ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಯಡಿಯೂರಪ್ಪ ಒಪ್ಪಿಕೊಂಡಿಲ್ಲ; ಹೈಕೋರ್ಟ್‌ನಲ್ಲಿ ಬಿಎಸ್‌ವೈ ವಕೀಲರ ಪ್ರತಿಪಾದನೆ

ಬೆಂಗಳೂರು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಒಪ್ಪಿಕೊಂಡಿಲ್ಲ. ಸಂತ್ರಸ್ತೆಯ ಹೇಳಿಕೆಯನ್ನಷ್ಟೇ ಆಧರಿಸಿ ವಿಚಾರಣಾ ನ್ಯಾಯಾಲಯ ಪ್ರಕರಣವನ್ನು ವಿಚಾರಣೆಗೆ ಪರಿಗಣಿಸುವುದು ಕಾನೂನುಬಾಹಿರ ಕ್ರಮವಾಗಿದೆ ಎಂದು ಬಿಎಸ್‌ವೈ ಪರ ವಕೀಲರು ಹೈಕೋರ್ಟ್‌ ಮುಂದೆ ಪ್ರತಿಪಾದಿಸಿದರು.

ಪೋಕ್ಸೊ ಪ್ರಕರಣ ಸಂಬಂಧ ಹೊಸದಾಗಿ ಕಾಗ್ನೈಜೆನ್ಸ್ ತೆಗೆದುಕೊಂಡಿದ್ದ (ವಿಚಾರಣೆಗೆ ಪರಿಗಣಿಸಿದ) ವಿಚಾರಣಾ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಬಿ.ಎಸ್‌. ಯಡಿಯೂರಪ್ಪ ಎರಡನೇ ಬಾರಿ ಸಲ್ಲಿಸಿರುವ ಅರ್ಜಿ ಕುರಿತು ನ್ಯಾಯಮೂರ್ತಿ ಎಂ.ಐ. ಅರುಣ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಹಿರಿಯ ವಕೀಲ ಸಿ.ವಿ. ನಾಗೇಶ್‌ ವಾದ ಮಂಡಿಸಿ, ಸಂತ್ರಸ್ತೆ ರೆಕಾರ್ಡ್‌ ಮಾಡಿರುವ ವಿಡಿಯೊದಲ್ಲಿ ಯಡಿಯೂರಪ್ಪ ಅವರು ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ ಎಂದು ತನಿಖಾಧಿಕಾರಿಗಳು (ಪ್ರಾಸಿಕ್ಯೂಷನ್‌) ಆರೋಪಿಸುತ್ತಿದ್ದಾರೆ. ವಾಸ್ತವವಾಗಿ ಹಳೆಯ ಪೋಕ್ಸೊ ಪ್ರಕರಣದಲ್ಲಿ ನ್ಯಾಯ ಕೊಡಿಸುವಂತೆ ಕೋರಿ ಸಂತ್ರಸ್ತೆ ಮತ್ತು ಆಕೆಯ ತಾಯಿಯೇ ಯಡಿಯೂರಪ್ಪ ಅವರ ಮನೆಗೆ ಬಂದಿದ್ದರು. ಸಂತ್ರಸ್ತೆಯು ನನ್ನ ಮೊಮ್ಮಗಳಿದ್ದಂತೆ ಚೆಕ್ ಮಾಡಿದೆ ಎಂದು ಯಡಿಯೂರಪ್ಪ ಹೇಳಿರುವುದು ವಿಡಿಯೋದಲ್ಲಿದೆ. ಸಂತ್ರಸ್ತೆಯ ತಾಯಿ, ಬೇಕಿದ್ದರೆ ತನ್ನ ಮಗಳ ಬಗ್ಗೆ ಚೆಕ್ ಮಾಡಿಕೊಳ್ಳಿ ಎಂದು ಯಡಿಯೂರಪ್ಪಗೆ ಹೇಳುತ್ತಿದ್ದರು. ಅದನ್ನೇ ಚೆಕ್ ಮಾಡಿದೆ ಎಂಬುದಾಗಿ ಯಡಿಯೂರಪ್ಪ ಹೇಳಿದ್ದಾರೆ ಎಂದು ತಿಳಿಸಿದರು.

ಆಗ ನ್ಯಾಯಪೀಠ, ಸಂತ್ರಸ್ತೆಯ ಬ್ಲೌಸ್‌ ಒಳಗೆ ಕೈಹಾಕಿರುವುದನ್ನು ವಿಡಿಯೋದಲ್ಲಿ ಯಡಿಯೂರಪ್ಪ ನಿರಾಕರಿಸಿಲ್ಲ. ಸಂತ್ರಸ್ತೆ ನನ್ನ ಮೊಮ್ಮಗಳು ಇದ್ದಂಗೆ ಎಂದು ಹೇಳಿದ್ದಾರೆ ಎಂದು ನುಡಿಯಿತು. ಸಿ.ವಿ. ನಾಗೇಶ್‌ ಪ್ರತಿಕ್ರಿಯಿಸಿ, ಹಾಗಂತ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಯಡಿಯೂರಪ್ಪ ಒಪ್ಪಿಕೊಂಡಿಲ್ಲ ಎಂದು ಪ್ರತಿಪಾದಿಸಿದರು.

ವಾದ ಮುಂದುವರಿಸಿದ ಸಿ.ವಿ. ನಾಗೇಶ್, ಸಂತ್ರಸ್ತೆಯ ಹೇಳಿಕೆಯನ್ನಷ್ಟೇ ಆಧರಿಸಿ ವಿಚಾರಣಾ ನ್ಯಾಯಾಲಯ ಪ್ರಕರಣವನ್ನು ವಿಚಾರಣೆಗೆ ಪರಿಗಣಿಸಿದೆ. ಈ ವಿಚಾರದಲ್ಲಿ ಸೂಕ್ತ ವಿವೇಚನೆ ಬಳಸಿಲ್ಲ. ಆದ್ದರಿಂದ, ಕಾಗ್ನೈಜೆನ್ಸ್ ತೆಗೆದುಕೊಂಡಿರುವ ವಿಚಾರಣಾ‌ ನ್ಯಾಯಾಲಯದ ಕ್ರಮ ರದ್ದುಪಡಿಸಬೇಕು. ದೂರುದಾರ ಸಾಕ್ಷಿಗಳನ್ನು ಪರಿಗಣಿಸಿ, ಪ್ರಕರಣ ಸಂಬಂಧ ಕಾಗ್ನೈಜೆನ್ಸ್ ಪರಿಗಣಿಸಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಬೇಕು ಎಂದು ಕೋರಿದರು.

ತನಿಖಾಧಿಕಾರಿಗಳ ಪರ ವಾದ ಮಂಡನೆಗೆ 15 ನಿಮಿಷ ಕಾಲಾವಕಾಶ ಕಲ್ಪಿಸಬೇಕು ಎಂದು ವಿಶೇಷ ಸರ್ಕಾರಿ ಅಭಿಯೋಜಕರಾದ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ಮನವಿ ಮಾಡಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.

Related Articles

Comments (0)

Leave a Comment