ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯನ್ನು ರಾಜಕೀಯಗೊಳಿಸಬೇಡಿ; ರಾಜಕೀಯ ಪಕ್ಷಗಳಿಗೆ ಸುಪ್ರೀಂ ತಾಕೀತು

ನವದೆಹಲಿ: ಕೋಲ್ಕತಾದ ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ 31 ವರ್ಷದ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ರಾಜಕೀಯಗೊಳಿಸದಂತೆ ಸರ್ಕಾರ ಹಾಗೂ ರಾಜಕೀಯ ಪಕ್ಷಗಳಿಗೆ ಸುಪ್ರೀಂಕೋರ್ಟ್ ಒತ್ತಿ ಹೇಳಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಗುರುವಾರ ವಿಚಾರಣೆ ನಡೆಸಿತು. ಈ ವೇಳೆ, ಘಟನೆಗೆ ಸಂಬಂಧಿಸಿದಂತೆ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದ ಬಿಜೆಪಿ ಮತ್ತು ಟಿಎಂಸಿ ಪಕ್ಷಗಳಿಗೆ ಬುದ್ಧಿಮಾತು ಹೇಳಿದ ನ್ಯಾಯಪೀಠ, ಘಟನೆಯನ್ನು ರಾಜಕೀಯಗೊಳಿಸಬಾರದೆಂದು ತಾಕೀತು ಮಾಡಿತು.

ಅರ್ಜಿ ವಿಚಾರಣೆ ವೇಳೆ ಸಿಬಿಐ ಪ್ರತಿನಿಧಿಸುತ್ತಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಮಮತಾ ಬ್ಯಾನರ್ಜಿ ಕಡೆಗೆ ಕೈತೋರುವವರ ಬೆರಳು ಕತ್ತರಿಸಲಾಗುವುದು ಎಂದು ಪಶ್ಚಿಮ ಬಂಗಾಳದ ಹಾಲಿ ಸಚಿವರೊಬ್ಬರು ಹೇಳುತ್ತಾರೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪಶ್ಚಿಮ ಬಂಗಾಳ ಸರ್ಕಾರದ ಪರ ಹಿರಿಯ ವಕೀಲ ಕಪಿಲ್ ಸಿಬಲ್, ಪ್ರತಿಪಕ್ಷದ ನಾಯಕ ಸುವೇಂದು ಅಧಿಕಾರಿ ಗುಂಡು ಹಾರಿಸುವುದಾಗಿ ಹೇಳಿದ್ದಾರೆ ಎಂದರು. ಆಗ ಮಧ್ಯಪ್ರವೇಶಿಸಿದ ಪೀಠ, ಪರಿಸ್ಥಿತಿಯನ್ನು ರಾಜಕೀಯ ಪಕ್ಷಗಳು ಹಾಗೂ ಸರ್ಕಾರಗಳು ರಾಜಕೀಯಗೊಳಿಸಬೇಡಿ. ಈ ವಿಚಾರದಲ್ಲಿ ಕಾನೂನು ತನ್ನ ಕೆಲಸ ಮಾಡಲಿದೆ ಎಂದು ತಿಳಿಸಿತು.

ವೈದ್ಯರಿಗೆ ಸುಪ್ರೀಂ ಅಭಯ: ಘಟನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ವೈದ್ಯರು ರೋಗಿಗಳಿಗೆ ತೊಂದರೆಯಾಗುವುದನ್ನು ತಪ್ಪಿಸಲು ತಮ್ಮ ಕೆಲಸ ಆರಂಭಿಸಬೇಕು ಎಂದು ಮನವಿ ಮಾಡಿದ ನ್ಯಾಯಾಲಯ, ವೈದ್ಯರು ಕೂಡಲೇ ಕರ್ತವ್ಯಕ್ಕೆ ಮರಳಿದರೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಅಧಿಕಾರಿಗಳಿಗೆ ನಿರ್ದೇಶಿಸಲಾಗುವುದು ಎಂದು ಹೇಳಿತು.

ನಾಗಪುರದ ಪ್ರತಿಭಟನಾ ನಿರತ ಏಮ್ಸ್ ಸ್ಥಾನಿಕ ವೈದ್ಯರಿಗೆ ದಂಡ ವಿಧಿಸಲಾಗುತ್ತಿದೆ ಎಂದು ವಕೀಲರೊಬ್ಬರು ತಿಳಿಸಿದಾಗ ಕರ್ತವ್ಯಕ್ಕೆ ಹಾಜರಾಗದಿದ್ದರೆ ಆಡಳಿತ ಮಂಡಳಿಗೆ ತಾನು ಏನು ಹೇಳಲು ಸಾಧ್ಯ ಎಂದು ನ್ಯಾಯಲಯ ಪ್ರಶ್ನಿಸಿತು. ಆಗ ನ್ಯಾಯಾಲಯ ಸೌಮ್ಯ ದೃಷ್ಟಿಕೋನ ತಳೆಯಬೇಕೆಂದು ಕೋರಿದ ವಕೀಲರು ಶೀಘ್ರವೇ ವೈದ್ಯರು ಕರ್ತವ್ಯಕ್ಕೆ ಮರಳಲಿದ್ದಾರೆ, ಕೆಲವರು ಈಗಾಗಲೇ ಮರಳಿದ್ದಾರೆ ಎಂದರು.

ಕರ್ತವ್ಯ ಆರಂಭಿಸಿದ ಬಳಿಕವೂ ವೈದ್ಯರನ್ನು ಗುರಿ ಮಾಡಿಕೊಳ್ಳುವ ಸಾಧ್ಯತೆ ಬಗ್ಗೆ ಚಂಡೀಗಢದ ವೈದ್ಯರನ್ನು ಪ್ರತಿನಿಧಿಸುವ ವಕೀಲರು ತಿಳಿಸಿದರು. ಆಗ ನ್ಯಾಯಪೀಠ, ಸೇವೆಗೆ ಮರಳುವ ವೈದ್ಯರ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಅಧಿಕಾರಿಗಳಿಗೆ ಆದೇಶಿಸಿತು.

ನ್ಯಾಯ ಮತ್ತು ಔಷಧ ಮುಷ್ಕರ ಮಾಡುವಂತಿಲ್ಲ: ನ್ಯಾಯಾಧೀಶರು ಹಾಗೂ ವೈದ್ಯರು ಜನರ ಜೀವ ಮತ್ತು ಸ್ವಾತಂತ್ರ್ಯ ಒಳಗೊಂಡಿರುವ ವಿಷಯಗಳಲ್ಲಿ ವ್ಯವಹರಿಸುವುದರಿಂದ ಮುಷ್ಕರ ನಡೆಸುವಂತಿಲ್ಲ. ಈಗ ನಾವು ಸುಪ್ರೀಂಕೋರ್ಟ್‌ನ ಹೊರಗೆ ಹೋಗಿ ಪ್ರತಿಭಟನೆಗೆ ಕುಳಿತುಕೊಳ್ಳಬಹುದೇ ಎಂದು ಮಾರ್ಮಿಕವಾಗಿ ಪ್ರಶ್ನಿಸಿದ ಪೀಠ, ನ್ಯಾಯ ಮತ್ತು ಔಷಧ ಮುಷ್ಕರ ಮಾಡಲಾಗದು ಎಂದು ಹೇಳಿತು.

Related Articles

Comments (0)

Leave a Comment