ಕಿಂಗ್‌ಫಿಷರ್ ಏರ್‌ಲೈನ್ಸ್‌ ಬಾಕಿ ಸಾಲದ ಮಾಹಿತಿ ಕೇಳಿದ್ದ ವಿಜಯ್ ಮಲ್ಯ ಅರ್ಜಿ ಸಿಂಧುವಲ್ಲ; ಹೈಕೋರ್ಟ್ ಮೌಖಿಕ ಅಭಿಪ್ರಾಯ

ಬೆಂಗಳೂರು: ವಿದೇಶಕ್ಕೆ ಪರಾರಿಯಾಗಿರುವ ಘೋಷಿತ ಅಪರಾಧಿ ವಿಜಯ್ ಮಲ್ಯ ಅವರು ತಮ್ಮ ಹಾಗೂ ತಮ್ಮ ಒಡೆತನದಲ್ಲಿದ್ದ ಕಿಂಗ್‌ಫಿಷರ್ ಏರ್‌ಲೈನ್ಸ್‌ನ (ಯುಬಿಎಚ್‌ಎಲ್) ಬಾಕಿ ಸಾಲದ ಮಾಹಿತಿ ಕೋರಿ ಸಲ್ಲಿಸಿರುವ ಅರ್ಜಿಯು ವಿಚಾರಣಾ ಮಾನ್ಯತೆ ಹೊಂದಿಲ್ಲ ಎಂದು ಹೈಕೋರ್ಟ್ ಮೌಖಿಕವಾಗಿ ಹೇಳಿದೆ.

ಮದ್ಯದ ದೊರೆ ವಿಜಯ್ ಮಲ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ‌ ನಡೆಸಿದ ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಅರ್ಜಿದಾರರು ಬೇಕಿದ್ದರೆ ಕಂಪನಿ ನ್ಯಾಯಾಲಯದಲ್ಲಿ ಕಂಪನಿ ಅರ್ಜಿ ಸಲ್ಲಿಸಬಹುದು. ಈ ನ್ಯಾಯಾಲಯದ ಮುಂದೆ ಈ ಅರ್ಜಿಯನ್ನು ಹೇಗೆ ನಿರ್ವಹಿಸಬಹುದು? ಈ ನ್ಯಾಯಾಲಯ ಇದನ್ನೆಲ್ಲ ಏಕೆ ಪರಿಗಣಿಸಬೇಕು? ನೀವು ಈ ಎಲ್ಲ ವಿವರಗಳನ್ನು ಪಡೆಯಲು ಆಸಕ್ತಿ ಹೊಂದಿದ್ದರೆ ಕಂಪನಿ ನ್ಯಾಯಾಲಯದ ಮುಂದಿರುವ ಅರ್ಜಿಗಳಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿ ಮಾಹಿತಿ ಪಡೆಯಬಹುದು. ಆದರೆ ಮೇಲ್ನೋಟಕ್ಕೆ ನಿಮ್ಮ ಈ ಮನವಿಗಳನ್ನು ಇಲ್ಲಿ ಒಪ್ಪಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಮೌಖಿಕವಾಗಿ ನುಡಿಯಿತು.

ಇದಕ್ಕೂ ಮುನ್ನ ಬ್ಯಾಂಕ್‌ಗಳ ಪರವಾಗಿ ಹಾಜರಿದ್ದ ಹಿರಿಯ ವಕೀಲ ವಿಕ್ರಮ್ ಹುಯಿಲಗೋಳ ಅವರು, ಕಂಪನಿ ನ್ಯಾಯಾಲಯದಲ್ಲಿ ದಿವಾಳಿ ಪ್ರಕ್ರಿಯೆಗಳು ನಡೆಯುತ್ತಿದ್ದು, ಅರ್ಜಿದಾರರು ಏನೇ ಮಾಹಿತಿ ಬೇಕಿದ್ದರೂ ಅಲ್ಲಿ ಅರ್ಜಿ ಸಲ್ಲಿಸಬಹುದು. ಈ ಅರ್ಜಿಯು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸುವ ಅರ್ಜಿಯ ಸ್ವರೂಪದಲ್ಲಿದೆ. ಎಷ್ಟು ಸಾಲ ವಸೂಲಿ ಮಾಡಲಾಗಿದೆ ಮತ್ತು ಎಷ್ಟು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂಬುದನ್ನು ಬಹಿರಂಗಪಡಿಸಲು ಬ್ಯಾಂಕ್‌ಗೆ ನಿರ್ದೇಶನ ನೀಡುವಂತೆ ಅರ್ಜಿದಾರರು ಕೋರಿದ್ದಾರೆ. ಆದರೆ, ಮನವಿಯನ್ನು ನ್ಯಾಯಾಲಯ ಪುರಸ್ಕರಿಸಲಾಗದು ಎಂದರು.

ಕಂಪನಿಯ ಅಧಿಕೃತ ಬರ್ಖಾಸ್ತುದಾರರ (Official Liquidator) ಪರ ಹಾಜರಿದ್ದ ವಕೀಲೆ ಕೃತಿಕಾ ರಾಘವನ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ವಿವರಗಳನ್ನು ಕೋರಿ ಕಂಪನಿ ನ್ಯಾಯಾಲಯದಲ್ಲಿ ಇದೇ ರೀತಿಯ ಅರ್ಜಿಯನ್ನು ಸಲ್ಲಿಸಲಾಗಿದೆ. ಬ್ಯಾಂಕ್‌ ಈಗಾಗಲೇ ಕೆಲವು ವಿವರಗಳನ್ನು ಒದಗಿಸಿದೆ. ಈ ಅರ್ಜಿದಾರರು ಕಂಪನಿಯ (ಮಲ್ಯ) ಮಾಜಿ ನಿರ್ದೇಶಕರಾಗಿದ್ದು, ಅವರ ವಿರುದ್ಧ 17 ಸಾವಿರ ಕೋಟಿ ವಂಚನೆ ಅರ್ಜಿ ಸಲ್ಲಿಸಲಾಗಿದೆ. ಆದ್ದರಿಂದ, ಸ್ವತಃ ಈ ಅರ್ಜಿ ಸಲ್ಲಿಸಲು ಅರ್ಜಿದಾರರಿಗೆ ಯಾವುದೇ ಅರ್ಹತೆ ಇಲ್ಲ ಎಂದರು.

ಮಲ್ಯ ಪರ ವಕೀಲರು, ಪ್ರಕರಣದಲ್ಲಿ ಹಿರಿಯ ವಕೀಲರು ಹಾಜರಾಗಿ ವಾದ ಮಂಡಿಸಲಿದ್ದಾರೆ. ಅದಕ್ಕಾಗಿ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಇದರಿಂದ,‌ ನ್ಯಾಯಾಲಯ ಅರ್ಜಿ ವಿಚಾರಣೆಯನ್ನು ನವೆಂಬರ್ 4ಕ್ಕೆ ಮುಂದೂಡಿತು.

ಮನವಿ ಏನು?
ವಿಜಯ್ ಮಲ್ಯ ಅವರು ತಮ್ಮಿಂದ ಕಾಲಕಾಲಕ್ಕೆ ಮಾಡಲಾದ ಎಲ್ಲ ವಸೂಲಾತಿಗಳನ್ನು ಸರಿಹೊಂದಿಸಿದ ನಂತರ ಬ್ಯಾಂಕ್ ಖಾತೆಗಳ ಲೆಕ್ಕಪತ್ರಗಳನ್ನು ಒದಗಿಸಲು ಕೋರಿದ್ದಾರೆ. ಜತೆಗೆ, ಕಿಂಗ್‌ಫಿಷರ್ ಏರ್‌ಲೈನ್ಸ್ ಮುಚ್ಚಿದ ನಂತರ, 6,200 ಕೋಟಿ ರೂ. ಮೊತ್ತವನ್ನು ಪಾವತಿಸಲು ಆದೇಶಿಸಲಾಗಿದೆ. ಆದರೂ, ಬ್ಯಾಂಕ್‌ಗಳು ತಮ್ಮಿಂದ 14 ಸಾವಿರ ಕೋಟಿ ರೂ. ಹಣ ವಸೂಲಿ ಮಾಡಿವೆ. ಆದ್ದರಿಂದ, ಸಾಲ ವಸೂಲಾತಿ ನ್ಯಾಯಾಧಿಕರಣ (ಡಿಆರ್‌ಟಿ) 2017ರ ಏಪ್ರಿಲ್ 10ರಂದು ತಿದ್ದುಪಡಿ ಮಾಡಲಾದ ವಸೂಲಾತಿ ಪ್ರಮಾಣಪತ್ರ ನೀಡಿದ ನಂತರ ಬ್ಯಾಂಕ್‌ಗಳು ವಸೂಲಿ ಮಾಡಿದ ಮೊತ್ತ ಹಾಗೂ ಆ ಮೊತ್ತ ವಸೂಲಿ ಮಾಡಲು ಬಳಸಿದ ಸ್ವತ್ತುಗಳ ಮೂಲ ಮಾಲೀಕರ ವಿವರಗಳನ್ನು ನೀಡಲು ನಿರ್ದೇಶಿಸಬೇಕೆಂದು ಅರ್ಜಿಯಲ್ಲಿ ಕೋರಿದ್ದಾರೆ.

Related Articles

Comments (0)

Leave a Comment