ಅವಕಾಶವಂಚಿತ ಯುವಜನಾಂಗದ ಶಾಪ ವ್ಯವಸ್ಥೆಗೆ ತಟ್ಟುತ್ತದೆ; ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಹೈಕೋರ್ಟ್ ಆದೇಶ

ಬೆಂಗಳೂರು: ಉದ್ಯೋಗವಂಚಿತರ ಶಾಪ ಇಡೀ ವ್ಯವಸ್ಥೆಗೆ ತಟ್ಟುತ್ತದೆ ಎಂದು ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ನಿರುದ್ಯೋಗ ಸಮಸ್ಯೆ ವ್ಯವಸ್ಥೆಯನ್ನು ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ನಿಧನ, ನಿವೃತ್ತಿ ಮತ್ತಿತರ ಕಾರಣಗಳಿಂದಾಗಿ ಖಾಲಿಯಾಗುವ ಕಾಯಂ ಹುದ್ದೆಗಳನ್ನು ಕಾಲ ಕಾಲಕ್ಕೆ ಭರ್ತಿ ಮಾಡಲು ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದೆ.

ನೇಮಕಾತಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಹಿರಿಯ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಹಾಗೂ ನ್ಯಾ. ವಿಜಯಕುಮಾರ್‌ ಎ. ಪಾಟೀಲ್‌ ಅವರಿದ್ದ ವಿಭಾಗೀಯಪೀಠ ಈ ಆದೇಶ ಮಾಡಿದೆ.

ಸಿಬ್ಬಂದಿಯ ನಿಧನ, ಅಂಗವಿಕಲತೆ, ನಿವೃತ್ತಿ ಅಥವಾ ವಜಾಗೊಳಿಸಿದ ಪ್ರಕರಣಗಳಲ್ಲಿ ಹುದ್ದೆಗಳು ಖಾಲಿಯಾಗುತ್ತವೆ, ಅವುಗಳನ್ನು ಅನಿರ್ದಿಷ್ಟಾವಧಿಗೆ ಖಾಲಿ ಬಿಟ್ಟರೆ ಅದು ಸಾರ್ವಜನಿಕ ಆಡಳಿತದ ಮೇಲೆ ಪರಿಣಾಮ ಬೀರುವ ಜತೆಗೆ ಹಲವು ಅರ್ಹರು ಹುದ್ದೆಗಳಿಂದ ವಂಚಿತರಾಗುತ್ತಾರೆ. ಅವರ ವಯೋಮಿತಿ ಮೀರುತ್ತದೆ ಎಂದು ನ್ಯಾಯಪೀಠ ಕಳವಳ ವ್ಯಕ್ತಪಡಿಸಿದೆ.

ವ್ಯವಸ್ಥೆಗೆ ಶಾಪ ತಟ್ಟುತ್ತದೆ:
ಇತ್ತೀಚಿನ ದಿನಗಳಲ್ಲಿ ಕಾಲ ಕಾಲಕ್ಕೆ ನೇಮಕಾತಿ ಪ್ರಕ್ರಿಯೆ ನಡೆಯದ ಹಿನ್ನೆಲೆಯಲ್ಲಿ ನಿಜಕ್ಕೂ ಉದ್ಯೋಗಕ್ಕೆ ಅರ್ಹರಾಗಿರುವ ಯುವಜನಾಂಗ ತೊಂದರೆ ಎದುರಿಸುವಂತಾಗಿದೆ. ನೇಮಕಾತಿ ಪ್ರಕ್ರಿಯೆ ಮಾಡದಿರುವುದರಿಂದ ಸಂವಿಧಾನ ಖಾತ್ರಿಪಡಿಸಿರುವ ಸಾರ್ವಜನಿಕ ಉದ್ಯೋಗದ ಅವಕಾಶದಿಂದ ಬಹುದೊಡ್ಡ ಸಂಖ್ಯೆಯ ಯುವಜನತೆ ವಂಚಿತವಾಗುತ್ತಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಸಾರ್ವಜನಿಕ ವಲಯದ ಉದ್ಯೋಗಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಕಾಲ ಕಾಲಕ್ಕೆ ಭರ್ತಿ ಮಾಡುವಂತೆ ಹೇಳುವ ಕಾಲ ಬಂದಿದೆ. ಅದರಲ್ಲೂ ವಿಶೇಷವಾಗಿ ನಿರುದ್ಯೋಗ ಸಮಸ್ಯೆ ನಮ್ಮ ವ್ಯವಸ್ಥೆಯನ್ನು ಕಾಡುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಖಾಲಿ ಹುದ್ದೆಗಳಿಗೆ ನಿಯಮಿತವಾಗಿ ಭರ್ತಿ ಮಾಡುವಂತಹ ಕೆಲಸ ಆಗಬೇಕಾಗಿದೆ. ಇಲ್ಲವಾದರೆ, ದೊಡ್ಡ ಸಂಖ್ಯೆಯ ಉದ್ಯೋಗಾಕಾಂಕ್ಷಿ ಯುವಜನತೆಯ ವಯೋಮಿತಿ ಮೀರಿ, ಉದ್ಯೋಗ ವಂಚಿತರಾಗುತ್ತಾರೆ. ಅವರ ಶಾಪ ಇಡೀ ವ್ಯವಸ್ಥೆಗೆ ತಟ್ಟುತ್ತದೆ, ಕಲ್ಯಾಣ ರಾಜ್ಯದಲ್ಲಿ ಇದು ಸಂತಸದ ಸಂಗತಿಯಲ್ಲ ಎಂದು ನ್ಯಾಯಾಲಯ ಆದೇಶಿಸಿದೆ.

ಎಲ್‌ಐಸಿ ಮೇಲ್ಮನವಿ ವಜಾ:
ಎಲ್‌ಐಸಿಯಲ್ಲಿ 2020ರ ಜ.14ರಿಂದ 2022ರ ಜ.14ರ ಅವಧಿಯಲ್ಲಿ ಖಾಲಿಯಾಗಿದ್ದ ಕಾಯಂ ಹುದ್ದೆಗೆ ಧಾರವಾಡದ ಮಾಳಮಡ್ಡಿಯ ಸೌರಭ ಅವರನ್ನು ನೇಮಕ ಮಾಡುವಂತೆ ಹೈಕೋರ್ಟ್‌ ಏಕಸದಸ್ಯಪೀಠ 2024ರ ಫೆ.14ರಂದು ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿ ಎಲ್‌ಐಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿರುವ ಪೀಠ, ಏಕಸದಸ್ಯಪೀಠದ ಆದೇಶ ಎತ್ತಿ ಹಿಡಿದಿದೆ. ಜತೆಗೆ, ಎರಡು ತಿಂಗಳಲ್ಲಿ ಸೌರಭ ಅವರಿಗೆ ಉದ್ಯೋಗ ನೀಡುವಂತೆ ಎಲ್‌ಐಸಿಗೆ ಸೂಚಿಸಿದೆ.

ನ್ಯಾಯಾಲಯಗಳು ಸೂಕ್ತ ಪ್ರಕರಣಗಳನ್ನು ಹೊರತುಪಡಿಸಿದರೆ ಯಾವುದೇ ಸಂದರ್ಭದಲ್ಲಿ ನೇರ ನೇಮಕಾತಿಗೆ ಆದೇಶ ನೀಡುವುದಿಲ್ಲ. ಹೆಚ್ಚೆಂದರೆ ನೇಮಕಕ್ಕೆ ಪರಿಗಣಿಸಿ ಎಂದು ಆದೇಶ ನೀಡುತ್ತದೆಂದು ಹೇಳಿದೆ. ಎಲ್‌ಐಸಿಯು ಸರ್ಕಾರಿ ಒಡೆತನದ ಸಂಸ್ಥೆಯಾಗಿದ್ದು, ಅದು ಮಾದರಿ ಉದ್ಯೋಗದಾತನಂತೆ ನಡೆದುಕೊಳ್ಳಬೇಕು, ಖಾಸಗಿ ಸಂಸ್ಥೆಗಳಂತೆ ಮನಬಂದಂತೆ ವರ್ತಿಸಬಾರದು. ಎಲ್‌ಐಸಿ ನಿಗದಿಯಂತೆ ನೇಮಕ ಪ್ರಕ್ರಿಯೆ ನಡೆಸಬೇಕು. ಅರ್ಜಿದಾರರು ಅರ್ಹರಿದ್ದ ಕಾರಣಕ್ಕೆ ಅವರಿಗೆ ಉದ್ಯೋಗ ನೀಡಲೇಬೇಕಿದೆ ಎಂದು ಹೈಕೋರ್ಟ್ ಆದೇಶಿಸಿದೆ.

Related Articles

Comments (0)

Leave a Comment