ಬಿಬಿಎಂಪಿ ಜಾಹೀರಾತುಗಳ ಬೈಲಾ ಅಧಿಸೂಚನೆ ಪ್ರಕಟ: ಅನಧಿಕೃತ ಫ್ಲೆಕ್ಸ್, ಹೋರ್ಡಿಂಗ್ ನಿಯಂತ್ರಣ ಕುರಿತ ಪಿಐಎಲ್ಗಳು ಇತ್ಯರ್ಥ
- by Jagan Ramesh
- September 15, 2025
- 13 Views

ಬೆಂಗಳೂರು: ರಾಜ್ಯ ಸರ್ಕಾರ ಪ್ರಕಟಿಸಿರುವ ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಜಾಹೀರಾತುಗಳು) ಬೈಲಾ-2024’ರ ಅಧಿಸೂಚನೆಯನ್ನು ಪರಿಗಣಿಸಿದ ಹೈಕೋರ್ಟ್, ಬೆಂಗಳೂರಿನಲ್ಲಿ ಅಕ್ರಮ ಜಾಹೀರಾತು ಫಲಕಗಳ ಹಾವಳಿ ನಿಯಂತ್ರಣಕ್ಕೆ ಸಂಬಂಧಿಸಿದ ಮೂರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಇತ್ಯರ್ಥಪಡಿಸಿದೆ.
ಕರ್ನಾಟಕ ಬಹಿರಂಗ ಸ್ಥಳಗಳ (ವಿರೂಪ ತಡೆ) ಕಾಯ್ದೆಯಡಿ ಸೂಕ್ತ ನಿಯಮಗಳನ್ನು ರೂಪಿಸಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾರಿಗೊಳಿಸಲು ಕೋರಿ ಬೆಂಗಳೂರಿನ ಮಾಯಿಗೇಗೌಡ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಅನಧಿಕೃತ ಜಾಹೀರಾತು ಫಲಕಗಳ ಹಾವಳಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ದಾಖಲಿಸಿಕೊಂಡಿದ್ದ ಅರ್ಜಿ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಅಳವಡಿಸಿರುವ ಅಕ್ರಮ ಜಾಹೀರಾತು ಹೋರ್ಡಿಂಗ್, ಫ್ಲೆಕ್ಸ್ಗಳನ್ನು ತೆರವುಗೊಳಿಸಲು ನಿರ್ದೇಶನ ಕೋರಿ ರಾಜು ಎಂಬುವರು ಸಲ್ಲಿಸಿದ್ದ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ರಾಜ್ಯ ಸರ್ಕಾರದ ಪರವಾಗಿ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಅವರು, ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಜಾಹೀರಾತುಗಳು) ಬೈಲಾ-2024’ರ ಅಧಿಸೂಚನೆಗೆ ರಾಜ್ಯಪಾಲರು ಅಂಕಿತ ಹಾಕಿದ್ದು, ಆಗಸ್ಟ್ 28ರಂದು ಅಧಿಸೂಚನೆ ಪ್ರಕಟಿಸಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಅರ್ಜಿದಾರರ ಪರ ವಕೀಲ ಜಿ.ಆರ್. ಮೋಹನ್, ಅನಧಿಕೃತ ಜಾಹೀರಾತು ಫಲಕ, ಫ್ಲೆಕ್ಸ್ ಅವಳವಡಿಸುವವರ ವಿರುದ್ಧ ದಂಡನೀಯ ಕ್ರಮ ಕೈಗೊಳ್ಳಲು ಅವಕಾಶವಿರುವ ಬೈಲಾದ 15ನೇ ನಿಯಮವನ್ನು ಜಾರಿಗೊಳಿಸಲು ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ಬೆಂಗಳೂರು ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಿ, ಅರ್ಜಿಗಳನ್ನು ವಿಲೇವಾರಿ ಮಾಡಬಹುದು ಎಂದರು.
ಇದನ್ನು ಪರಿಗಣಿಸಿದ ನ್ಯಾಯಪೀಠ, ಎಲ್ಲರ ವಾದಗಳನ್ನು ದಾಖಲಿಸಿ, ಅರ್ಜಿಗಳನ್ನು ಇತ್ಯರ್ಥಪಡಿಸಿತು.
Related Articles
Thank you for your comment. It is awaiting moderation.
Comments (0)