖೆಯ ಅಧೀನ ಕಾರ್ಯದರ್ಶಿ 2024ರ ಆಗಸ್ಟ್ 27ರಂದು ಅಧಿಸೂಚನೆ ಹೊರಡಿಸಿದ್ದರು.

ಈ ಅಧಿಸೂಚನೆಯನ್ನು ಪ್ರಶ್ನಿಸಿರುವ ಅರ್ಜಿದಾರರು, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆಯಲ್ಲಿ ಹೇಳಿರುವಂತೆ ನಾಮನಿರ್ದೇಶನಗೊಂಡಿರುವವರು ಶಿಕ್ಷಣ ತಜ್ಞರಲ್ಲ. ಅವರು ಸಿಂಡಿಕೇಟ್‌ ಸದಸ್ಯರಾಗಲು ನಿಗದಿತ ಅರ್ಹತೆ ಹೊಂದಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಅನುಭವ ಮತ್ತು ಪರಿಣಿತಿ ಹೊಂದಿಲ್ಲ. ವಿಶ್ವವಿದ್ಯಾಲಯಗಳಿಗೆ ಯಾವುದೇ ರೀತಿಯ ಕೊಡುಗೆ ನೀಡಿಲ್ಲ. ಅವರನ್ನು ನಾಮನಿರ್ದೇಶನ ಮಾಡಿರುವುದು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆಯ ಸೆಕ್ಷನ್ 28(1)(ಜಿ) ಸ್ಪಷ್ಟ ಉಲ್ಲಂಘನೆಯಾಗಿದೆ. ಆದ್ದರಿಂದ, ಸರ್ಕಾರದ ಅಧಿಸೂಚನೆ ರದ್ದುಪಡಿಸಬೇಕು ಎಂದು ಕೋರಿದ್ದಾರೆ. ಜತೆಗೆ, ಅರ್ಜಿ ಇತ್ಯರ್ಥವಾಗುವರೆಗೆ ಅಧಿಸೂಚನೆಗೆ ತಡೆಯಾಜ್ಞೆ ನೀಡಬೇಕು ಎಂದು ಮಧ್ಯಂತರ ಮನವಿ ಮಾಡಿದ್ದಾರೆ.

ಹಿಂದೆಯೇ ಕಾರ್ಯನಿರ್ವಹಣೆ ಬೇಡವೆಂದಿದ್ದ ಕೋರ್ಟ್:
ಅರ್ಜಿಯನ್ನು ಆಗಸ್ಟ್ 31ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್, ಸರ್ಕಾರದ ಅಧಿಸೂಚನೆ ಪರಿಶೀಲಿಸಿದಾಗ ಪ್ರತಿವಾದಿ ಬೆಂಗಳೂರು ವಿಶ್ವವಿದ್ಯಾಲಯಗಳ ಶೈಕ್ಷಣಿಕ ಹಾಗೂ ಪಠ್ಯಕ್ರಮದ ವಿಷಯಗಳಿಗೆ ಸಂಬಂಧಪಡದ ವಿದ್ಯಾರ್ಹತೆ ಹೊಂದಿರುವ ವ್ಯಕ್ತಿಗಳನ್ನು ಸಿಂಡಿಕೇಟ್ ಸದಸ್ಯರಾಗಿ ನಾಮನಿರ್ದೇಶನ ಮಾಡಲಾಗಿದೆ ಎಂಬುದು ಕಂಡುಬರುತ್ತಿದೆ. ಆದ್ದರಿಂದ, ನಾಮ ನಿರ್ದೇಶನಗೊಂಡಿರುವ ಸಿಂಡಿಕೇಟ್ ಸದಸ್ಯರು ತಮ್ಮ ಸ್ಥಾನದಲ್ಲಿ ಕಾರ್ಯನಿರ್ವಹಿಸಬಾರದು ಎಂದು ಮೌಖಿಕ ನಿರ್ದೇಶನ ನೀಡಿ ವಿಚಾರಣೆಯನ್ನು ಸೆಪ್ಟಂಬರ್ 4ಕ್ಕೆ ಮುಂದೂಡಿತ್ತು.

Related Articles

Comments (0)

Leave a Comment