- ಪ್ರಮುಖ ಸಮಾಚಾರಗಳು
- ಹೈಕೋರ್ಟ್
- Like this post: 15
ವ್ಹೀಲಿಂಗ್ ನಿಯಂತ್ರಣಕ್ಕೆ ಕಾನೂನು ತಿದ್ದುಪಡಿ; ಹೈಕೋರ್ಟ್ ಸಲಹೆ ಪಾಲಿಸಲು ಗೃಹ ಸಚಿವರಿಗೆ ಸುರೇಶ್ ಕುಮಾರ್ ಪತ್ರ
- by Prashanth Basavapatna
- May 14, 2025
- 24 Views

ಬೆಂಗಳೂರು: ದ್ವಿಚಕ್ರ ವಾಹನಗಳ ವ್ಹೀಲಿಂಗ್ ಹಾವಳಿಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸುವ ಜತೆಗೆ, ಇಂತಹ ಅಪಾಯಕಾರಿ ಚಟುವಟಿಕೆಗೆ ಲಗಾಮು ಹಾಕಲು ರಾಜ್ಯ ಸರ್ಕಾರ ಸೂಕ್ತ ಕಾನೂನು ರೂಪಿಸಬೇಕೆಂದು ರಾಜ್ಯ ಹೈಕೋರ್ಟ್ ನೀಡಿರುವ ಸಲಹೆ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿ ವಿಪರೀತವಾಗುತ್ತಿರುವ ದ್ವಿಚಕ್ರ ವಾಹನಗಳ ವ್ಹೀಲಿಂಗ್ ಹಾವಳಿಯ ಬಗ್ಗೆ ಇತ್ತೀಚೆಗೆ ಕಳವಳ ವ್ಯಕ್ತಪಡಿಸಿರುವ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರ ಏಕಸದಸ್ಯ ನ್ಯಾಯಪೀಠ (ಧಾರವಾಡ) ವ್ಹೀಲಿಂಗ್‌ನಂತಹ ಅಪಾಯಕಾರಿ ಚಟುವಟಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಅಗತ್ಯ ಕಾನೂನು ರೂಪಿಸಬೇಕೆಂದು ಸರ್ಕಾರಕ್ಕೆ ನಿರ್ದೇಶಿಸಿದೆ. ನ್ಯಾಯಾಲಯದ ಈ ಕಳಕಳಿ ಸಮಾಜದ ಎಲ್ಲ ಪ್ರಜ್ಞಾವಂತರ ಭಾವನೆಯನ್ನು ಪ್ರತಿಧ್ವನಿಸಿದೆ ಎಂದು ಶಾಸಕ ಸುರೇಶ್ ಕುಮಾರ್ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

ವ್ಹೀಲಿಂಗ್ ಎನ್ನುವುದು ಒಂದು ಹುಚ್ಚಾಟದ ಹವ್ಯಾಸವಾಗಿದೆ. ಇದರಿಂದ, ವ್ಹೀಲಿಂಗ್ ಮಾಡುವವರಷ್ಟೇ ಅಲ್ಲದೆ ಅಮಾಯಕ ಸಾರ್ವಜನಿಕರೂ ಬಲಿಯಾಗುತ್ತಿದ್ದಾರೆ. ಕಾನೂನಿನ ಭಯವಿಲ್ಲದೆ, ಅನ್ಯರ ಬಗ್ಗೆ ಕಾಳಜಿ ಇಲ್ಲದೆ ಬಹಳಷ್ಟು ಸಲ ಪುಂಡ ಪೋಕರಿಗಳು ಮಾಡುತ್ತಿರುವ ಇಂಥ ಕಾರ್ಯ ಸಮಾಜಕ್ಕೆ ಅಪಾಯಕಾರಿ ಎಂದು ಸುರೇಶ್ ಕುಮಾರ್ ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ವ್ಹೀಲಿಂಗ್ ಮಾಡುವ ವಾಹನ ಸವಾರರನ್ನು ಅನೇಕ ಬಾರಿ ನಾನೇ ಹಿಡಿದು ತಾಕೀತು ಮಾಡಿದ್ದೇನೆ. ಕೆಲವು ಸಲ ಸಾಧ್ಯವಾಗದಿದ್ದಾಗ ವ್ಹೀಲಿಂಗ್ ಮಾಡುವ ವಾಹನಗಳ ಫೋಟೋ ತೆಗೆದು ಸಂಬಂಧಪಟ್ಟ ಸಂಚಾರಿ ಪೋಲೀಸ್ ಅಧಿಕಾರಿಗಳ ಗಮನಕ್ಕೆ ತಂದು ಅವರನ್ನು ಹಿಡಿದು ಶಿಕ್ಷಿಸುವಂತೆ ಮಾಡಿದ್ದೇನೆ. ಇದೀಗ, ವೀಲಿಂಗ್ ಹಾವಳಿಗೆ ಸಂಪೂರ್ಣ ಇತಿಶ್ರೀ ಹಾಡುವ ಕಾಲ ಕೂಡಿಬಂದಿದೆ. ನಾಗರಿಕರ, ವಿಶೇಷವಾಗಿ ಯುವಕರ ಸ್ವಾಸ್ಥ್ಯ, ನೆಮ್ಮದಿ ಕಾಪಾಡಲು ರಾಜ್ಯ ಉಚ್ಚ ನಾಯಾಲಯದ ಅನಿಸಿಕೆಯನ್ನು ಗಮನದಲ್ಲಿಟ್ಟುಕೊಂಡು ತಕ್ಷಣವೇ ಅಗತ್ಯ ಕಾನೂನು ತಿದ್ದುಪಡಿ ತರಲು ಸಂಬಂಧಪಟ್ಟವರಿಗೆ ಸೂಚನೆ ನೀಡುವಂತೆ ಪರಮೇಶ್ವರ್ ಅವರಿಗೆ ಪತ್ರದ ಮೂಲಕ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.
Related Articles
Thank you for your comment. It is awaiting moderation.
Comments (0)