ಚಿನ್ನ ಕಳ್ಳ ಸಾಗಣೆ ಪ್ರಕರಣ: ರನ್ಯಾ ರಾವ್, ರಾಮಚಂದ್ರ ರಾವ್ ಮಾನಹಾನಿ ಸುದ್ದಿ ನಿರ್ಬಂಧಿಸಿದ ಕೋರ್ಟ್

ಬೆಂಗಳೂರು: ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧಿತಳಾಗಿರುವ ನಟಿ ಹರ್ಷವರ್ಧಿನಿ ರನ್ಯಾ ರಾವ್‌ ವಿರುದ್ಧ ಯಾವುದೇ ಮಾನಹಾನಿ ಸುದ್ದಿ ಪ್ರಕಟಿಸದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಆದೇಶಿಸಿದೆ. ಮತ್ತೊಂದೆಡೆ, ರನ್ಯಾ ರಾವ್ ಮಲ ತಂದೆ ಐಪಿಎಸ್‌ ಅಧಿಕಾರಿ ರಾಮಚಂದ್ರರಾವ್‌ ವಿರುದ್ದ ಮಾಧ್ಯಮಗಳು ಯಾವುದೇ ರೀತಿಯ ಮಾನಹಾನಿ ಸುದ್ದಿ ಪ್ರಕಟಿಸದಂತೆ ಹೈಕೋರ್ಟ್ ಪ್ರತಿಬಂಧಕಾಜ್ಞೆ ಹೊರಡಿಸಿದೆ.

ರನ್ಯಾ ರಾವ್‌ ತಾಯಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 41ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್ ಕೋರ್ಟ್ ನ್ಯಾಯಾಧೀಶೆ ಎನ್‌. ವೀಣಾ ಅವರು, ರನ್ಯಾ ವಿರುದ್ಧ ಯಾವುದೇ ರೀತಿಯ ಮಾನಹಾನಿಕರ ಸುದ್ದಿ ಪ್ರಸಾರ ಅಥವಾ ಪ್ರಕಟ ಮಾಡಬಾರದು ಎಂದು ಮಾಧ್ಯಮ ಸಂಸ್ಥೆಗಳಿಗೆ ನಿರ್ಬಂಧ ವಿಧಿಸಿ ಆದೇಶಿಸಿದರು.

ಕಂದಾಯ ಗುಪ್ತಚರ ನಿರ್ದೇಶನಾಲಯ ಆಧರಿಸಿದ ಮಾಧ್ಯಮ ವರದಿಗಳನ್ನು ಪರಿಶೀಲಿಸಿದ ನ್ಯಾಯಾಲಯ, ಮಾಧ್ಯಮ ವರದಿಗಳು ನೈತಿಕ ಮಿತಿಯನ್ನು ಮೀರಿದ್ದು, ಅವು ಆರೋಪಿಯ ಸಮರ್ಥನೆಗೆ ಪೂರ್ವಾಗ್ರಹ ಉಂಟು ಮಾಡಬಹುದು. ಹಾದಿ ತಪ್ಪಿಸುವ ತಲೆಬರಹಗಳು, ವಿಜೃಂಭಿತ ಮತ್ತು ಊಹಾತ್ಮಕ ವರದಿಗಳಿಂದ ಮಾಧ್ಯಮ ವಿಚಾರಣೆ (ಮೀಡಿಯಾ ಟ್ರಯಲ್) ವಾತಾವರಣ ಸೃಷ್ಟಿಯಾಗಿದ್ದು, ರನ್ಯಾ ವೈಯಕ್ತಿಕ ಪ್ರಾಮಾಣಿಕತೆಗೆ ಹಾನಿ ಮಾಡುವ ಸಂಭವವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತಲ್ಲದೆ, ಜೂನ್‌ 2 ರವರೆಗೆ ದಾವೆಯಲ್ಲಿ ಪ್ರತಿವಾದಿಯಾಗಿರುವ ಎಲ್ಲ ಮಾಧ್ಯಮ ಸಂಸ್ಥೆಗಳು ಹರ್ಷವರ್ದಿನಿ ರನ್ಯಾ ರಾವ್‌ ವಿರುದ್ದ ಯಾವುದೇ ಮಾನಹಾನಿ ಸುದ್ದಿ ಪ್ರಕಟ/ಪ್ರಸಾರ ಮಾಡಬಾರದು ಎಂದು ತಾತ್ಕಾಲಿಕ ಪ್ರತಿಬಂಧಕಾಜ್ಞೆ ಹೊರಡಿಸಿತು.

ರಾಮಚಂದ್ರ ರಾವ್‌ ವಿರುದ್ಧ ಮಾನಹಾನಿ ಸುದ್ದಿ ಪ್ರಸಾರಕ್ಕೆ ಹೈಕೋರ್ಟ್‌ ನಿರ್ಬಂಧ:
ರನ್ಯಾ ರಾವ್‌ ಮಲ ತಂದೆ ಹಿರಿಯ ಐಪಿಎಸ್‌ ಅಧಿಕಾರಿ ಕೆ. ರಾಮಚಂದ್ರ ರಾವ್‌ ವಿರುದ್ದ ಯಾವುದೇ ಮಾನಹಾನಿ ಸುದ್ದಿ ಪ್ರಕಟಿಸದಂತೆ ಮಾಧ್ಯಮ ಸಂಸ್ಥೆಗಳನ್ನು ನಿರ್ಬಂಧಿಸಿ ಕರ್ನಾಟಕ ಹೈಕೋರ್ಟ್‌ ತಾತ್ಕಾಲಿಕ ಪ್ರತಿಬಂಧಕಾಜ್ಞೆ ಹೊರಡಿಸಿದೆ.

ಮುಂದಿನ ವಿಚಾರಣೆವರೆಗೆ ಪ್ರತಿವಾದಿ ಮಾಧ್ಯಮ ಸಂಸ್ಥೆಗಳು ಅರ್ಜಿದಾರ ರಾಮಚಂದ್ರ ರಾವ್‌ ವಿರುದ್ಧ ಯಾವುದೇ ಮಾನಹಾನಿ ಸುದ್ದಿ ಪ್ರಸಾರ, ಹಂಚಿಕೆ ಮಾಡದಂತೆ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಲಾಗಿದೆ ಎಂದು ನ್ಯಾಯಮೂರ್ತಿ ಎಚ್‌. ಟಿ. ನರೇಂದ್ರ ಪ್ರಸಾದ್‌ ಅವರ ಏಕಸದಸ್ಯ ನ್ಯಾಯಪೀಠ ಆದೇಶಿಸಿದೆ.

ವಿಚಾರಣೆ ವೇಳೆ ವಾದ ಮಂಡಿಸಿದ ರಾಮಚಂದ್ರ ರಾವ್‌ ಪರ ವಕೀಲರು, ಚಿನ್ನ ಕಳ್ಳ ಸಾಗಾಣೆ ಪ್ರಕರಣದಲ್ಲಿ ರಾಮಚಂದ್ರ ರಾವ್‌ ಅವರು ಆರೋಪಿಯೂ ಅಲ್ಲ, ಸಾಕ್ಷಿಯೂ ಅಲ್ಲ. ಆದ್ದರಿಂದ, ಮಾಧ್ಯಮಗಳು ಪ್ರಕರಣದಲ್ಲಿ ಅವರನ್ನು ಎಳೆತಂದು ಅವರ ವರ್ಚಸ್ಸಿಗೆ ಹಾನಿ ಮಾಡಲಾಗದು ಎಂದು ಆಕ್ಷೇಪಿಸಿದರು.

Related Articles

Comments (0)

Leave a Comment