ಬೆಂಗಳೂರು ವಕೀಲರ ಸಂಘದ ಚುನಾವಣೆ ಮುಂದೂಡಿಕೆ; ಫೆ. 2ರಂದು ನಡೆಯಬೇಕಿದ್ದ ಮತದಾನ ರದ್ದು

ಬೆಂಗಳೂರು: ಬೆಂಗಳೂರು ವಕೀಲರ ಸಂಘದ (ಎಎಬಿ) ಆಡಳಿತ ಮಂಡಳಿ ಆಯ್ಕೆ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾತಿ ಕಲ್ಪಿಸುವ ಸಂಬಂಧ ಸುಪ್ರೀಂಕೋರ್ಟ್‌ ಶುಕ್ರವಾರ ಆದೇಶ ಹೊರಡಿಸಿದ ಬೆನ್ನಲ್ಲೇ ಫೆಬ್ರವರಿ 2ರಂದು ನಿಗದಿಯಾಗಿದ್ದ ಮತದಾನ ರದ್ದುಪಡಿಸಿ ಉನ್ನತಾಧಿಕಾರಿ ಸಮಿತಿ ಮಹತ್ವದ ಆದೇಶ ಮಾಡಿದೆ.

ಸುಪ್ರೀಂಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ, 2025ರ ಜನವರಿ 8ರಂದು ಪ್ರಕಟಿಸಲಾಗಿರುವ ವೇಳಾಪಟ್ಟಿಯ ಪ್ರಕಾರ ನಡೆಯುತ್ತಿದ್ದ ಚುನಾವಣಾ ಪ್ರಕ್ರಿಯೆಗಳನ್ನು ಅಮಾನತಿನಲ್ಲಿರಿಸಲಾಗಿದ್ದು, ಫೆಬ್ರವರಿ 2ರಂದು ನಿಗದಿಯಾಗಿದ್ದ ಮತದಾನ ರದ್ದುಪಡಿಸಲಾಗಿದೆ. ಚುನಾವಣಾ ಪ್ರಕ್ರಿಯೆ ಮುಂದುವರಿಸುವ ಅಥವಾ ಮರುನಿಗದಿಪಡಿಸುವ ನಿರ್ಧಾರದ ಬಗ್ಗೆ ಮುಂದೆ ಮಾಹಿತಿ ನೀಡಲಾಗುವುದು ಎಂದು ಉನ್ನತಾಧಿಕಾರ ಸಮಿತಿಯ ಅಧ್ಯಕ್ಷರೂ ಆದ ಮುಖ್ಯ ಚುನಾವಣಾಧಿಕಾರಿ ಕೆ.ಎನ್‌. ಫಣೀಂದ್ರ ಪ್ರಕಟಣೆ ಹೊರಡಿಸಿದ್ದಾರೆ.

ಉನ್ನತಾಧಿಕಾರ ಸಮಿತಿ ಮತ್ತು ಮುಖ್ಯ ಚುನಾವಣಾಧಿಕಾರಿಯು ಪ್ರಕರಣವನ್ನು ಪರಿಶೀಲಿಸುತ್ತಿದ್ದು, ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಫೆ.2ರಂದು ನಡೆಯಬೇಕಿದ್ದ ಮತದಾನ ರದ್ದುಪಡಿಸಿ ಉನ್ನತಾಧಿಕಾರ ಸಮಿತಿ ಹೊರಡಿಸಿರುವ ಆದೇಶ ಪ್ರತಿ

ಎಎಬಿ ಚುನಾವಣೆಯ ಎಲ್ಲ ಸಿದ್ಧತೆಗಳು ಭರದಿಂದ ಸಾಗಿದ್ದು, ಜನವರಿ 20ರಂದು ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಪೂರ್ಣಗೊಂಡಿತ್ತು. ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಖಜಾಂಚಿ ಮತ್ತು ನಾಲ್ಕು ವಿಭಾಗಗಳ ಪ್ರತಿನಿಧಿ ಸದಸ್ಯರ ಸ್ಥಾನಗಳ ಸಹಿತ ಒಟ್ಟು 32 ಸ್ಥಾನಗಳಿಗೆ 140 ಮಂದಿ ಅಂತಿಮವಾಗಿ ಕಣದಲ್ಲಿ ಉಳಿದಿದ್ದರು.

ಚುನಾವಣೆ ರದ್ದಾಗಲು ಕಾರಣವೇನು?
ಬೆಂಗಳೂರು ವಕೀಲರ ಸಂಘದ ಚುನಾವಣೆಯಲ್ಲಿ ಮಹಿಳೆಯರಿಗೆ ಮೀಸಲಾತಿ ಕೋರಿ ವಕೀಲೆ ದೀಕ್ಷಾ ಅಮೃತೇಶ್ ಹಾಗೂ ಕರ್ನಾಟಕ ಮಹಿಳಾ ವಕೀಲರ ಒಕ್ಕೂಟದ ವತಿಯಿಂದ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಗಳ ವಿಚಾರಣೆ ನಡೆಸಿದ್ದ ಏಕಸದಸ್ಯ ನ್ಯಾಯಪೀಠ, ಈಗಾಗಲೇ ಚುನಾವಣಾ ಪ್ರಕ್ರಿಯೆ ಮತ್ತು ಸಂಬಂಧಿತ ಚಟುವಟಿಕೆ ನಡೆಯುತ್ತಿರುವಾಗ ಮಧ್ಯಪ್ರವೇಶಿಸಲು ಹೈಕೋರ್ಟ್‌ಗೆ ಅಧಿಕಾರವಿಲ್ಲ ಎಂದು ತಿಳಿಸಿ ಅರ್ಜಿಗಳನ್ನು ವಜಾಗೊಳಿಸಿತ್ತು.
ಎಎಬಿಯ ಈಗಿನ ಬೈಲಾಗಳು ಮಹಿಳಾ ವಕೀಲರಿಗೆ ಮೀಸಲಾತಿ ಒದಗಿಸಿಲ್ಲ. ಆದ್ದರಿಂದ, ಅಂತಹ ಮೀಸಲಾತಿ ಒದಗಿಸಲು ಎಎಬಿಗೆ ನಿರ್ದೇಶಿಸಲು ಸಾಧ್ಯವಿಲ್ಲ ಎಂದೂ ನ್ಯಾಯಾಲಯ ಹೇಳಿತ್ತು.

ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ವಿಶೇಷ ಮೇಲ್ಮನವಿ ಸಲ್ಲಿಸಲಾಗಿತ್ತು. ಶುಕ್ರವಾರ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿ ಎನ್. ಕೋಟೀಶ್ವರ್ ಸಿಂಗ್ ಅವರಿದ್ದ ಪೀಠ ಸಂವಿಧಾನದ 142ನೇ ಪರಿಚ್ಛೇದದ ಅಡಿ ಅಧಿಕಾರ ಚಲಾಯಿಸಿ, ಎಎಬಿಯ ಖಜಾಂಚಿ ಹುದ್ದೆಯನ್ನು ಮಹಿಳಾ ವಕೀಲರಿಗೆ ಮೀಸಲಿಡಬೇಕು. ಈ ನೆಲೆಯಲ್ಲಿ ಅಗತ್ಯಬಿದ್ದರೆ ಉನ್ನತಾಧಿಕಾರ ಸಮಿತಿ ಮತ್ತು ಮುಖ್ಯ ಚುನಾವಣಾಧಿಕಾರಿಯು ನಾಮಪತ್ರ ಸ್ವೀಕಾರ ದಿನಾಂಕ ಮತ್ತು ಚುನಾವಣೆಯನ್ನು ಮುಂದೂಡಬಹುದು. ಎಎಬಿ ಆಡಳಿತ ಮಂಡಳಿಯ ಸದಸ್ಯತ್ವದಲ್ಲಿ ಕನಿಷ್ಠ ಪಕ್ಷ ಶೇ. 30 ಪ್ರಾತಿನಿಧ್ಯವನ್ನು ಮಹಿಳೆಯರಿಗೆ ನೀಡಬೇಕು ಎಂದು ಆದೇಶಿಸಿತ್ತು. ಈ ಆದೇಶದ ಹಿನ್ನೆಲೆಯಲ್ಲಿ ಫೆಬ್ರವರಿ 2ರಂದು ನಡೆಯಬೇಕಿದ್ದ ಚುನಾವಣೆಯನ್ನು ರದ್ದುಪಡಿಸಲಾಗಿದೆ.

Related Articles

Comments (0)

Leave a Comment