ರಾಷ್ಟ್ರಗೀತೆ ಕಡೆಗಣನೆ; ಹ್ಯಾರೋ ಇಂಟರ್ನ್ಯಾಷನಲ್ ಶಾಲೆಯ ವಿರುದ್ಧ ವಿದ್ಯಾರ್ಥಿಗಳಿಬ್ಬರಿಂದ ಹೈಕೋರ್ಟ್‌ಗೆ ಅರ್ಜಿ
- by Jagan Ramesh
- October 29, 2025
- 11 Views
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಹ್ಯಾರೋ ಇಂಟರ್ನ್ಯಾಷನಲ್ ಸ್ಕೂಲ್‌ನಲ್ಲಿ ರಾಷ್ಟ್ರಗೀತೆ ಕಡೆಗಣನೆ, ದಸರಾ ರಜೆ ಮೊಟಕು ಸೇರಿ ಹಲವು ಅಹಿತಕರ ಮತ್ತು ಅನುಚಿತ ಸಂಗತಿಗಳು ನಡೆದಿವೆ ಎಂದು ಆರೋಪಿಸಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಶಾಲೆಯಲ್ಲಿ 10 ಮತ್ತು 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಇಬ್ಬರು ವಿದ್ಯಾರ್ಥಿಗಳ ಪರವಾಗಿ ಅವರ ತಂದೆ ಸಹಕಾರ ನಗರ ನಿವಾಸಿ ಅನಿಲ್ ಪಿ. ಮೆಣಸಿನಕಾಯಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಅರ್ಜಿಯಲ್ಲಿರುವ ವಿಷಯ ಹಾಗೂ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ತಂದೆ ತಮ್ಮ ಮಕ್ಕಳ ವಿಚಾರದಲ್ಲಿ ಕೆಟ್ಟ ಸಂಪ್ರದಾಯ ಹಾಕಿಕೊಡುತ್ತಿದ್ದಾರೆ. ಇದು ಅಹಂನ ವಿಚಾರವಾಗಿದೆ. ಇಂದು ರಾಷ್ಟ್ರಗೀತೆ ವಿವಾದ, ನಾಳೆ ಮತ್ತೊಂದು ವಿಚಾರ ಹೇಳಬಹುದು. ತಮ್ಮ ಇಚ್ಚೆಯಂತೆ ಶಾಲೆ ನಡೆಯಬೇಕೆಂದರೆ ಹೇಗೆ? ಸರಿ ಆಗಲ್ಲ ಎಂದರೆ ಬೇರೆ ಶಾಲೆಗೆ ಹೋಗಲಿ. ಪೋಷಕರಿಗೆ ಇದೆಲ್ಲ ಗೊತ್ತಿದ್ದೂ ಈ ರೀತಿ ಮಾಡುತ್ತಿದ್ದಾರೆ. ನಿಮ್ಮ ಕಕ್ಷಿದಾರರಿಗೆ (ಅರ್ಜಿದಾರರಿಗೆ) ಸೂಕ್ತ ಸಲಹೆ ಕೊಡಿ ಎಂದು ವಕೀಲರಿಗೆ ಹೇಳಿತು.
ಅದಕ್ಕೆ ಪ್ರತಿಕ್ರಿಯಿಸಿದ ವಕೀಲರು, ನ್ಯಾಯಾಲಯದ ಭಾವನೆ ಗೊತ್ತಾಗುತ್ತದೆ. ಆದರೆ, ವಿಷಯವೂ ಸಹ ಗಂಭೀರವಾಗಿದೆ. ವಿದ್ಯಾರ್ಥಿಗಳು ಆಕ್ಷೇಪ ಎತ್ತಿದ ಮೇಲೆ ರಾಷ್ಟ್ರಗೀತೆ ಕಡ್ಡಾಯಗೊಳಿಸಲಾಗಿದೆ. ಜತೆಗೆ ದಸರಾ ರಜೆ ದಿನಗಳನ್ನೂ ಹೆಚ್ಚಿಸಲಾಯಿತು. ಇದಲ್ಲದೆ ಇನ್ನೂ ಹಲವು ಅನುಚಿತ ಮತ್ತು ಅಹಿತಕರ ಸಂಗತಿಗಳು ನಡೆದಿವೆ. ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದೆ. ಈ ಬಗ್ಗೆ ಸ್ಥಳೀಯ ಪೊಲೀಸರು ಹಾಗೂ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ಕೊಟ್ಟರೆ, ಆಡಳಿತ ಮಂಡಳಿ ಶಾಲೆಯಿಂದ ಹೊರಹಾಕುವುದಾಗಿ ಮಕ್ಕಳಿಗೆ ಬೆದರಿಕೆ ಹಾಕಿದೆ. ಅರ್ಜಿಯಲ್ಲಿ ಹೇಳಲಾಗಿರುವ ವಿಷಯಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು. ಮಕ್ಕಳಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಸ್ಥಳೀಯ ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಕೋರಿದರು.
ವಾದ ಆಲಿಸಿದ ನ್ಯಾಯಪೀಠ, ರಾಜ್ಯ ಸರ್ಕಾರ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವಿಶ್ವನಾಥಪುರ ಠಾಣೆಯ ಪೋಲಿಸರು ಹಾಗೂ ಶಾಲೆಯ ನಿರ್ದೇಶಕರು ಮತ್ತಿರರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ನವೆಂಬರ್ 26ಕ್ಕೆ ಮುಂದೂಡಿತು.
Related Articles
Thank you for your comment. It is awaiting moderation.


Comments (0)