ಪೋಕ್ಸೊದಂತಹ ಅಹಿತಕರ ಕೃತ್ಯದಲ್ಲಿ ಸಿಲುಕುವ ಮುನ್ನ ಅರಿವಿರಬೇಕಿತ್ತಲ್ಲವೇ?; ಹೈಕೋರ್ಟ್ ಈ ರೀತಿ ಹೇಳಿದ್ದೇಕೆ?
- by Jagan Ramesh
- April 7, 2025
- 295 Views

ಬೆಂಗಳೂರು: ಹಿರಿಯ ರಾಜಕಾರಣಿಯಾಗಿರುವ ಬಿ.ಎಸ್. ಯಡಿಯೂರಪ್ಪ ಅಂಥವರಿಗೆ ಪೋಕ್ಸೊದಂತಹ ಅಹಿತಕರ ಪ್ರಕರಣಗಳಲ್ಲಿ ಸಿಲುಕಿಕೊಳ್ಳುವುದಕ್ಕೂ ಮುನ್ನ ತಮ್ಮ ಕೆಲಸಗಳ ಬಗ್ಗೆ ಅರಿವಿರಬೇಕಿತ್ತು ಎಂದು ಹೈಕೋರ್ಟ್ ಮೌಖಿಕವಾಗಿ ನುಡಿದಿದೆ.
ಪೋಕ್ಸೊ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯದ ಸಂಜ್ಞೇ ಪರಿಗಣನೆ (ಕಾಗ್ನಿಜೆನ್ಸ್) ರದ್ದು ಕೋರಿ ಹಾಗೂ ವಿಚಾರಣಾ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ತೆರಳದಂತೆ ವಿಧಿಸಿರುವ ನಿರೀಕ್ಷಣಾ ಜಾಮೀನು ಷರತ್ತು ಸಡಿಲಿಕೆ ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ಯಡಿಯೂರಪ್ಪ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ಹಾಜರಾಗಿ, ರಾಜಕೀಯ ಪಕ್ಷದ ಹಿರಿಯ ರಾಜಕಾರಣಿಯಾಗಿರುವ ಅರ್ಜಿದಾರರು, ಮೇಲಿಂದ ಮೇಲೆ ರಾಜ್ಯ ಮತ್ತು ದೇಶದಾದ್ಯಂತ ಪ್ರವಾಸಕೈಗೊಳ್ಳಬೇಕಿದೆ. ಪ್ರತಿ ಕ್ಷಣ ಮತ್ತು ಪ್ರತಿ ನಿಮಿಷಕ್ಕೂ ಅನುಮತಿ ಕೋರಲು ವಿಚಾರಣಾ ನ್ಯಾಯಾಲಯಕ್ಕೆ ಹೋಗಲಾಗದು. ಆದ್ದರಿಂದ, ನ್ಯಾಯಾಲಯದ ವ್ಯಾಪ್ತಿ ಬಿಟ್ಟು ದೆಹಲಿ ಮತ್ತಿತರ ಕಡೆ ಸಂಚರಿಸಲು ಅನುವಾಗುವಂತೆ ಷರತ್ತು ಸಡಿಲಿಸಬೇಕು ಎಂದು ಮನವಿ ಮಾಡಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಅರ್ಜಿದಾರರು ಇದನ್ನು ಮೊದಲೇ ಯೋಚಿಸಬೇಕಿತ್ತು. ಹಿರಿಯ ರಾಜಕೀಯ ನಾಯಕರು ಇಂಥವೆಲ್ಲವನ್ನೂ ಮೀರಿ ನಡೆಯಬೇಕು. ಹಿರಿಯ ರಾಜಕಾರಣಿಗಳ ಮೇಲೆ ಗೌರವವಿದೆ. ಇಂಥ ಅಹಿತರಕರ ಘಟನೆಗಳಲ್ಲಿ ಭಾಗಿಯಾಗುವುದಕ್ಕೂ ಮುನ್ನ ಇದರ ಬಗ್ಗೆ ಅವರಿಗೆ ಅರಿವಿರಬೇಕಿತ್ತು ಎಂದು ಹೇಳಿತು.
ಆಗ ಸಿ.ವಿ. ನಾಗೇಶ್ ಅವರು, ಯಡಿಯೂರಪ್ಪ ವಿರುದ್ಧ ಮಾಡಿರುವ ಆರೋಪಗಳು ಸುಳ್ಳು. ಆರೋಪದಲ್ಲಿ ಸ್ವಲ್ಪವಾದರೂ ಹುರುಳಿರಬೇಕು ಎಂದು ಸಮಜಾಯಿಷಿ ನೀಡಲು ಮುಂದಾದರು. ಅರ್ಜಿದಾರರ ಮನವಿಗೆ ಆಕ್ಷೇಪ ಎತ್ತಿದ ಎಸ್‌ಪಿಪಿ ಪ್ರೊ. ರವಿವರ್ಮಕುಮಾರ್, ಎಲ್ಲ ಅಂಶಗಳನ್ನು ನ್ಯಾಯಾಲಯದ ಗಮನಕ್ಕೆ ತರುತ್ತೇವೆ. ಆನಂತರ, ನ್ಯಾಯಾಲಯ ಷರತ್ತು ಸಡಿಲಿಕೆ ಬಗ್ಗೆ ತೀರ್ಮಾನಿಸಬಹುದು ಎಂದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು, ಮುಂದಿನ ಒಂದು ತಿಂಗಳು ನೀವು (ಯಡಿಯೂರಪ್ಪ) ಎಲ್ಲೂ ಹೋಗುವುದಿಲ್ಲ ಅಲ್ಲವೇ? ಮುಂದಿನ ವಾರ ನಾನು ರಜೆಯಲ್ಲಿರುತ್ತೇನೆ. ಆನಂತರ ಹೈಕೋರ್ಟ್‌ಗೆ ಒಂದು ತಿಂಗಳು ಬೇಸಿಗೆ ರಜೆ ಇದೆ. ಆದ್ದರಿಂದ, ರಜೆ ಮುಗಿದ ನಂತರ ವಿಚಾರಣೆ ನಡೆಸೋಣ. ಅಷ್ಟರಲ್ಲಿ ಅರ್ಜಿದಾರರ ಮೇಲಿನ ಪ್ರವಾಸ ನಿರ್ಬಂಧದಲ್ಲಿ ಸಡಿಲಿಕೆ ಮಾಡಬಹುದೇ ಎಂಬ ಬಗ್ಗೆ ಪರಿಶೀಲಿಸಿ, ಪ್ರಾಸಿಕ್ಯೂಷನ್ ಆಕ್ಷೇಪಣೆ ಸಲ್ಲಿಸಬಹುದು. ಅಲ್ಲಿಯವರೆಗೆ ಯಡಿಯೂರಪ್ಪ ಅವರಿಗೆ ವಿಧಿಸಲಾಗಿರುವ ಪ್ರವಾಸ ನಿರ್ಬಂಧ ಮುಂದುವರಿಯಲಿದೆ ಎಂದು ಆದೇಶಿಸಿ, ಬೇಸಿಗೆ ರಜೆ ಮುಗಿದ ನಂತರ ಅರ್ಜಿಯನ್ನು ವಿಚಾರಣೆಗೆ ನಿಗದಿ ಮಾಡುವಂತೆ ಆದೇಶಿಸಿತು.
Related Articles
Thank you for your comment. It is awaiting moderation.
Comments (0)