ಮಂಗಳೂರು-ಉಡುಪಿ ಸಂಪರ್ಕ ಕಲ್ಪಿಸುವ ಹೆದ್ದಾರಿಗಳನ್ನು ಸುರಕ್ಷಿತ ಸಂಚಾರ ಯೋಗ್ಯವಾಗಿಸಲು ಕ್ರಮ ಕೈಗೊಳ್ಳಿ; ಎನ್‌ಎಚ್ಎಐಗೆ ಹೈಕೋರ್ಟ್ ನಿರ್ದೇಶನ
- by Jagan Ramesh
- October 17, 2025
- 11 Views

ಬೆಂಗಳೂರು: ಕರಾವಳಿ ಕರ್ನಾಟಕ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ-66 ಹಾಗೂ 275 (ಮಂಗಳೂರು-ಉಡುಪಿ ನಡುವಿನ ಪ್ರದೇಶ) ಇತರ ಮುಖ್ಯ ರಸ್ತೆಗಳಲ್ಲಿ ಸುರಕ್ಷಿತ ಹಾಗೂ ವಾಹನ ಸಂಚಾರ ಯೋಗ್ಯ ರಸ್ತೆಗಳ ನಿರ್ವಹಣೆಗಾಗಿ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಮತ್ತಿತರ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಮಂಗಳೂರಿನ ವಕೀಲ ಎಸ್. ಆಕಾಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು ಶುಕ್ರವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠದ ಈ ನಿರ್ದೇಶನ ನೀಡಿತು.
ವಿಚಾರಣೆ ವೇಳೆ ವಾದ ಮಂಡಿಸಿದ ವಕೀಲ ಆಕಾಶ್, ಅರ್ಜಿಯಲ್ಲಿ ಉಲ್ಲೇಖಿಸಲಾದ ಕರಾವಳಿ ಭಾಗದ ಹೆದ್ದಾರಿಗಳಲ್ಲಿನ ರಸ್ತೆಗಳು ಅತ್ಯಂತ ದುಸ್ಥಿತಿಯಲ್ಲಿವೆ. ರಸ್ತೆಗಳಲ್ಲಿರುವ ಭಾರಿ ಗುಂಡಿಗಳ ಪರಿಣಾಮದಿಂದ ಮೇಲಿಂದ ಮೇಲೆ ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಕಳೆದ ಸೆಪ್ಟೆಂಬರ್ 9ರಂದು ಸಂಭವಿಸಿದ ಅಪಘಾತದಲ್ಲಿ ಯುವತಿಯೊಬ್ಬರು ಮೃತಪಟ್ಟಿದ್ದಾರೆ. ಯಾವುದಾದರೂ ಸಾವು ಸಂಭವಿಸಿದಾಗಷ್ಟೇ ಸಂಬಂಧಪಟ್ಟ ಪ್ರಾಧಿಕಾರಗಳು ರಸ್ತೆಗುಂಡಿ ಮುಚ್ಚುವ ಕೆಲಸ ಮಾಡುತ್ತವೆ ಎಂದರು.
ಅರ್ಜಿದಾರರು ಪ್ರಸ್ತಾಪಿಸಿದ ಅಂಶಗಳನ್ನು ಪರಿಣಗಿಸಿದ ನ್ಯಾಯಪೀಠ, ಅರ್ಜಿದಾರರ ಮನವಿಗಳನ್ನು ಪರಿಶೀಲಿಸಿ, ಅವುಗಳನ್ನು ಪರಿಗಣಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ನಿರ್ದೇಶಿಸಿ ಪಿಐಎಲ್ ವಿಲೇವಾರಿ ಮಾಡಿತು.
ಅರ್ಜಿದಾರರ ಮನವಿ:
ರಾಷ್ಟ್ರೀಯ ಹೆದ್ದಾರಿ-66, ರಾಷ್ಟ್ರೀಯ ಹೆದ್ದಾರಿ-275 ಮತ್ತು ಕರಾವಳಿ ಕರ್ನಾಟಕದ ಇತರ ಮುಖ್ಯ ರಸ್ತೆಗಳು ದುಸ್ಥಿತಿಯಲ್ಲಿವೆ. ಅವುಗಳನ್ನು ಸುರಕ್ಷಿತ, ವಾಹನ ಸಂಚಾರ ಯೋಗ್ಯವಾದ ಹಾಗೂ ವೈಜ್ಞಾನಿಕವಾಗಿ ನಿರ್ವಹಿಸಲ್ಪಟ್ಟ ರಸ್ತೆಗಳನ್ನಾಗಿ ಮಾಡುವಲ್ಲಿ ಎನ್‌ಎಚ್ಎಐ ಸೇರಿ ಎಲ್ಲ ಪ್ರತಿವಾದಿಗಳು ನಿರಂತರ ನಿಷ್ಕ್ರಿಯತೆ ತೋರುತ್ತಿದ್ದಾರೆ. ಇಂತಹ ನಿರ್ಲಕ್ಷ್ಯವು ಭಾರತೀಯ ಸಂವಿಧಾನದ ಪರಿಚ್ಛೇದ 19(1)(ಡಿ) ಮತ್ತು 21ರ ಅಡಿಯಲ್ಲಿ ಖಾತ್ರಿಪಡಿಸಲಾದ ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿತ್ತು.
ಪ್ರತಿವಾದಿಗಳು ರಸ್ತೆ ಅಭಿವೃದ್ಧಿ ಯೋಜನೆಯ ಕೈಗೆತ್ತಿಕೊಂಡಿರುವವರು ಮತ್ತು ಗುತ್ತಿಗೆದಾರರು, ಕ್ಯಾರೇಜ್‌ವೇಗಳು, ಸೇವಾ ರಸ್ತೆಗಳು, ಕಲ್ವರ್ಟ್‌ಗಳು, ಮೀಡಿಯನ್‌ಗಳು, ಪಾದಚಾರಿ ಕ್ರಾಸಿಂಗ್‌ಗಳು ಮತ್ತು ಸಂಬಂಧಿತ ಮೂಲಸೌಕರ್ಯಗಳನ್ನು ದೀರ್ಘಕಾಲ ಬಾಳಿಕೆ ಬರುವಂತೆ ವೈಜ್ಞಾನಿಕ ರೀತಿಯಲ್ಲಿ ಮತ್ತು ಶಾಶ್ವತ ದುರಸ್ತಿ ಮಾಡುತ್ತಿಲ್ಲ. ಅವುಗಳ ನಿರ್ವಹಣೆಗೆ ಕಟ್ಟುನಿಟ್ಟಾಗಿ ಸೂಕ್ತ ಮಾನದಂಡಗಳು ಮತ್ತು ಉತ್ತಮ ಇಂಜಿನಿಯರಿಂಗ್ ಪದ್ದತಿಗಳನ್ನು ಪಾಲನೆ ಮಾಡುತ್ತಿಲ್ಲ. ಆದ್ದರಿಂದ, ಎಲ್ಲ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ನಿಯಮಗಳನ್ನು ಪಾಲನೆಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಅರ್ಜಿದಾರರು ಮನವಿ ಮಾಡಿದ್ದರು.
ಪರಿಣಾಮಕಾರಿ ರಸ್ತೆ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಲು, ಬ್ಲ್ಯಾಕ್ ಸ್ಪಾಟ್‌ಗಳು ಮತ್ತು ಅಪಘಾತ ಬಾಧಿತ ವಲಯಗಳನ್ನು ಗುರುತಿಸಲು ಮತ್ತು ಸರಿಪಡಿಸಲು, ಪಾರದರ್ಶಕ ಮತ್ತು ಸುಲಭವಾಗಿ ದೂರು ನೀಡುವ ವ್ಯವಸ್ಥೆಯ ಮೂಲಕ ಸಾರ್ವಜನಿಕ ಕುಂದುಕೊರತೆ ಪರಿಹಾರವನ್ನು ಖಾತ್ರಿಪಡಿಸಿಕೊಳ್ಳಲು, ಟೋಲ್ ಗುತ್ತಿಗೆದಾರರು ಮತ್ತು ಲೋಪಗಳಿಗೆ ಕಾರಣರಾದ ಅಧಿಕಾರಿಗಳ ಹೊಣೆಗಾರಿಕೆಯನ್ನು ಸರಿಪಡಿಸಲು, ಹಾನಿ ಮತ್ತು ದಂಡಗಳ ವಸೂಲಿ ಸೇರಿ ನ್ಯಾಯಾಲಯದ ಮೇಲ್ವಿಚಾರಣೆಯ ಕಾರ್ಯವಿಧಾನವನ್ನು ಜಾರಿಗೆ ತರಲು ಪ್ರತಿವಾದಿಗಳಿಗೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿತ್ತು.
Related Articles
Thank you for your comment. It is awaiting moderation.
Comments (0)