ಜಪಾನ್ ನೌಕಾನೆಲೆಗೆ ರಾಜನಾಥ್ ಸಿಂಗ್ ಭೇಟಿ: ಕಡಲ ಸಹಕಾರ ಪರಿಶೀಲನೆ

ಯೊಕೊಸುಕಾ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನವೆಂಬರ್ 18, 2026ರಂದು ಜಪಾನ್ ರಕ್ಷಣಾ ಸಚಿವ ಶಿಂಜಿರೊ ಕೊಯಿಜುಮಿ ಅವರೊಂದಿಗೆ ಯೊಕೊಸುಕಾದಲ್ಲಿರುವ ಜಪಾನ್ ಕಡಲ ಸ್ವ-ರಕ್ಷಣಾ ಪಡೆ (ಜೆಎಂಎಸ್‌ಡಿಎಫ್) ನೌಕಾನೆಲೆಗೆ ಭೇಟಿ ನೀಡಿದರು. ಈ ವೇಳೆ ಉಭಯ ದೇಶಗಳ ನಡುವಿನ ಬೆಳೆಯುತ್ತಿರುವ ಕಡಲ ಪಾಲುದಾರಿಕೆಯನ್ನು ಒತ್ತಿಹೇಳಿದರು.

ವಿಸ್ತರಿಸುತ್ತಿರುವ ಕಡಲ ಸಹಕಾರವು ಮುಕ್ತ ಮತ್ತು ನಿಯಮಾಧಾರಿತ ಇಂಡೋ-ಪೆಸಿಫಿಕ್ ಪ್ರದೇಶದ ಕುರಿತು ಭಾರತ ಮತ್ತು ಜಪಾನ್ ಹೊಂದಿರುವ ಆಳವಾದ ನಂಬಿಕೆ ಹಾಗೂ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಸಿಂಗ್ ಹೇಳಿದರು.

ಇದಕ್ಕೂ ಮೊದಲು ಜಪಾನ್ ರಕ್ಷಣಾ ಸಚಿವಾಲಯದಲ್ಲಿ ಕೊಯಿಜುಮಿ ಅವರು ಸಿಂಗ್ ಅವರನ್ನು ಸ್ವಾಗತಿಸಿದರು. ಈ ವೇಳೆ ಅವರಿಗೆ ಗೌರವ ವಂದನೆ ಸಲ್ಲಿಸಲಾಯಿತು. ಬಳಿಕ ಇಬ್ಬರೂ ಜಪಾನ್ ಸ್ವ-ರಕ್ಷಣಾ ಪಡೆಗಳ ಹೆಲಿಕಾಪ್ಟರ್‌ನಲ್ಲಿ ನೌಕಾನೆಲೆಗೆ ತೆರಳಿದರು.

ಅಲ್ಲಿ ಮೊಗಾಮಿ ವರ್ಗದ ಬಹುಕಾರ್ಯಕಾರಿ ಯುದ್ಧನೌಕೆ ಜೆಎಸ್ ನಟೋರಿಗೆ ಭೇಟಿ ನೀಡಿ ಪರಿಶೀಲಿಸಿದರು.

ಭಾರತದ ಆರ್ಥಿಕ ಮತ್ತು ರಕ್ಷಣಾ ಕ್ಷೇತ್ರಗಳ ಬೆಳವಣಿಗೆಯನ್ನು ಪ್ರಸ್ತಾಪಿಸಿದ ಸಿಂಗ್, ಜಾಗತಿಕ ಸವಾಲುಗಳ ನಡುವೆಯೂ ಭಾರತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ದೇಶದ ರಕ್ಷಣಾ ವಲಯವೂ ಅಭೂತಪೂರ್ವ ಬೆಳವಣಿಗೆ ಕಾಣುತ್ತಿದೆ ಎಂದು ಹೇಳಿದರು.

Related Articles

Comments (0)