ಶಾಸಕ ಯತ್ನಾಳ್ ಒಡೆತನದ ಸಿದ್ಧಸಿರಿ ಸಕ್ಕರೆ ಕಾರ್ಖಾನೆ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು: ತ್ಯಾಜ್ಯವನ್ನು ಸಂಸ್ಕರಿಸದೆ ನೇರವಾಗಿ ಮುಲ್ಲಾಮಾರಿ ನದಿಗೆ ಹರಿಸಲಾಗುತ್ತಿದೆ ಎಂಬ ಆರೋಪದಡಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ಸಿದ್ಧಸಿರಿ ಸಹಕಾರಿ ಸೌಹಾರ್ದ ನಿಯಮಿತ ಸಕ್ಕರೆ ಕಾರ್ಖಾನೆ ವಿರುದ್ಧ ದಾಖಲಾಗಿದ್ದ ಖಾಸಗಿ ದೂರನ್ನು ಹೈಕೋರ್ಟ್ ರದ್ದುಪಡಿಸಿದೆ.

ಖಾಸಗಿ ದೂರಿಗೆ ಸಂಬಂಧಿಸಿದಂತೆ ಕಲಬುರಗಿ ಜಿಲ್ಲೆಯ ಚಿಂಚೋಳಿ ಜೆಎಂಎಫ್‌ಸಿಯಲ್ಲಿನ ವಿಚಾರಣಾ ಪ್ರಕ್ರಿಯೆ ರದ್ದು ಕೋರಿ ಕಾರ್ಖಾನೆಯ ಅಧ್ಯಕ್ಷ ಬಸನಗೌಡ ಪಾಟೀಲ್ ಯತ್ನಾಳ್, ನಿರ್ದೇಶಕ ರಾಮನಗೌಡ ಯತ್ನಾಳ್ ಹಾಗೂ ವ್ಯವಸ್ಥಾಪಕ ಶಿವಕುಮಾರ್ ಪಾಟೀಲ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಮಂಗಳವಾರ ಪ್ರಕಟಿಸಿತು.

ಅರ್ಜಿಯನ್ನು ಮಾನ್ಯ ಮಾಡಿರುವ ಹೈಕೋರ್ಟ್ ಸಿದ್ಧಸಿರಿ ಸಕ್ಕರೆ ಕಾರ್ಖಾನೆ, ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಇತರರ ವಿರುದ್ಧ ಚಿಂಚೋಳಿ ಜೆಎಂಎಫ್‌ಸಿಯಲ್ಲಿ ನಡೆಯುತ್ತಿದ್ದ ಎಲ್ಲ ನ್ಯಾಯಿಕ ಪ್ರಕ್ರಿಯೆಗಳನ್ನು ರದ್ದುಪಡಿಸಿದೆ. ನ್ಯಾಯಾಲಯದ ವಿಸ್ತೃತ ತೀರ್ಪಿನ ಪ್ರತಿ ಲಭ್ಯವಾಗಬೇಕಿದೆ. ಅರ್ಜಿದಾರರ ಪರ ವಕೀಲ ವೆಂಕಟೇಶ್ ಪಿ. ದಳವಾಯಿ ವಾದ ಮಂಡಿಸಿದ್ದರು.

ಪ್ರಕರಣವೇನು?
ಕಲಬುರಗಿ ಜಿಲ್ಲೆೆಯ ಚಿಂಚೋಳಿಯಲ್ಲಿ ಕಾರ್ಯಾಚರಿಸುತ್ತಿರುವ ಯತ್ನಾಳ್ ಒಡೆತನದ ಸಿದ್ಧಸಿರಿ ಸಕ್ಕರೆ ಕಾರ್ಖಾನೆಯ ತ್ಯಾಜ್ಯವನ್ನು ಮುಲ್ಲಾಮಾರಿ ನದಿಗೆ ಹರಿಸಲಾಗುತ್ತಿದೆ. ಜತೆಗೆ, ಪರಿಸರ ಹಾಗೂ ಮಾಲಿನ್ಯ ನಿಯಮಗಳನ್ನು ಪಾಲಿಸದೆ ಎಥೆನಾಲ್ ಘಟಕ ಆರಂಭಿಸಲಾಗಿದೆ. ತ್ಯಾಜ್ಯವನ್ನು ಅವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲಾಗುತ್ತಿದ್ದು, ಇದು ಜಲಮಾಲಿನ್ಯಕ್ಕೆೆ ಕಾರಣವಾಗಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್‌ಪಿಸಿಬಿ) ಕಲಬುರಗಿ ವಲಯದ ಉಪ ಪರಿಸರ ಅಧಿಕಾರಿ ಡಾ. ಆದಮ್ ಸಾಬ್ ಎಂ. ಪಟೇಲ್ ‘ಜಲ (ಮಾಲಿನ್ಯ ತಡೆ) ಕಾಯ್ದೆ-1974ರ ಸೆಕ್ಷನ್ 49 ಹಾಗೂ ಸಿಆರ್‌ಪಿಸಿ ಸೆಕ್ಷನ್ 200 ಅಡಿ ಖಾಸಗಿ ದೂರು ದಾಖಲಿಸಿದ್ದರು. ಇದನ್ನು ಸಂಜ್ಞೇಯ ಅಪರಾಧವನ್ನಾಗಿ ಪರಿಗಣಿಸಿದ್ದ ಚಿಂಚೋಳಿ ಜೆಎಂಎಫ್‌ಸಿ, ಪ್ರಕರಣವನ್ನು ವಿಚಾರಣೆಗೆತ್ತಿಕೊಂಡಿತ್ತು. ಇದರಿಂದ, ಅರ್ಜಿದಾರರು ಪ್ರಕರಣ ರದ್ದುಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.

Related Articles

Comments (0)

Leave a Comment